ಪೌರಕಾರ್ಮಿಕರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಆ.23ರಂದು ಜೇವರ್ಗಿಗೆ ಆಗಮಿಸಲಿರುವ ಸಚಿವರು ಹಾಗೂ ಶಾಸಕ ಡಾ. ಅಜಯಸಿಂಗ್ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಜೇವರ್ಗಿ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದ 16 ಪೌರಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಈ ಹೋರಾಟ ನಡೆಸಲಾಗುತ್ತಿದೆ. ವಜಾಗೊಂಡ ಪೌರಕಾರ್ಮಿಕರು ಕಳೆದ 130 ದಿನಗಳಿಂದ ಜೇವರ್ಗಿಯ ಮಿನಿ ವಿಧಾನಸೌಧದ ಎದುರು ಧರಣಿ ನಡೆಸುತ್ತಿದ್ದಾರೆ. ಮಳೆ, ಬಿಸಿಲು ಲೆಕ್ಕಿಸದೆ ಸುದೀರ್ಘ ಹೋರಾಟ ನಡೆಸುತ್ತಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಮುಖಂಡರು ಆರೋಪಿಸಿದ್ದಾರೆ.
ಈ ಹಿಂದೆ ಶಾಸಕರ ಮನೆ ಮುಂದೆ ಹಾಗೂ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಶಾಸಕರು ಮತ್ತು ಅಧಿಕಾರಿಗಳು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೆ ಭರವಸೆ ಈಡೇರಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆ.23ರಂದು ಸಚಿವರು ಹಾಗೂ ಶಾಸಕ ಡಾ. ಅಜಯಸಿಂಗ್ ಜೇವರ್ಗಿಗೆ ಆಗಮಿಸುವ ಸಂದರ್ಭದಲ್ಲಿ ನಡೆಯುವ ಸ್ವಾಗತ ಹಾಗೂ ಮೆರವಣಿಗೆ ವೇಳೆ ಕಪ್ಪು ಬಾವುಟ ಪ್ರದರ್ಶಿಸಲು ವಿವಿಧ ಕನ್ನಡಪರ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಸಿದ್ಧತೆ ಮಾಡಿಕೊಂಡಿವೆ.
ಇದನ್ನು ಓದಿದ್ದೀರಾ? ಕಲಬುರಗಿ | ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ಮಾದರಿ ವೇತನ ನೀಡಬೇಕು: ಷಡಾಕ್ಷರಿ
ಪ್ರತಿಭಟನೆಯ ಸಿದ್ಧತೆ ಕುರಿತು ನಡೆದ ಸಭೆಯಲ್ಲಿ ಇಬ್ರಾಹಿಂ ಪಟೇಲ್ ಯಾಳವಾರ, ಮಹೇಶ್ ಕುಮಾರ್ ರಾಠೋಡ್, ಸಿದ್ರಾಮ್ ಕಟ್ಟಿ, ಶ್ರೀಹರಿ ಕರಕಿಹಳ್ಳಿ, ಬಾಬು ಪಾಟೀಲ್, ಸಿದ್ದು ಕೆರೂರ್, ಭೀಮಾಶಂಕರ, ಪರಮೇಶ್ವರ, ಮೈನೋದ್ದೀನ್ ಸೇರಿದಂತೆ ಜೇವರ್ಗಿ ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.





