ಭ್ರಷ್ಟಾಚಾರದಿಂದ ದೂರವಿದ್ದು, ಯುವಜನತೆ ಮಾನವೀಯತೆ ಹಾಗೂ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕರೆ ನೀಡಿದರು.
ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಮಾನಸ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಜೈಲಿಗೆ ಹೋಗಿ ಬಂದವರಿಗೂ ಜೈಕಾರ ಹಾಕುವಂತಹ ಸ್ಥಿತಿ ಸಮಾಜದಲ್ಲಿದೆ. ಅಧಿಕಾರ ಮತ್ತು ಹಣಕ್ಕೆ ಗೌರವ ಹೆಚ್ಚಾಗುತ್ತಿದ್ದು, ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ ಎಂದು ವಿಷಾದಿಸಿದರು.
ಪ್ರಾಮಾಣಿಕವಾಗಿ ಸಂಪಾದಿಸಿ, ಅಗತ್ಯಕ್ಕಿಂತ ಹೆಚ್ಚಿರುವ ಸಂಪತ್ತನ್ನು ಸಮಾಜದ ಒಳಿತಿಗೆ ಬಳಸಿದಾಗ ಮಾತ್ರ ನಿಜವಾದ ನೆಮ್ಮದಿ ಸಿಗುತ್ತದೆ. ವಿದ್ಯಾರ್ಥಿಗಳು ಐಫೋನ್ ಸಂಸ್ಕೃತಿಗಿಂತ ನೈತಿಕ ಮೌಲ್ಯಗಳಿಗೆ ಆದ್ಯತೆ ನೀಡಬೇಕು. ಸರ್ಕಾರಿ ಹುದ್ದೆಗಳನ್ನು ಹಣ ನೀಡಿ ಪಡೆಯುವ ಪ್ರವೃತ್ತಿ ಪ್ರಾಮಾಣಿಕ ಆಡಳಿತಕ್ಕೆ ಸವಾಲಾಗಿದೆ ಎಂದರು.
ಈ ತನಿಖಾ ವರದಿ ಓದಿದ್ದೀರಾ? ತನಿಖಾ ವರದಿ | ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಬದಲಾವಣೆ ಸುತ್ತ ರಾಜಕೀಯ: ಆದೇಶವಿಲ್ಲದೆ ನೇಮಕದ ಸುದ್ದಿ ಹರಡಿದ್ದೇಕೆ?
ಮಾನಸ ಪ್ರಶಸ್ತಿಯೊಂದಿಗೆ ನೀಡಿದ ನಗದನ್ನು ಸಾಲೂರು ಮಠದ ಶಿಕ್ಷಣ ಸಂಸ್ಥೆಯ ಮಕ್ಕಳ ಕಲ್ಯಾಣಕ್ಕೆ ನೀಡುವುದಾಗಿ ತಿಳಿಸಿದರು.
ಈ ವಿಶೇಷ ಲೇಖನ ಓದಿದ್ದೀರಾ? ಆರ್‌ಟಿಇ ಶಿಕ್ಷಣ ಹಕ್ಕೋ, ಶಾಲೆಗಳಲ್ಲಿನ ಸಾಮಾಜಿಕ ಅಂತರಕ್ಕೆ ಕಾರಣವೋ?
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಭ್ರಷ್ಟಾಚಾರದ ನಡುವೆ ಕಳಂಕರಹಿತವಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ ಸಂತೋಷ್ ಹೆಗ್ಡೆ ಅವರನ್ನು ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ. ಮೂರು ದಶಕಗಳಿಂದ ಗ್ರಾಮೀಣ ಪ್ರದೇಶದಲ್ಲಿ ಮಾನಸ ಶಿಕ್ಷಣ ಸಂಸ್ಥೆ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.



