ಕೆಕೆಆರ್‌ಟಿಸಿ ಬಸ್‌ನ ಹೆಡ್‌ಲೈಟ್ ದೋಷವಿದ್ದರೂ ಮೊಬೈಲ್ ಟಾರ್ಚ್ ಬೆಳಕಿನ ನೆರವಿನಿಂದ ಬಸ್ ಚಾಲನೆ ಮಾಡಿ ಪ್ರಯಾಣಿಕರ ಸುರಕ್ಷತೆಯನ್ನು ಅಪಾಯಕ್ಕೆ ಒಳಪಡಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಿಗಮ, ಬಸ್ ಚಾಲಕ ಹಾಗೂ ಇಬ್ಬರು ತಾಂತ್ರಿಕ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿದೆ.
ಜುಲೈ 4ರಂದು ರಾತ್ರಿ ಕಲಬುರಗಿಯಿಂದ ಚಿಂಚೋಳಿಗೆ ಹೊರಟಿದ್ದ ಕೆಕೆಆರ್‌ಟಿಸಿ ಬಸ್‌ನ ಹೆಡ್‌ಲೈಟ್ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ, ಬಸ್ ನಿರ್ವಾಹಕ ಮತ್ತು ಕೆಲ ಪ್ರಯಾಣಿಕರು ತಮ್ಮ ಮೊಬೈಲ್ ಟಾರ್ಚ್‌ಗಳ ಬೆಳಕಿನ ಸಹಾಯದಿಂದ ಬಸ್‌ನ್ನು ಚಿಂಚೋಳಿವರೆಗೆ ಸಾಗಿಸಿದ ಘಟನೆ ನಡೆದಿತ್ತು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಕಲಬುರಗಿ ವಿಭಾಗ–1ರ ವಿಭಾಗೀಯ ನಿಯಂತ್ರಣಾಧಿಕಾರಿ, ಬಸ್‌ನ ಹೆಡ್‌ಲೈಟ್ ದುರಸ್ತಿಯನ್ನು ಸಮರ್ಪಕವಾಗಿ ನಿರ್ವಹಿಸದ ಚಿಂಚೋಳಿ ಘಟಕದ ತಾಂತ್ರಿಕ ಸಿಬ್ಬಂದಿ ಶಿವಾನಂದ, ದುರಸ್ತಿ ಕಾರ್ಯವನ್ನು ಪರಿಶೀಲಿಸದೇ ನಿರ್ಲಕ್ಷ್ಯ ವಹಿಸಿದ ತಾಂತ್ರಿಕ ಮೇಲ್ವಿಚಾರಕ ಬಸವರಾಜ ಹಾಗೂ ತಾಂತ್ರಿಕ ದೋಷವಿದ್ದರೂ ಬಸ್ ಚಾಲನೆ ಮಾಡಿದ ಚಾಲಕ ಆಕಾಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ಪದವಿ ಪೂರ್ವ ಉಪನ್ಯಾಸಕರ ಸಂಘದ ತಾಲೂಕು ಅಧ್ಯಕ್ಷರಾಗಿ ಸಾಬಯ್ಯ ಕವಲ್ದಾರ ಅವಿರೋಧ ಆಯ್ಕೆ
ಪ್ರಯಾಣಿಕರ ಜೀವಕ್ಕೆ ಅಪಾಯ ಉಂಟುಮಾಡುವ ಯಾವುದೇ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದ್ದು, ಸುರಕ್ಷತಾ ನಿಯಮಗಳ ಪಾಲನೆಯಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸಂದೇಶವನ್ನು ಈ ಕ್ರಮದ ಮೂಲಕ ನೀಡಿದೆ.





