ಕಲಬುರಗಿ ಜಿಲ್ಲೆಯ ಫರತಾಬಾದ್ ಸಮೀಪದ ಕೂಡಿ ದರ್ಗಾ ಬಳಿ ಕೆಕೆಆರ್‌ಟಿಸಿ ಬಸ್ ಮತ್ತು ಟಂಟಂ ಗೂಡ್ಸ್ ವಾಹನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದು, ಅವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ.
ಜೇವರ್ಗಿಯಿಂದ ಕಲಬುರಗಿ ಕಡೆಗೆ ಬರುತ್ತಿದ್ದ ಕೆಕೆಆರ್‌ಟಿಸಿ ಬಸ್ ಹಾಗೂ ಕಲಬುರಗಿಯಿಂದ ಜೇವರ್ಗಿ ಕಡೆಗೆ ತೆರಳುತ್ತಿದ್ದ ಟಂಟಂ ವಾಹನದ ನಡುವೆ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಟಂಟಂ ವಾಹನಕ್ಕೆ ತೀವ್ರ ಹಾನಿಯಾಗಿದ್ದು, ಅದರಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ.
ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ತಕ್ಷಣ ಜೇವರ್ಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯರ ಪ್ರಕಾರ, ಗಾಯಗೊಂಡವರಲ್ಲಿ ಒಬ್ಬರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಉಳಿದವರಿಗೆ ಚಿಕಿತ್ಸೆ ಮುಂದುವರಿದಿದೆ.
ಇದನ್ನು ಓದಿದ್ದೀರಾ? 232 ಗ್ರೇಡ್-2 ತಹಶೀಲ್ದಾರ್‌ಗಳಿಗೆ ಗ್ರೇಡ್-1 ಹುದ್ದೆಗೆ ಬಡ್ತಿ: ಡಿಸಿಎಂ ಡಾ. ಜಿ ಪರಮೇಶ್ವರ್
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣಗಳ ಕುರಿತು ತನಿಖೆ ಆರಂಭಿಸಲಾಗಿದ್ದು, ಈ ಸಂಬಂಧ ಕಲಬುರಗಿ ಟ್ರಾಫಿಕ್ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದೆ.





