2026-27ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಮುಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ರೈತರು ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿಯೇ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಹಾಗೂ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮನವಿ ಮಾಡಿದ್ದಾರೆ.
ತೊಗರಿ, ಹೆಸರು, ಉದ್ದು, ಹತ್ತಿ, ಸೋಯಾಬೀನ್, ಅವರೆ ಸೇರಿದಂತೆ ವಿವಿಧ ಬೆಳೆಗಳಿಗೆ ವಿಮಾ ಸೌಲಭ್ಯ ಲಭ್ಯವಿದೆ. ರೈತರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಪಹಣಿ ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ ಅಂಚೆ ಕಚೇರಿ, ಬ್ಯಾಂಕ್, ಗ್ರಾಮ್-ಒನ್, ಸಿಎಸ್‌ಸಿ ಕೇಂದ್ರಗಳು ಅಥವಾ ಇಂಡಸ್ ಇಂಡ್ ಜನರಲ್ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಮೆಕ್ಕೆಜೋಳ, ತೊಗರಿ, ಹತ್ತಿ, ಸಜ್ಜೆ, ಎಳ್ಳು ಹಾಗೂ ಸೋಯಾಬೀನ್ ಬೆಳೆಗಳಿಗೆ ವಿಮೆ ನೋಂದಣಿಯ ಕೊನೆಯ ದಿನಾಂಕ ಜುಲೈ 31 ಆಗಿದ್ದು, ಹೆಸರು, ಉದ್ದು ಹಾಗೂ ಅರಿಶಿಣ ಬೆಳೆಗಳಿಗೆ ಜುಲೈ 15 ಕೊನೆಯ ದಿನವಾಗಿದೆ. ಭತ್ತ, ಈರುಳ್ಳಿ ಹಾಗೂ ಸೂರ್ಯಕಾಂತಿ ಬೆಳೆಗಳಿಗೆ ಆಗಸ್ಟ್ 14ರವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ ಸೇರಿದಂತೆ ವಿವಿಧ ಪ್ರಕೃತಿ ವಿಕೋಪಗಳಿಂದ ಉಂಟಾಗುವ ಬೆಳೆ ನಷ್ಟಕ್ಕೆ ಪರಿಹಾರ ಒದಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಯಲ್ಲಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಪೋಕ್ಸೊ ಆರೋಪಿ ಪರಾರಿ ಪ್ರಕರಣ; ಪಿಎಸ್‌ಐ ಅಮಾನತು, ಸಿಪಿಐಗೆ ನೋಟಿಸ್
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ತಾಲೂಕಿನ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ ಅಥವಾ ಕಲಬುರಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





