ವಿಶ್ವಗುರು ಬಸವಣ್ಣ ಹಾಗೂ ಬಸವಾದಿ ಶರಣರ ಕುರಿತು ಅವಹೇಳನಕಾರಿ ಬರಹ ಪ್ರಕಟಿಸಲಾಗಿದೆ ಎಂದು ಆರೋಪಿಸಿ ಜಾಗತಿಕ ಲಿಂಗಾಯತ ಮಹಾಸಭೆಯ ಕಲಬುರಗಿ ಜಿಲ್ಲಾ ಘಟಕ ನ.21ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಬೆಳಿಗ್ಗೆ 11 ಗಂಟೆಗೆ ಬಸವೇಶ್ವರ ಮೂರ್ತಿ ಎದುರು ಪ್ರತಿಭಟನೆ ನಡೆಸಿ, ಆರೋಪಿತರ ಪ್ರತಿಕೃತಿ ದಹಿಸಲಾಗುವುದು ಎಂದು ಮಹಾಸಭೆಯ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ್ ತಿಳಿಸಿದರು.
ಶುಕ್ರವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರವಿ ಹಂಜ್ ಅವರು ‘ವಿಶ್ವವಾಣಿ’ ಪತ್ರಿಕೆಯಲ್ಲಿ ಬಸವಣ್ಣ ಹಾಗೂ ಬಸವಾದಿ ಶರಣರ ಕುರಿತು ಆಕ್ಷೇಪಾರ್ಹ ಲೇಖನಗಳನ್ನು ಪ್ರಕಟಿಸಿದ್ದು, ‘ಮಂಟಪ’ ಕೃತಿಯಲ್ಲಿಯೂ ಶರಣರ ತತ್ವಾದರ್ಶಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು. ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಬಳಿಕವೂ ಬಸವತತ್ವದ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಯುತ್ತಿರುವುದು ಖಂಡನೀಯ ಎಂದರು.
ವಿವಾದಿತ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ರವಿ ಹಂಜ್ ಅವರ ವೀಸಾ ಮತ್ತು ಪಾಸ್‌ಪೋರ್ಟ್ ರದ್ದತಿಗೆ ಕ್ರಮ ಕೈಗೊಂಡು ಅವರನ್ನು ಭಾರತಕ್ಕೆ ಕರೆತಂದು ಕಾನೂನು ಕ್ರಮ ಜರುಗಿಸಬೇಕು. ಕೃತಿಗೆ ಪ್ರೋತ್ಸಾಹ ನೀಡಿದ ಆರೋಪದ ಮೇಲೆ ವಿಶ್ವೇಶ್ವರ ಭಟ್ ವಿರುದ್ಧ ಪ್ರಕರಣ ದಾಖಲಿಸಬೇಕು ಹಾಗೂ ವಿವಾದಾತ್ಮಕ ಬರಹ ಪ್ರಕಟಿಸಿದ ‘ವಿಶ್ವವಾಣಿ’ ಪತ್ರಿಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರವಿ ಹಂಜ್, ವಿಶ್ವೇಶ್ವರ ಭಟ್, ಮನು ಬಳಗಾ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಸೇರಿದಂತೆ ಕೆಲವರ ಪ್ರತಿಕೃತಿ ದಹಿಸಲಾಗುವುದು. ಆರೋಪಿತರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಕಾಗಿಣಾ ನದಿ ಪಾತ್ರದಲ್ಲಿ ಸರ್ಕಾರಿ ಮಾತ್ರೆ, ಸಿರಪ್‌ಗಳ ರಾಶಿ; ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ಸುದ್ದಿಗೋಷ್ಠಿಯಲ್ಲಿ ಮಹಾಸಭೆಯ ಕಾರ್ಯದರ್ಶಿ ಅಶೋಕ ಘೋಳಿ, ಮೀನಾಕ್ಷಿ ಬಾಳಿ, ಪ್ರೊ. ಆರ್.ಕೆ. ಹುಡಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.




