ದೇವದಾಸಿ ಸಮುದಾಯದ ಹಕ್ಕುಗಳು, ಗೌರವ ಹಾಗೂ ಸ್ವಾಭಿಮಾನದ ಬದುಕನ್ನು ಖಾತ್ರಿಪಡಿಸುವ ಉದ್ದೇಶದಿಂದ ರಾಜ್ಯಮಟ್ಟದ ‘ವಿಮುಕ್ತ ಸಂಗಮ’ ಸಭೆಯನ್ನು ಜುಲೈ 7 ಮತ್ತು 8 ರಂದು ಬೆಂಗಳೂರಿನ ಆಶೀರ್ವಾದ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಎರಡು ದಿನಗಳ ಈ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ದೇವದಾಸಿ ಸಮುದಾಯದ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಕಾನೂನು ತಜ್ಞರು ಹಾಗೂ 20ಕ್ಕೂ ಹೆಚ್ಚು ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಸಭೆಯಲ್ಲಿ ದೇವದಾಸಿ ಪದ್ಧತಿಯ ಸಂಪೂರ್ಣ ನಿರ್ಮೂಲನೆ, ದೇವದಾಸಿ ಮಹಿಳೆಯರ ಪುನರ್ವಸತಿ, ಮಕ್ಕಳ ಶಿಕ್ಷಣ, ಉದ್ಯೋಗಾವಕಾಶ, ಸಾಮಾಜಿಕ ಭದ್ರತೆ, ಗೌರವಯುತ ಬದುಕು ಹಾಗೂ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಸಮಗ್ರ ಚರ್ಚೆ ನಡೆಯಲಿದೆ. ಈ ಚರ್ಚೆಗಳ ಆಧಾರದ ಮೇಲೆ ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ.
ದೇವದಾಸಿ ತಾಯಂದಿರ ಹಕ್ಕುಗಳಿಗಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳು, ಸಂಘ–ಸಂಸ್ಥೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ವಿಮುಕ್ತ ದೇವದಾಸಿ ಮಹಿಳಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ಜಿ. ಎಸ್. ಶರಣು ತಿಳಿಸಿದ್ದಾರೆ.
ಈ ರಾಜ್ಯಮಟ್ಟದ ಸಭೆಯು ದೇವದಾಸಿ ಸಮುದಾಯದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಹಾಗೂ ಅವರ ಹಕ್ಕು ಮತ್ತು ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಮಹತ್ವದ ವೇದಿಕೆಯಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.




