ರಾಜ್ಯದ ಅಯಾ ಇಲಾಖೆಯ ನೇಮಕಾತಿ ಪ್ರಕ್ರಿಯೆಯಲ್ಲಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಆಯ್ಕೆಯ (ಆಧ್ಯತೆ)ಯನ್ನು ಕೇಳುವ ಮೂಲಕ ಅನುಷ್ಠಾನಧಿಕಾರಿಗಳು ನಮ್ಮ ಹಕ್ಕಿನ ಹುದ್ದೆಗಳನ್ನು ಉದ್ದೇಶಪೂರ್ವಕವಾಗಿಯೇ ಕಸಿಯುತ್ತಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಆರೋಪಿಸಿದ್ದಾರೆ.
ಕಲ್ಯಾಣದ ಸಚಿವರು ಗಂಭೀರವಾಗಿ ಪರಿಗಣಿಸಿ ರಾಜ್ಯದ ಎಲ್ಲ ಇಲಾಖೆಗಳ ನೇಮಕಾತಿ ಮತ್ತು ಮುಂಬಡ್ತಿ ನೀಡುವ ಅನುಷ್ಠಾನಾಧಿಕಾರಿಗಳಿಗೆ ಸರ್ಕಾರದ ವತಿಯಿಂದ ಕಟ್ಟು ನಿಟ್ಟಿನ ಆದೇಶ ನೀಡಬೇಕು ಎಂದು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
ಭಾರತ ಸರ್ಕಾರ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿ ಮತ್ತು ನೇಮಕಾತಿಗಳಲ್ಲಿ ನಮ್ಮ ಪಾಲು ಪಡೆಯುವ ದೃಷ್ಟಿಯಿಂದ ಸಂವಿಧಾನ ಬದ್ಧ ವಿಶೇಷ ಸ್ಥಾನಮಾನ ನೀಡಿದೆ. ಆದರೆ, ರಾಜ್ಯ ಸರ್ಕಾರ ಅಯಾ ಇಲಾಖೆಯ ನೇಮಕಾತಿಗಳಿಗೆ ಈ ಹಿಂದೆ ಸುಮಾರು ಐದು ಬಾರಿ ನೇಮಕಾತಿ ಸುತ್ತೋಲೆಗಳನ್ನು ಪರಿಷ್ಕರಣೆ ಮಾಡಿ ದ್ವಂದ್ವ ಸೃಷ್ಟಿಸಿತ್ತು. ತೀವ್ರ ಹೋರಾಟದ ಬಳಿಕ ಎಲ್ಲ ನೇಮಕಾತಿಗಳಲ್ಲಿ ಮೊದಲು ರಾಜ್ಯ ಮಟ್ಟದ ಮೆರಿಟ್ ಪಟ್ಟಿಯಂತೆ ನಮ್ಮ ಅಭ್ಯರ್ಥಿಗಳಿಗೆ ಅವರವರ ಮೆರಿಟ್ ಆಧಾರದ ಮೇಲೆ ಪರಿಗಣಿಸಿ ಪಟ್ಟಿ ಪ್ರಕಟಿಸಿ, ನಂತರ ನಮ್ಮ ಮೀಸಲಾತಿಯಡಿಯ ಪಟ್ಟಿ ಪ್ರಕಟಿಸಬೇಕು ಎಂದು ನಿಯಮ ಜಾರಿಗೆ ತರಲಾಯಿತು ಎಂದು ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಲಂಚ ಪ್ರಕರಣ | ಲೋಕಾಯುಕ್ತ ಸಿಬ್ಬಂದಿ ಮೇಲೆ ಕಾರು ನುಗ್ಗಿಸಿದ ಅಧಿಕಾರಿ ಬಂಧನ
ಪ್ರಸ್ತುತ ನಿಯಮದಲ್ಲಿ ಹೀಗಿದ್ದರೂ ಕಲ್ಯಾಣದ ಅಭ್ಯರ್ಥಿಗಳಿಗೆ ಆಯ್ಕೆಯ ಪ್ರಶ್ನೆ ಕೇಳುವ ಮೂಲಕ ಅನುಷ್ಠಾನ ಅಧಿಕಾರಿಗಳು ವಿನಾ ಕಾರಣ ಸಮಸ್ಯೆ ಹುಟ್ಟಿಸಿ ನಮ್ಮ ಪಾಲಿನ ಹುದ್ದೆಗಳನ್ನು ಕಬಳಿಸುವ ಕುತಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಲ್ಯಾಣದ ಮಂತ್ರಿಗಳು ಗಂಭೀರವಾಗಿ ಪರಿಗಣಿಸಿ ವಿಶೇಷ ಸ್ಥಾನಮಾನದಡಿ ನೇಮಕಾತಿಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಾನದಂಡದ ಮಾದರಿ ನಮ್ಮ ಹಕ್ಕಿನ ನೇಮಕಾತಿ, ಮುಂಬಡ್ತಿಗಳು ಸುಸೂತ್ರವಾಗಿ ನಮ್ಮ ಅಭ್ಯರ್ಥಿಗಳಿಗೆ ಸಿಗುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರಾಜ್ಯದ ಅನುಷ್ಠಾನಧಿಕಾರಿಗಳ ದ್ವಂದ್ವ ನೀತಿಯನ್ನು ಖಂಡಿಸಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.