ಜಾತಿ, ಧರ್ಮಗಳ ಎಲ್ಲ ಭೇದಭಾವಗಳನ್ನು ಮರೆತು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸಹಬಾಳ್ವೆಯ ಮೂಲಕ ಸಮಾಜದಲ್ಲಿ ಭಾವೈಕ್ಯತೆ ಬೆಳೆಸುವ ಆಶಯದೊಂದಿಗೆ ವಿಜಯಪುರ ನಗರದ ಸಂತ ಅನ್ನಮ್ಮನವರ ದೇವಾಲಯದ ಸಭಾಂಗಣದಲ್ಲಿ ಸರ್ವಧರ್ಮೀಯ ಅಂತರಧರ್ಮೀಯ ದೀಪಾವಳಿ ಆಚರಣೆ ನಡೆಯಿತು.
ಅನೌಪಚಾರಿಕ ಶಿಕ್ಷಣ ಸಂಸ್ಥೆ, ಬಿಜಾಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಹಾಗೂ ನಗರ ಸ್ಲಂ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಕೆವಿನ್ ಸಿಕ್ಕೇರಾ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಬ್ಬಗಳು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ ಮನುಷ್ಯರನ್ನು ಪರಸ್ಪರ ಬೆಸೆಯುವ, ಪ್ರೀತಿ ಮತ್ತು ಸೌಹಾರ್ದವನ್ನು ಹಂಚುವ ವೇದಿಕೆಗಳಾಗಬೇಕು. ಜಾತಿ-ಧರ್ಮಗಳ ಭೇದ ಮರೆತು ಎಲ್ಲರೂ ಒಗ್ಗಟ್ಟಿನಿಂದ ಹಬ್ಬಗಳನ್ನು ಆಚರಿಸುವ ಮೂಲಕ ಸಾಮಾಜಿಕ ಸಾಮರಸ್ಯವನ್ನು ಬೆಳೆಸಬೇಕು. ಇಂದಿನ ಸಮಾಜದಲ್ಲಿ ಧರ್ಮಗಳ ನಡುವೆ ಅಂತರ ಸೃಷ್ಟಿಸುವ ಪ್ರಯತ್ನಗಳ ಬದಲಾಗಿ ಜನರನ್ನು ಒಗ್ಗೂಡಿಸುವ ಇಂತಹ ಸೌಹಾರ್ದ ಕಾರ್ಯಕ್ರಮಗಳ ಅಗತ್ಯ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸ ನೀಡಿದ ಶಿಕ್ಷಕ ಹಾಗೂ ರಾಷ್ಟ್ರೀಯ ಬಸವ ಭೂಷಣ ಪ್ರಶಸ್ತಿ ಪುರಸ್ಕೃತ ಮೆಹತಾಬ ಕಾಗವಾಡ ಅವರು, ಪ್ರತಿಯೊಂದು ಹಬ್ಬವೂ ತನ್ನದೇ ಆದ ಸಾಂಸ್ಕೃತಿಕ ಮತ್ತು ಸಾಮಾಜಿಕ ಮಹತ್ವ ಹೊಂದಿದೆ. ಧರ್ಮಗಳು ಬೇರೆಬೇರೆಯಾಗಿದ್ದರೂ ಮಾನವೀಯ ಮೌಲ್ಯಗಳು ಎಲ್ಲರನ್ನೂ ಒಂದಾಗಿಸುತ್ತವೆ. ಪರಸ್ಪರ ಸಹಕಾರ, ಪ್ರೀತಿ ಮತ್ತು ಸೌಹಾರ್ದದಿಂದ ಹಬ್ಬಗಳನ್ನು ಆಚರಿಸುವ ಮನೋಭಾವ ಸಮಾಜದಲ್ಲಿ ಗಟ್ಟಿಯಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಂದನೀಯ ಸ್ವಾಮಿ ಸುನೀಲ್ ಪನಾರ್ಡಿಸ್ ಮಾತನಾಡಿ, ಯುವಜನರಲ್ಲಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಬೆಳೆಯುತ್ತಿರುವ ಭೇದಭಾವವನ್ನು ನಿವಾರಿಸಲು ಇಂತಹ ಅಂತರಧರ್ಮೀಯ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ಯುವಕರು ಸೌಹಾರ್ದತೆಯ ಸಂದೇಶವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಜತೆಗೆ ಇಂತಹ ಕಾರ್ಯಕ್ರಮಗಳ ಆಯೋಜನೆಯಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಗರದ ವಿವಿಧ ಸ್ಲಂಗಳ ಸುಮಾರು 200 ಜನರು ಪಾಲ್ಗೊಂಡು ಸರ್ವಧರ್ಮೀಯ ಸೌಹಾರ್ದತೆಯ ಸಂದೇಶ ಸಾರಿದರು. ಸ್ಲಂ ಅಭಿವೃದ್ಧಿ ಸಮಿತಿ ಹಾಗೂ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಸರೋಜಾ ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿದರು. ಮಹಾದೇವಿ ರಾಠೋಡ ಸ್ವಾಗತಿಸಿದರು. ರವಿ ಕಟ್ಟಿಮನಿ ವಂದಿಸಿದರು.



