ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಉಡುಪಿ ಜಿಲ್ಲೆಯನ್ನು ಕಡೆಗಣಿಸಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಖಂಡಿಸಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಅಭಿವೃದ್ಧಿಗೆ 32,100 ಕೋಟಿ ರೂ. ಅನುದಾನ ಘೋಷಿಸಲಾಗಿದ್ದರೂ, ಉಡುಪಿ ಜಿಲ್ಲೆಗೆ ಹಡಗು ನಿರ್ಮಾಣ ಘಟಕಕ್ಕೆ 220 ಕೋಟಿ ರೂ. ನೀಡಿರುವುದನ್ನು ಹೊರತುಪಡಿಸಿ ಯಾವುದೇ ಪ್ರಮುಖ ಯೋಜನೆಗಳನ್ನು ಘೋಷಿಸಿಲ್ಲ. ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಹಾಗೂ ವಿರೋಧ ಪಕ್ಷದ ಶಾಸಕರು ಈ ಅನ್ಯಾಯದ ವಿರುದ್ಧ ಧ್ವನಿ ಎತ್ತದೆ ಮೌನವಾಗಿರುವುದು ದುರಂತ ಎಂದು ಆರೋಪಿಸಿದರು.

ಸಂಪುಟ ಸಭೆಯ ಆಯೋಜನೆಗೆ ಸಾರ್ವಜನಿಕರ ತೆರಿಗೆ ಹಣದ 3.6 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೆ ಜಿಲ್ಲೆಯ ಪ್ರಮುಖ ಅಭಿವೃದ್ಧಿ ಬೇಡಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಕುಂದಾಪುರದ ಒಳಚರಂಡಿ ಯೋಜನೆ ಅಪೂರ್ಣವಾಗಿದ್ದು, ಪೂರ್ಣಗೊಳಿಸಲು ಹೆಚ್ಚುವರಿಯಾಗಿ 300 ಕೋಟಿ ರೂ. ಅಗತ್ಯವಿದೆ. ಬ್ರಹ್ಮಾವರ ಮತ್ತು ಉಡುಪಿಯ ಕೆಲವು ಭಾಗಗಳಿಗೆ ಕುಡಿಯುವ ನೀರು ಪೂರೈಸುವ ವಾರಾಹಿ ಯೋಜನೆಯೂ ನನೆಗುದಿಗೆ ಬಿದ್ದಿದೆ. ಕಸ್ತೂರಿರಂಗನ್ ವರದಿಯ ಕುರಿತ ಗೊಂದಲಗಳು ಇನ್ನೂ ಬಗೆಹರಿದಿಲ್ಲ ಎಂದರು.
ಪಂಚಗಂಗಾವಳಿ ನದಿಯಲ್ಲಿ ಹೂಳು ತುಂಬಿಕೊಂಡಿದ್ದು, ಪ್ರವಾಹ ಪ್ರದೇಶಗಳ ಒತ್ತುವರಿ ತೆರವುಗೊಳಿಸುವ ಕೆಲಸವಾಗಿಲ್ಲ. ಮಲ್ಪೆ ಬಂದರಿನ ಮೂಲಸೌಕರ್ಯ ಅಭಿವೃದ್ಧಿಯೂ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ. ಮತ್ತೊಂದೆಡೆ, ಕುಂದಾಪುರದಲ್ಲಿ ವಲಸೆ ಕಾರ್ಮಿಕರು ಫುಟ್‌ಪಾತ್‌ಗಳಲ್ಲಿ ರಾತ್ರಿ ಕಳೆಯುವ ಪರಿಸ್ಥಿತಿಯಿದ್ದು, ತಂಗುದಾಣಗಳ ನಿರ್ಮಾಣಕ್ಕೆ ಮೀಸಲಿಟ್ಟ ಅನುದಾನ ಬಳಕೆಯಾಗದೆ ಉಳಿದಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಜಿಲ್ಲೆಯ ಪ್ರಮುಖ ಸಮಸ್ಯೆಗಳತ್ತ ಗಮನಹರಿಸಿ, ಅಗತ್ಯ ಅನುದಾನ ಬಿಡುಗಡೆ ಮಾಡುವುದರೊಂದಿಗೆ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಆಪ್ ಉಡುಪಿ ಜಿಲ್ಲಾಧ್ಯಕ್ಷ ಎಸ್.ಆರ್. ಲೋಬೊ, ಮುಖಂಡರಾದ ಡೆನಿಯಲ್ ರೇಂಜರ್, ವಿಜಯಾನಂದ ಪರ್ಕಳ ಹಾಗೂ ಆಗಸ್ಟಿನ್ ಡಿಸೋಜ ಉಪಸ್ಥಿತರಿದ್ದರು.







