ಕೇಂದ್ರ ಸರ್ಕಾರ ಬಿಟ್‌ಚಾಟ್ ಓಪನ್ ಸೋರ್ಸ್ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ನಿರ್ಬಂಧಿಸಿರುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಖಂಡಿಸಿದ್ದು, ನಿರ್ಬಂಧವನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿದೆ.
ಈ ಕುರಿತು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಗುರುವಾರ ಪ್ರಕಟಣೆ ಹೊರಡಿಸಿದ ಅವರು, ಬಿಟ್‌ಚಾಟ್ ಮೇಲಿನ ನಿರ್ಬಂಧವು ಸಂವಿಧಾನ ವಿರೋಧಿ ಹಾಗೂ ಸರ್ವಾಧಿಕಾರಿ ಕ್ರಮವಾಗಿದೆ ಎಂದು ಆರೋಪಿಸಿದ್ದಾರೆ.
ಬಿಟ್‌ಚಾಟ್ ನಿರ್ಬಂಧ ಕುರಿತು ಕೇಂದ್ರ ಸರ್ಕಾರ ಯಾವುದೇ ಅಧಿಕೃತ ಅಧಿಸೂಚನೆ ಅಥವಾ ಸಾರ್ವಜನಿಕ ಆದೇಶ ಹೊರಡಿಸಿಲ್ಲ. ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ ಜ್ಯಾಕ್ ಡಾರ್ಸಿ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕವೇ ಈ ವಿಷಯ ಬಹಿರಂಗವಾಗಿರುವುದು ಸರ್ಕಾರದ ಪಾರದರ್ಶಕತೆಯ ಕೊರತೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಇಂಟರ್ನೆಟ್ ಸೇವೆ ಸ್ಥಗಿತಗೊಂಡ ಸಂದರ್ಭದಲ್ಲಿಯೂ ಜನರು ಪರಸ್ಪರ ಸಂಪರ್ಕದಲ್ಲಿರಲು ನೆರವಾಗುವ ತಂತ್ರಜ್ಞಾನವನ್ನು ನಿರ್ಬಂಧಿಸುವ ಮೂಲಕ ನಾಗರಿಕರ ಸಂವಹನ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಸರ್ಕಾರ ಮೊಟಕುಗೊಳಿಸುತ್ತಿದೆ ಎಂದು ಆರೋಪಿಸಲಾಗಿದೆ.
ಜಂತರ್ ಮಂತರ್‌ನಲ್ಲಿ ಪರೀಕ್ಷಾ ಅಕ್ರಮಗಳ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ಯುವಜನರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಪಿಐ(ಎಂ) ಟೀಕಿಸಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ₹2.85 ಕೋಟಿ ವೆಚ್ಚದ ಎರಡು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಿ.ಆರ್. ಪಾಟೀಲ್ ಶಂಕುಸ್ಥಾಪನೆ
ಬಿಟ್‌ಚಾಟ್ ಮೇಲಿನ ನಿರ್ಬಂಧವನ್ನು ತಕ್ಷಣ ಹಿಂಪಡೆಯಬೇಕು, ಅನಗತ್ಯ ಇಂಟರ್ನೆಟ್ ಸ್ಥಗಿತಗಳನ್ನು ನಿಲ್ಲಿಸಬೇಕು, ಸೆನ್ಸಾರ್ ಆದೇಶಗಳನ್ನು ಸಾರ್ವಜನಿಕಗೊಳಿಸಬೇಕು ಹಾಗೂ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಗೌರವಿಸಬೇಕು ಎಂದು ಸಿಪಿಐ(ಎಂ) ಪ್ರಕಟಣೆಯಲ್ಲಿ ಒತ್ತಾಯಿಸಿದೆ.





