ಡಾ.ಪಿ.ನಂದಕುಮಾರ್ ರಚಿತ “ಕಾಲದ ಕಟ್ಟಳೆ ಮೀರಿ” ವಿಮರ್ಶಾ ಕೃತಿಯ ಬಿಡುಗಡೆ ಕಾರ್ಯಕ್ರಮವು ಬೆಂಗಳೂರು ಕೌದಿ ಪ್ರಕಾಶನ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವವಿದ್ಯಾಲಯದ ಹರಿಹರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ದಲಿತ ಸಂಘರ್ಷ ಸಮಿತಿಯ ಹಿರಿಯ ಹೋರಾಟಗಾರ ಡಾ. ಡಿ.ಜಿ. ಸಾಗರ ಪ್ರಾಸ್ತಾವಿಕವಾಗಿ ಮಾತನಾಡಿ, “ದೇಶದಲ್ಲಿ ಜಾತಿ ಅಸಮಾನತೆ ಇನ್ನೂ ಗಟ್ಟಿಯಾಗಿ ಬೇರೂರಿದ್ದು, ದಲಿತ ಸಮುದಾಯದ ಹೋರಾಟಗಳು ನಿರಂತರವಾಗಿ ಸಾಗುತ್ತಿವೆ. ಸಮಾಜದಲ್ಲಿನ ಶೋಷಣೆಯ ವಿರುದ್ಧ ದಲಿತ ಚಳುವಳಿಗಳು ಪ್ರಮುಖ ಪಾತ್ರ ವಹಿಸಿದ್ದು, ಪ್ರತಿಯೊಬ್ಬ ನಾಗರಿಕನಿಗೂ ತನ್ನ ಆಚಾರ-ವಿಚಾರಗಳನ್ನು ಕಾಪಾಡಿಕೊಳ್ಳುವ ಸಂವಿಧಾನಬದ್ಧ ಹಕ್ಕು ದೊರೆಯಬೇಕು” ಎಂದರು.

“ಬರವಣಿಗೆ ಮತ್ತು ಚಳುವಳಿ ಒಂದಕ್ಕೊಂದು ಪೂರಕವಾಗಿದ್ದು, ಬರವಣಿಗೆಯಿಲ್ಲದೆ ಚಳುವಳಿಗಳು ಅಪೂರ್ಣವಾಗುತ್ತವೆ ಹಾಗೂ ಚಳುವಳಿಗಳಿಲ್ಲದೆ ಬರವಣಿಗೆಗೆ ಅರ್ಥವಿಲ್ಲ. ಯುವ ಹೋರಾಟಗಾರರು ಪ್ರಾಮಾಣಿಕತೆ, ಸೈದ್ಧಾಂತಿಕ ಬದ್ಧತೆ ಹಾಗೂ ಸಾಮಾಜಿಕ ಕಾಳಜಿಯನ್ನು ಬೆಳೆಸಿಕೊಳ್ಳಬೇಕು. ಎಸ್‌ಐಆರ್ ಪ್ರಕ್ರಿಯೆ ಮೂಲಕ ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಅಸಂವಿಧಾನಿಕ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃತಿಯ ಕುರಿತು ಲೇಖಕ ಅರುಣಕುಮಾರ ಜೋಳದಕೂಡ್ಲಿಗಿ ಮಾತನಾಡಿ, “ಕಾಲದ ಕಟ್ಟಳೆ ಮೀರಿ” ಕೃತಿ ಸಾಮಾಜಿಕ ಹೋರಾಟ ಮತ್ತು ಶೈಕ್ಷಣಿಕ ಅಧ್ಯಯನವನ್ನು ಸಮನ್ವಯಗೊಳಿಸುವ ವಿಶಿಷ್ಟ ಕೃತಿಯಾಗಿದೆ. ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಈ ಕೃತಿ ಮಾರ್ಗದರ್ಶಿಯಾಗಲಿದ್ದು, ದಲಿತ ಚಳುವಳಿಯ ನಾಯಕತ್ವ, ಆತ್ಮಕಥನ, ವರ್ತಮಾನ ಮತ್ತು ಸಾಮಾಜಿಕ ಹೋರಾಟಗಳ ವಿವಿಧ ಆಯಾಮಗಳನ್ನು ದಾಖಲಿಸಿದೆ. ಉತ್ತಮ ವಿಮರ್ಶೆಗೆ ಆಳವಾದ ಅಧ್ಯಯನ ಅಗತ್ಯವಾಗಿದ್ದು, ಸಾಹಿತ್ಯವು ಸಮಾಜ ಪರಿವರ್ತನೆಯ ಸಾಧನವಾಗಬೇಕು” ಎಂದು ಅಭಿಪ್ರಾಯಪಟ್ಟರು.

ಕೃತಿಕಾರ ಡಾ. ಪಿ. ನಂದಕುಮಾರ್ ಮಾತನಾಡಿ, “ಈ ನೆಲದ ಚಳುವಳಿಗಳ ಇತಿಹಾಸವನ್ನು ದಾಖಲಿಸುವುದು ಅಗತ್ಯವಾಗಿದೆ. ಸಮಾಜದ ಅಭಿವೃದ್ಧಿಗೆ ಅಡ್ಡಿಯಾಗುವ ಕಾಲದ ಕಟ್ಟಳೆಗಳನ್ನು ಮೀರಿ ಹೊಸ ಚಿಂತನೆಗಳನ್ನು ಬೆಳೆಸಬೇಕಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಮಾತನಾಡಿ, “ದಲಿತ ಚಳುವಳಿಯ ಪ್ರಜ್ಞೆಯನ್ನು ಸಮಾಜದಲ್ಲಿ ಬೆಳೆಸಿದ ಮಹನೀಯರ ವಿಚಾರಗಳನ್ನು ಅಧ್ಯಯನ ಮಾಡುವುದು ಇಂದಿನ ಅಗತ್ಯವಾಗಿದೆ. ದಲಿತ ಸಂಘರ್ಷ ಸಮಿತಿಯು ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಅನುಸರಿಸುವ ಅಗತ್ಯವಿದೆ” ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಅಮೃತರಾವ್ ಹಿರೇಮನಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ವಿಕ್ರಮ್ ವಿಸಾಜಿ, ಡಾ.ಕಿರಣ ಗಾನಜೂರು, ಸಾಹಿತಿ ಡಾ.ಸೂರ್ಯಕಾಂತ ಸುಜ್ಯಾತ, ಶ್ರೀಶೈಲ ನಾಗರಾಳ, ಸಿಂಡಿಕೇಟ್ ಸದಸ್ಯ ಎಸ್.ಪಿ.ಸುಳ್ಳದ್, ಅಶೋಕ ಅಂಬಲಿಗಿ, ಎಚ್. ಶಂಕರ, ಬಿ.ಸಿ. ವಾಲಿ, ಅಂಬಣ್ಣ ಜೀವಣಗಿ, ದತ್ತಾತ್ರೇಯ ಇಕ್ಕಳಕಿ, ಸುರೇಶ ಹಾದಿಮನಿ ಸೇರಿದಂತೆ ಹಲವಾರು ಗಣ್ಯರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದನ್ನು ಓದಿದ್ದೀರಾ? ಕಲಬುರಗಿ | ಮುಖ್ಯಮಂತ್ರಿ ಆಗಮನ ಹಿನ್ನೆಲೆ ಸಿದ್ಧತೆಯಲ್ಲಿ ಯಾವುದೇ ಲೋಪವಾಗದಂತೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ
ಡಾ.ಎಂ.ಬಿ.ಕಟ್ಟಿ ಸ್ವಾಗತಿಸಿದರು. ಡಾ.ಕಿರಣ ವಲ್ಲೇಪುರಿ ಕಾರ್ಯಕ್ರಮ ನಿರೂಪಿಸಿದರು. ಸಿದ್ದಾರ್ಥ ಚಿಮ್ಮ ಇದಲಾಯಿ ಕ್ರಾಂತಿಗೀತೆ ಹಾಡಿದರು. ರಾಹುಲ್ ವಂದನಾರ್ಪಣೆ ಸಲ್ಲಿಸಿದರು.





