ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ಪಟ್ಟಣ
ಪಂಚಾಯಿತಿ ಕುಡಿಯುವ ನೀರಿನ ಸಂಪರ್ಕವನ್ನು ಸ್ಥಗಿತಗೊಳಿಸಿರುವ ಕ್ರಮದಿಂದ ಮನನೊಂದ ದಂಪತಿ, ತಮಗೆ ದಯಾಮರಣ ನೀಡುವಂತೆ ಕೋರಿ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ತಹಶೀಲ್ದಾರ್ ಕಲಗೌಡ ಪಾಟೀಲ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.
ಪಟ್ಟಣದ ಗುರುವಾರ ಪೇಟೆಯ ನಿವಾಸಿಗಳಾದ ಮಂಜುನಾಥ ಸವದಿ ಹಾಗೂ ಶ್ರುತಿ ಸವದಿ ಮನವಿ ಸಲ್ಲಿಸಿದ ದಂಪತಿ.
“ನಲ್ಲಿಯ ಬಿಲ್ ಅನ್ನು ಯಾವುದೇ ಬಾಕಿ ಉಳಿಯದಂತೆ ಪಾವತಿಸಿದ್ದರೂ, ಕುಟುಂಬದ ಜಗಳದಲ್ಲಿ ಮಧ್ಯಪ್ರವೇಶಿಸಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ಕುಡಿಯುವ ನೀರಿನ ಸಂಪರ್ಕವನ್ನು ಸ್ಥಗಿತಗೊಳಿಸಿದ್ದಾರೆ. ಮೂಲಭೂತ ಸೌಲಭ್ಯವಾದ ಕುಡಿಯುವ ನೀರನ್ನು ಸ್ಥಗಿತಗೊಳಿಸಿರುವುದು ನ್ಯಾಯಸಮ್ಮತವಲ್ಲ” ಎಂದು ಶ್ರುತಿ ಸವದಿ ಆರೋಪಿಸಿದ್ದಾರೆ.
ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯವನ್ನು ಸ್ಥಗಿತಗೊಳಿಸಿರುವುದರಿಂದ ನಮ್ಮ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ನಿರಂತರ ಕಿರುಕುಳದಿಂದ ಬದುಕುವ ಆಸೆಯೇ ಕಮರಿಹೋಗಿದೆ. ಹೀಗಾಗಿ ನಮಗೆ ದಯಾಮರಣ ನೀಡಬೇಕು” ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.



