ಪೌರಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಭಾನುವಾರ ಜೇವರ್ಗಿಗೆ ಆಗಮಿಸಿದ್ದ ರಾಜ್ಯದ ಸಣ್ಣ ನೀರಾವರಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಹಾಗೂ ಶಾಸಕ ಡಾ. ಅಜಯಸಿಂಗ್ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಯಿತು.
ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಜೇವರ್ಗಿಗೆ ಆಗಮಿಸಿದ್ದ ಸಚಿವ ಡಾ. ಅಜಯ್ ಸಿಂಗ್ ಅವರು ಪಟ್ಟಣದ ಹೊರವಲಯದ ಪ್ರವಾಸಿ ಮಂದಿರದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಪೌರಕಾರ್ಮಿಕರು ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖಂಡರು ಸಚಿವರ ಗಮನಕ್ಕೆ ತಂದರು. ಈ ಹಿಂದೆ ನೀಡಿದ್ದ ಭರವಸೆಗಳು ಈಡೇರಿಲ್ಲ ಎಂದು ಆರೋಪಿಸಿ, ಬಾಕಿ ಇರುವ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿದರು.
ಜೇವರ್ಗಿ ಪುರಸಭೆಯ 23 ವಾರ್ಡ್‌ಗಳಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದ 16 ಪೌರಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಹೋರಾಟ ನಡೆಸಲಾಗುತ್ತಿದೆ. ವಜಾಗೊಂಡ ಪೌರಕಾರ್ಮಿಕರು ಕಳೆದ 130 ದಿನಗಳಿಂದ ಮಿನಿ ವಿಧಾನಸೌಧದ ಎದುರು ಧರಣಿ ನಡೆಸುತ್ತಿದ್ದಾರೆ. ಮಳೆ, ಬಿಸಿಲು ಲೆಕ್ಕಿಸದೆ ಸುದೀರ್ಘ ಹೋರಾಟ ನಡೆಸುತ್ತಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

16 ಪೌರಕಾರ್ಮಿಕರನ್ನು ಕೂಡಲೇ ಸೇವೆಗೆ ಮರುನೇಮಕ ಮಾಡಬೇಕು, ಕೆಲಸ ಮಾಡಿದ ಅವಧಿಯ ಬಾಕಿ ವೇತನ ಪಾವತಿಸಬೇಕು, ಅವರ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಬೇಕು ಹಾಗೂ ಪೌರಕಾರ್ಮಿಕರಿಗೆ ಅನ್ಯಾಯ ಮಾಡಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಆಗ್ರಹಿಸಿದರು.
ಪೌರಕಾರ್ಮಿಕರನ್ನು ಮರಳಿ ಸೇವೆಗೆ ಸೇರಿಸುವ ಕುರಿತು ಸಚಿವರೊಂದಿಗೆ ಸಂಧಾನ ಸಭೆಯನ್ನೂ ನಡೆಸಲಾಯಿತು. ಆದರೆ ಪ್ರಮುಖ ಬೇಡಿಕೆಗಳಿಗೆ ಸಚಿವರಿಂದ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಸಂಧಾನ ಸಭೆ ವಿಫಲವಾಯಿತು ಎಂದು ಮುಖಂಡರು ತಿಳಿಸಿದರು.
ಸಭೆಯ ಬಳಿಕ ಪ್ರತಿಭಟನಾಕಾರರು ಸಚಿವರ ವಾಹನಕ್ಕೆ ಘೇರಾವ್ ಹಾಕಿ ಕಪ್ಪು ಬಾವುಟ ಹಾಗೂ ಕಪ್ಪು ಬಟ್ಟೆ ಪ್ರದರ್ಶಿಸಿದರು. ಸರ್ಕಾರ ಹಾಗೂ ಸ್ಥಳೀಯ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೌರಕಾರ್ಮಿಕರ ಜೊತೆಗೆ ರೈತರ ಸಮಸ್ಯೆಗಳಿಗೂ ಸರ್ಕಾರ ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಪೌರಕಾರ್ಮಿಕರ ನ್ಯಾಯಯುತ ಬೇಡಿಕೆಗಳು ಈಡೇರುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಎಚ್ಚರಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಬಿಜೆಪಿಗೆ ಸೋಲಿನ ಭೀತಿ ಶುರುವಾಗಿದೆ: ಪ್ರಕಾಶ್ ರಾಜ್
ಪ್ರತಿಭಟನೆಯಲ್ಲಿ ಮಹೇಶ್ ರಾಠೋಡ್, ಇಬ್ರಾಹಿಂ ಪಟೇಲ್ ಯಾಳವಾರ, ಮಹಾಂತಗೌಡ ನಂದಿಹಳ್ಳಿ, ರಾಜಾ ಪಟೇಲ್, ಅಜೀಶ್ ಪಟೇಲ್, ಸಿದ್ದರಾಮ ಕಟ್ಟಿ, ಸಿದ್ದು ಕೇರೂರು, ಪುಂಡಲೀಕ್ ಗಾಯಕ್ವಾಡ್, ಬಾಬು ಪಾಟೀಲ್, ಹಬೀಬ್ ಜಾಮದಾರ್, ಶ್ರೀಹರಿ ಕರ್ಕೆಳಿ, ಭೀಮಾಶಂಕರ, ಅಬ್ದುಲ್ ಘನಿ, ಪರಮೇಶ್ವರ, ಮೈನೋದ್ದೀನ್ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.





