ಅಧಿಕಾರದಲ್ಲಿರುವಾಗ ಜನರ ಕೆಂಗಣ್ಣಿಗೆ ಗುರಿಯಾಗುವ ಬಂಡವಾಳಶಾಹಿ ಪಕ್ಷಗಳು ಹೊಸ ಮುಖಗಳೊಂದಿಗೆ, ಹೊಸ ಗ್ಯಾರಂಟಿಗಳೊಂದಿಗೆ ಮತ್ತೆ ಜನರ ಬಳಿಗೆ ಬರುತ್ತಿವೆ. ಇನ್ನೊಂದೆಡೆ, ದುಡಿಯುವ ಜನರ, ರೈತ, ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ದಿನನಿತ್ಯ ಹೋರಾಟ ಕಟ್ಟುತ್ತಿರುವ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷ ಕೂಡ ಈ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ನಡೆಸುತ್ತಿದೆ ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷ ಹೇಳಿದೆ.
ಕಲಬುರಗಿಯಲ್ಲಿನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್.ಯು.ಸಿ.ಐ(ಸಿ) ಸೆಕ್ರೆಟೇರಿಯೇಟ್ ಸದಸ್ಯ ಎಮ್. ಶಶಿಧರ್ ಮಾತನಾಡಿ, ಕರ್ನಾಟಕ.2024ರ ಲೋಕಸಭಾ ಚುನಾವಣೆಯು ಘೋಷಣೆಯಾಗಿದೆ. ದೇಶದ 19 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಮ್ಮ ಪಕ್ಷವು 151 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಕರ್ನಾಟಕದಲ್ಲಿ ಈ ಬಾರಿ ಒಟ್ಟು 19 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸುತ್ತಿದೆ ಎಂದರು.
ಕಳೆದ 10 ವರ್ಷಗಳಿಂದ ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ. 2014ರಲ್ಲಿ ಬಿಜೆಪಿ ದನಿ ಎತ್ತಿದ ಬೆಲೆಏರಿಕೆ, ನಿರುದ್ಯೋಗ, ಭ್ರಷ್ಟಾಚಾರದಂತಹ ಸಮಸ್ಯೆಗಳ ಕುರಿತು ಈಗ ಮೌನವಾಗಿದೆ. ಅಬ್ಬರದ ಪ್ರಚಾರ ಮಾಡಿದ ‘ಗುಜರಾತ್ ಮಾದರಿ’ ಅದೃಶ್ಯವಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗದ ಮಾತಿರಲಿ, ಭಾರತದ ಯುವಕರು ನಿರುದ್ಯೋಗದ ಕಷ್ಟ ತಡೆಯಲಾಗದೆ, ಯುದ್ಧಪೀಡಿತ ಇಸ್ರೇಲ್, ರಷ್ಯಾಗಳಿಗೆ ಕೆಲಸ ಹುಡುಕಿಕೊಂಡು ಹೋಗುತ್ತಿದ್ದಾರೆ. ಕಪ್ಪುಹಣ, ಸ್ವಿಸ್‌ಬ್ಯಾಂಕ್ ಹಣ ವಶಪಡಿಸುವ ಬಗ್ಗೆ ಇರಲಿ, ಎಸ್‌ಬಿಐಯಲ್ಲಿರುವ ಚುನಾವಣಾ ಬಾಂಡ್ ಕುರಿತು ಮಾಹಿತಿ ನೀಡದಂತೆ ತಡೆಯಲು ಬಿಜೆಪಿ ಸರ್ವ ಪ್ರಯತ್ನ ಮಾಡಿದೆ ಎಂದರು.
ಚುನಾವಣಾ ಬಾಂಡ್ ಮೂಲಕ ಭ್ರಷ್ಟಾಚಾರಕ್ಕೆ ಹೊಸ ವ್ಯಾಖ್ಯಾನ ಬಿಜೆಪಿ ಬರೆದಿದೆ. ಜಾಗತಿಕ ಹಸಿವಿನ ಸೂಚ್ಯಂಕ, ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಭಾರತದ ಸ್ಥಾನ ಪಾತಾಳದಲ್ಲಿದೆ. ಆದರೆ, ಪ್ರಧಾನಿ ಮೋದಿಯವರು ವಿಕಸಿತ ಭಾರತದ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಇಷ್ಟು ವರ್ಷ ಆಳ್ವಿಕೆ ನಡೆಸಿ ದೇಶವನ್ನು ಹಾಳುಗೆಡವಿದ ಕಾರಣ ದೇಶವನ್ನು ಅಭಿವೃದ್ಧಿಯ ಪಥಕ್ಕೆ ತರಲು ಇನ್ನೂ ಒಂದು ಅವಕಾಶ ಕೊಡಿ ಎಂದು ಕೇಳುತ್ತಾರೆ. ಹಿಂದೆ ಕಾಂಗ್ರೆಸ್ ಆಳ್ವಿಕೆಯಲ್ಲಿ ಅವರು ಇದೇ ರೀತಿ ಬ್ರಿಟಿಷರ ಮೇಲೆ ಗೂಬೆ ಕೂರಿಸುತ್ತಿದ್ದರು. ಅಂಬಾನಿ, ಅದಾನಿಗಳು ವಿಕಸಿತಗೊಂಡು ಜಗತ್ತಿನ ಅತಿ ಶ್ರೀಮಂತ ಬಂಡವಾಳಶಾಹಿಗಳಾಗಿದ್ದಾರೆ. ಅಂತಹ ಆಧುನಿಕ ಬಿಲಿಯಾಧಿಪತಿಗಳ ಐಷಾರಾಮಿ ಕಾರುಗಳಿಗಾಗಿ ದುಬಾರಿ ಸುಂಕದ ಎಕ್ಸ್ಪ್ರೆಸ್ ಹೈವೇಗಳನ್ನು ಜನರ ತೆರಿಗೆಯಲ್ಲಿ ನಿರ್ಮಿಸಿ, ಇದೇ ಅಭಿವೃದ್ಧಿ ಎಂದು ಒಪ್ಪಿಸಲಾಗಿದೆ ಎಂದು ಹೇಳಿದರು.
ಇನ್ನೊಂದೆಡೆ, ಜನರ ಮತವನ್ನು ಕೋಮುವಾದದ ಮೂಲಕ ಧ್ರುವೀಕರಣ ಮಾಡಲು ಮಂದಿರ, ಮಸೀದಿ, ಬಾವುಟ, ಸಿಎಎ ಮುಂತಾದ ಬಗೆಬಗೆಯ ದಾರಿಗಳನ್ನು ಬಿಜೆಪಿ ಹುಡುಕುತ್ತಿದೆ. ಚುನಾವಣಾ ಆಯೋಗವನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು, ಚುನಾವಣಾ ಆಯುಕ್ತರ ನೇಮಕಾತಿ ಕಾಯಿದೆಗೆ ತಿದ್ದುಪಡಿ ತಂದಿದೆ.
ಇಂತಹ ಕೋಮುವಾದಿ, ಫ್ಯಾಸೀವಾದಿ, ಬಂಡವಾಳಶಾಹಿ ನೀತಿಗಳ ವಿರುದ್ಧ ಈ ಚುನಾವಣೆಯಲ್ಲಿ ಜನಪರ ಧ್ವನಿ ಮೊಳಗಬೇಕು. ಆದರೆ, ಕಾಂಗ್ರೆಸ್ ನೇತೃತ್ವದ ವಿವಿಧ ಅವಕಾಶವಾದಿ ಪ್ರಾದೇಶಿಕ ಪಕ್ಷಗಳ ಕೂಟವಾದ ಇಂಡಿಯಾ ನೈಜ ಧರ್ಮನಿರಪೇಕ್ಷ, ಪ್ರಜಾತಾಂತ್ರಿಕ ಪರ್ಯಾಯವನ್ನು ನೀಡಲು ಖಂಡಿತ ಅಸಾಧ್ಯ. ಬಿಜೆಪಿ ಬೆಳೆದು ಅಧಿಕಾರಕ್ಕೆ ಬರುವವರೆಗೆ ದೇಶದ ಬಂಡವಾಳಶಾಹಿಗಳ ಸೇವೆಗೈದಿರುವುದು ಇದೇ ಕಾಂಗ್ರೆಸ್ ಎನ್ನುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಎನ್‌ಡಿಎ ಮತ್ತು ಇಂಡಿಯಾ ಎರಡು ಮೈತ್ರಿಕೂಟಗಳು ಕೂಡ ಬಂಡವಾಳಶಾಹಿ ವರ್ಗದ ಎರಡು ಪರ್ಯಾಯಗಳಾಗಿವೆ ಎಂದರು.
ಆದರೆ, ಈ ಚುನಾವಣೆ ಬಂಡವಾಳಶಾಹಿ ಮತ್ತು ಕಾರ್ಮಿಕರ ನಡುವಿನ, ಶೋಷಕರು ಮತ್ತು ಶೋಷಿತರ ನಡುವಿನ ಸಮರವಾಗಿದೆ. ಭಾರತದ ಶೋಷಿತ ದುಡಿಯುವ ವರ್ಗದ, ಬಡ ರೈತರ ಪರ್ಯಾಯವಾಗಿ ದೇಶದ ಎಡಪಕ್ಷಗಳು ಒಂದು ಒಕ್ಕೂಟದ ಮೂಲಕ ಜನ ಹೋರಾಟಗಳನ್ನು ಕಟ್ಟಬೇಕಾಗಿತ್ತು. ಚುನಾವಣೆಗಳು ಪರಿಹಾರವಲ್ಲ, ಸಮಾಜವಾದವೇ ನೈಜ ಪರಿಹಾರ ಎಂಬ ಪ್ರಚಾರವನ್ನು ಕೈಗೆತ್ತಿಕೊಳ್ಳಬೇಕಿತ್ತು. ಆದರೆ, ದುರಂತವೆಂದರೆ ಸಿಪಿಐ, ಸಿಪಿಐಎಂ ನಂತಹ ಎಡವಾದಿ ಪಕ್ಷಗಳು ಕೆಲವು ಲೋಕಸಭಾ ಸೀಟುಗಳ ಆಸೆಗೆ ಇಂಡಿಯಾ ಮೈತ್ರಿಕೂಟವನ್ನು ಸೇರಿವೆ. ಇಂತಹ ಪರಿಸ್ಥಿತಿಯಲ್ಲಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವು ಶೋಷಿತ ಜನರ ನೈಜ ಹೋರಾಟದ ಪರ್ಯಾಯವಾಗಿ ತನ್ನ ಶಕ್ತಿಮೀರಿ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದೆ ಎಂದು ಹೇಳಿದರು.
ರೈತರ ಹೋರಾಟಗಳಿಗೆ ಬಲ ನೀಡಲು, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಲು, ಎನ್‌ಇಪಿ ವಿರುದ್ಧ ಹೋರಾಡಿ, ಸಾರ್ವಜನಿಕ ಶಿಕ್ಷಣ ಉಳಿಸಲು, ಯುವಜನರ, ಮಹಿಳೆಯರ ಹಿತಾಸಕ್ತಿಗಳನ್ನು ಎತ್ತಿ ಹಿಡಿಯಲು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಗಳನ್ನು ಚುನಾಯಿಸಬೇಕು. ನಾವು ಸ್ಪರ್ಧೆ ನಡೆಸದೇ ಇರುವ ಕ್ಷೇತ್ರಗಳಲ್ಲಿ ರಾಜ್ಯದ ಮೂರು ಜನವಿರೋಧಿ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಬಿಟ್ಟು ಬೇರೆ ಪ್ರಾಮಾಣಿಕ, ಹೋರಾಟಗಾರ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದು ನಮ್ಮ ಪಕ್ಷದ ಕರ್ನಾಟಕ ರಾಜ್ಯ ಸಮಿತಿ ಕರೆ ನೀಡುತ್ತದೆ.
ಎಸ್.ಯು.ಸಿ.ಐ(ಸಿ) ಪಕ್ಷದ ಲೋಕಸಭಾ ಅಭ್ಯರ್ಥಿಗಳ ಪಟ್ಟಿ-ಕರ್ನಾಟಕ
- ಬೆಳಗಾವಿ(2)-ಲಕ್ಷ್ಮಣ ಜಡಗಣ್ಣನವರ್
- ಬಾಗಲಕೋಟೆ(3)-ಮಲ್ಲಿಕಾರ್ಜುನ ಎಚ್.ಟಿ
- ವಿಜಯಪುರ (4ಎಸ್‌ಸಿ)- ನಾಗಜ್ಯೋತಿ
- ಕಲಬುರಗಿ(5ಎಸ್‌ಸಿ)- ಎಸ್.ಎಂ.ಶರ್ಮಾ
- ರಾಯಚೂರು (6 ಎಸ್‌ಟಿ ) – ರಾಮಲಿಂಗಪ್ಪ
- ಕೊಪ್ಪಳ(8)-ಶರಣು ಗಡ್ಡಿ
- ಬಳ್ಳಾರಿ(9ಎಸ್‌ಟಿ)-ದೇವದಾಸ್
- ಹಾವೇರಿ(10)-ಗಂಗಾಧರ ಬಡಿಗೇರ
- ಧಾರವಾಡ(11)-ಶರಣಬಸವ ಗೋನವಾರ
- ಉತ್ತರ ಕನ್ನಡ (12)-ಗಣಪತಿ ವಿ. ಹೆಗಡೆ
- ದಾವಣಗೆರೆ (13)- ತಿಪ್ಪೇಸ್ವಾಮಿ
- ಚಿತ್ರದುರ್ಗ(18 ಎಸ್‌ಸಿ)- ಸುಜಾತಾ
- ತುಮಕೂರು(19)-ಎಸ್.ಎನ್.ಸ್ವಾಮಿ
- ಮೈಸೂರು(21)- ಸುನಿಲ್ ಟಿ.ಆರ್
- ಚಾಮರಾಜನಗರ(22ಎಸ್‌ಸಿ)-ಸುಮಾ.ಎಸ್
- ಬೆಂಗಳೂರು ಗ್ರಾಮಾಂತರ(23)-ಹೇಮಾವತಿ.ಕೆ
- ಬೆಂಗಳೂರು ಉತ್ತರ(24)-ನಿರ್ಮಲ ಎಚ್.ಎಲ್
- ಬೆಂಗಳೂರು ಕೇಂದ್ರ(25)-ಶಿವಪ್ರಕಾಶ್ ಎಚ್.ಪಿ
- ಚಿಕ್ಕಬಳ್ಳಾಪುರ(27)-ಕಲಾವತಿ ಎನ್.
ಇದೇ ವೇಳೆ, ಜನತೆಯ ಹೋರಾಟಗಳಿಂದ ಹೊರಹೊಮ್ಮಿದ ಜನಪರ ಅಭ್ಯರ್ಥಿ ಕಾಮ್ರೇಡ್ ಎಸ್.ಎಮ್.ಶರ್ಮಾರವರನ್ನು ಗೆಲ್ಲಿಸಿ ಎಂದು ಅವರು ಮನವಿ ಮಾಡಿದರು.
ಎಸ್.ಎಮ್.ಶರ್ಮಾರವರು ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಲೇ ನಮ್ಮ ಪಕ್ಷದ ವಿದ್ಯಾರ್ಥಿ ಮುಂದಳ ವಿದ್ಯಾರ್ಥಿ ಸಂಘಟನೆಯಾದ ಎಐಡಿಎಸ್‌ಓ ವಿಚಾರಗಳಿಗೆ, ನೇತಾಜಿ, ಭಗತ್‌ಸಿಂಗ್‌ರವರ ಕನಸನ್ನು ನನಸು ಮಾಡಲು ಹಲವಾರು ಯಶಸ್ವಿ ಹೋರಾಟಗಳನ್ನು ಜಿಲ್ಲೆಯಲ್ಲಿ ಕಟ್ಟಿದ್ದಾರೆ. ಶಿಕ್ಷಣದ ಖಾಸಗೀಕರಣ ವಿರುದ್ದ, ವಿದ್ಯಾರ್ಥಿ ವೇತನಕ್ಕಾಗಿ, ಶುಲ್ಕ ಏರಿಕೆಯ ವಿರುದ್ದ, ಬಸ್ ಪಾಸ್‌ಗಾಗಿ ಹೀಗೆ ಹಲವಾರು ಶೈಕ್ಷಣಿಕ-ವಿದ್ಯಾರ್ಥಿಗಳ ಸಮಸ್ಯೆಗಳ ವಿರುದ್ದ ಚಳುವಳಿಗಳನ್ನು ಬೆಳೆಸಿದ್ದಾರೆ ಎಂದರು.
ನಂತರ ನಮ್ಮ ಪಕ್ಷದ ಸಂಸ್ಥಾಪಕರು, ಮಾರ್ಕ್ಸ್ವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷ್‌ರವರ ಪ್ರಖರ ಚಿಂತನೆಗಳಿಗೆ ಆಕರ್ಷಿತರಾಗಿ, ಸಮಾಜದ ಮೂಲಭೂತ ಬದಲಾವಣೆಗಾಗಿ, ಸಮಸಮಾಜದ ಸ್ಥಾಪನೆಗಾಗಿ ಪಕ್ಷದ ಪೂರ್ಣಾವಧಿ ಕಾರ್ಯಕರ್ತರಾಗಿ ಅವಿರತವಾಗಿ ಹೋರಾಟದ ಹಾದಿಯಲ್ಲಿದ್ದಾರೆ. ತಮ್ಮ ಜೀವನವನ್ನೇ ಕ್ರಾಂತಿಗಾಗಿ ಮೀಸಲಿಟ್ಟ ಇವರು, ಕಲಾ ಪದವಿಧರರಾಗಿದ್ದಾರೆ. ನಮ್ಮ ಪಕ್ಷದ ಕಾರ್ಮಿಕ ಸಂಘಟನೆಯಾದ ಎಐಯುಟಿಯುಸಿ ಸಂಘಟನೆಯ ಕಲಬುರಗಿ ಜಿಲ್ಲಾ ಕಾರ್ಯದರ್ಶಿಗಳಾಗಿ ಜಿಲ್ಲೆಯಲ್ಲಿ ಆಶಾ, ಅಂಗನವಾಡಿ, ಆಟೋ ಚಾಲಕರ, ಇನ್ನಿತರ ದುಡಿಯುವ ವರ್ಗದ ಜನತೆಯನ್ನು ಸಂಘಟಿಸಿ, ಅವರ ನ್ಯಾಯಯುತ ಬೇಡಿಕೆಗಳಿಗಾಗಿ ರಾಜೀರಹಿತ ಹೋರಾಟಗಳನ್ನು ಕಟ್ಟುತ್ತಿದ್ದಾರೆ ಎಂದರು.
ಇವುಗಳ ಜೊತೆಗೆ ಕಲಬುರಗಿ ನಗರಕ್ಕೆ ಮೂಲಭೂತ ಸೌಲಭ್ಯಗಳಿಗಾಗಿ ಹೋರಾಟಗಳನ್ನು ನಿರಂತರವಾಗಿ ಬೆಳೆಸುತ್ತಿದ್ದಾರೆ. ಹಾಗಾಗಿ ಜನತೆಯ ಧ್ವನಿಯನ್ನು ಸಂಸತ್ತಿನಲ್ಲಿ ಎತ್ತಲು ಹಾಗೂ ರೈತ-ಕೃಷಿಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಪರಿಹರಿಸಲು ಕಾ.ಎಸ್.ಎಮ್.ಶರ್ಮಾರವರನ್ನು ಕಲಬುರಗಿ ಜನತೆಯು ಗೆಲ್ಲಿಸಬೇಕೆಂದು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಅಭ್ಯರ್ಥಿ ಎಸ್.ಎಮ್. ಶರ್ಮಾ, ಪಕ್ಷದ ಜಿಲ್ಲಾ ಸಮಿತಿಯ ಹಿರಿಯ ಸದಸ್ಯ ವಿ.ನಾಗಮ್ಮಾಳ್, ಆರ್.ಕೆ.ವೀರಭದ್ರಪ್ಪ, ರಾಮಣ್ಣ ಇಬ್ರಾಹಿಂಪುರ, ವಿ.ಜಿ. ದೇಸಾಯಿ, ಗಣಪತರಾವ ಮಾನೆ, ಮಹೇಶ ನಾಡಗೌಡ, ಜಗನ್ನಾಥ ಎಸ್.ಎಚ್, ಡಾ.ಸೀಮಾ ದೇಶಪಾಂಡೆ, ಮಹೇಶ ಎಸ್.ಬಿ, ಹಣಮಂತ ಎಸ್.ಎಚ್ ಮುಂತಾದವರು ಹಾಜರಿದ್ದರು.