ರಾಜ್ಯ ಕಂದಾಯ ಇಲಾಖೆಯಲ್ಲಿ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಗ್ರೇಡ್-2 ತಹಶೀಲ್ದಾರ್‌ಗಳ ಬಡ್ತಿ ಪ್ರಕ್ರಿಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಒಟ್ಟು 232 ಗ್ರೇಡ್-2 ತಹಶೀಲ್ದಾರ್‌ಗಳಿಗೆ ಗ್ರೇಡ್-1 ತಹಶೀಲ್ದಾರ್ ಹುದ್ದೆಗೆ ಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದ್ದು, ಕಂದಾಯ ಅಧಿಕಾರಿಗಳ ಬಹುಕಾಲದ ಕಾಯುವಿಕೆಗೆ ಅಂತ್ಯ ಹಾಡಲಾಗಿದೆ.
ಈ ಮಹತ್ವದ ಬೆಳವಣಿಗೆಯ ಕುರಿತು ಡಿಸಿಎಂ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದು, “ಇದೊಂದು ಕೇವಲ ಆಡಳಿತಾತ್ಮಕ ಮೈಲುಗಲ್ಲಷ್ಟೇ ಅಲ್ಲ; ಬದಲಿಗೆ ನ್ಯಾಯಬದ್ಧ, ಪಾರದರ್ಶಕ ಹಾಗೂ ಸಮಯೋಚಿತ ನಿರ್ಧಾರಗಳ ಮೂಲಕ ಆಡಳಿತ ಯಂತ್ರವನ್ನು ಬಲಪಡಿಸುವ ಸರ್ಕಾರದ ದೃಢವಾದ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಈ ಬಡ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ, ಅಧಿಕಾರಿಗಳಲ್ಲಿ ಹೊಸ ಹುರುಪು ತುಂಬಲಾಗಿದೆ. “ಸರ್ಕಾರವು ಸದಾ ಅರ್ಹತೆ, ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತದೆ ಎಂಬ ವಿಶ್ವಾಸವನ್ನು ನೌಕರ ವರ್ಗದಲ್ಲಿ ಮೂಡಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ” ಎಂದು ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಪ್ರಕ್ರಿಯೆಯನ್ನು ಸುಗಮವಾಗಿ ಸಾಕಾರಗೊಳಿಸಲು ಶ್ರಮಿಸಿದ ಕಂದಾಯ ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನು ಓದಿದ್ದೀರಾ? ಪಂಜಾಬ್ ಸಿಎಂಗೆ ‘ಗುರುದ್ರೋಹಿ’ ಪಟ್ಟ: ಚುನಾವಣಾ ಹೊತ್ತಲ್ಲೇ ಆಪ್‌ಗೆ ನುಂಗಲಾರದ ತುತ್ತು
ಬಡ್ತಿ ಪಡೆದಿರುವ ಎಲ್ಲಾ 232 ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿರುವ ಡಾ. ಪರಮೇಶ್ವರ ಅವರು, “ಬಡ್ತಿಯೊಂದಿಗೆ ಅಧಿಕಾರಿಗಳ ಜವಾಬ್ದಾರಿಯೂ ಹೆಚ್ಚಾಗಿದೆ. ನಾಡಿನ ಜನತೆಗೆ ಇನ್ನಷ್ಟು ದಕ್ಷತೆ, ಕಾಳಜಿ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವ ಮೂಲಕ ಅಧಿಕಾರಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಕಂದಾಯ ಇಲಾಖೆಯು ಪ್ರತಿಯೊಬ್ಬ ನಾಗರಿಕರಿಗೂ ಪಾರದರ್ಶಕ, ಉತ್ತರದಾಯಿ ಹಾಗೂ ಕಾಳಜಿಯುಕ್ತ ಸೇವೆಯನ್ನು ಒದಗಿಸಬೇಕೆಂಬ ಸಂಕಲ್ಪದ ಭಾಗವೇ ಈ ನಿರ್ಧಾರವಾಗಿದೆ” ಎಂದು ತಿಳಿಸಿದ್ದಾರೆ.
ಸ್ವಯಂಸ್ಫೂರ್ತಿಯಿಂದ ಕಾರ್ಯನಿರ್ವಹಿಸುವ ಅಧಿಕಾರಿ ವರ್ಗವೇ ಯಾವುದೇ ಸರ್ಕಾರಕ್ಕೆ ಅತಿ ದೊಡ್ಡ ಆಸ್ತಿಯಾಗಿದ್ದು, ವೃತ್ತಿ ನೈಪುಣ್ಯತೆಗೆ ಒತ್ತು ನೀಡುವ ಆಡಳಿತ ಸಂಸ್ಕೃತಿ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ. ಮುಂಬರುವ ದಿನಗಳಲ್ಲಿ ಕಂದಾಯ ಇಲಾಖೆಯನ್ನು ಮತ್ತಷ್ಟು ವೇಗ ಮತ್ತು ಜವಾಬ್ದಾರಿಯುತವಾಗಿ ಸೇವೆ ಒದಗಿಸುವ ‘ಜನಕೇಂದ್ರಿತ’ ಸಂಸ್ಥೆಯಾಗಿ ರೂಪಿಸಲಾಗುವುದು. ಅಧಿಕಾರಿಗಳಲ್ಲಿ ವಿಶ್ವಾಸ ಹಾಗೂ ಜನಸಾಮಾನ್ಯರಲ್ಲಿ ಭರವಸೆ ಮೂಡಿಸುವ ಅತ್ಯುತ್ತಮ ಕಂದಾಯ ಆಡಳಿತವನ್ನು ಒಟ್ಟಾಗಿ ನಿರ್ಮಿಸುವ ಮೂಲಕ ‘ನವ ಕರ್ನಾಟಕ’ ಕಟ್ಟೋಣ ಎಂದು ಸಚಿವರು ಕರೆ ನೀಡಿದ್ದಾರೆ.




