ಮರುನೇಮಕಾತಿಗೆ ಆಗ್ರಹಿಸಿ ಕಳೆದ 45 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಗುಲ್ಬರ್ಗಾ ವಿಶ್ವವಿದ್ಯಾಲಯದ ಹೊರಗುತ್ತಿಗೆ ನೌಕರರು ಮಂಗಳವಾರ ಸಂಜೆ ಕಾರ್ಯಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಹೊರಗುತ್ತಿಗೆ ಅವಧಿ ಮುಗಿದ ಹಿನ್ನೆಲೆಯಲ್ಲಿ 281 ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ಕ್ರಮ ಖಂಡಿಸಿ ನೌಕರರು ನಿರಂತರ ಹೋರಾಟ ನಡೆಸುತ್ತಿದ್ದು, ಜೂನ್ 9ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ತಮ್ಮ ಬೇಡಿಕೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಆಡಳಿತ ಭರವಸೆ ನೀಡಿತ್ತು.
ಆದರೆ ಸಿಂಡಿಕೇಟ್ ಸಭೆಯ ನಿರ್ಣಯಗಳನ್ನು ಧರಣಿನಿರತ ನೌಕರರಿಗೆ ತಿಳಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪ್ರತಿಭಟನಾಕಾರರು ಕಾರ್ಯಸೌಧದ ಮುಖ್ಯ ದ್ವಾರದ ಎದುರು ಧರಣಿ ನಡೆಸಿ ಕುಲಪತಿ, ಕುಲಸಚಿವರು ಹಾಗೂ ಸಿಂಡಿಕೇಟ್ ಸದಸ್ಯರ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಕೆಲಕಾಲ ತಳ್ಳಾಟ-ನೂಕಾಟ ನಡೆದಿದ್ದು, ವಿಶ್ವವಿದ್ಯಾಲಯ ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಪ್ರತಿಭಟನಾಕಾರರು ಕುಲಪತಿ ಪ್ರೊ. ಶಶಿಕಾಂತ ಉಡಿಕೇರಿ, ಕುಲಸಚಿವ ಪ್ರೊ. ರಮೇಶ್ ಲಂಡನಕರ್ ಹಾಗೂ ಸಿಂಡಿಕೇಟ್ ಸದಸ್ಯರನ್ನು ಹೊರಗೆ ತೆರಳದಂತೆ ತಡೆದರು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ ತಿಗಡಿ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಯಿತು.
ಬಳಿಕ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಕುಲಪತಿ ಪ್ರೊ. ಶಶಿಕಾಂತ ಉಡಿಕೇರಿ, “ಸರ್ಕಾರದ ಸುತ್ತೋಲೆ ಹಾಗೂ ನಿಯಮಾವಳಿಗಳ ಪ್ರಕಾರವೇ ನಾವು ಕಾರ್ಯನಿರ್ವಹಿಸಬೇಕಾಗುತ್ತದೆ. ನೇರವಾಗಿ ಯಾವುದೇ ಆದೇಶ ನೀಡುವ ಅಧಿಕಾರ ನಮ್ಮ ಕೈಯಲ್ಲಿಲ್ಲ. ಆದರೆ ಟೆಂಡರ್ ಪ್ರಕ್ರಿಯೆಯಲ್ಲಿದ್ದ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಉಳಿದ ಪ್ರಕ್ರಿಯೆಗಳನ್ನು ಒಂದು ವಾರದೊಳಗೆ ಪೂರ್ಣಗೊಳಿಸಿ ಮರುನೇಮಕಾತಿ ಮಾಡಿಕೊಳ್ಳಲಾಗುವುದು” ಎಂದು ಭರವಸೆ ನೀಡಿದರು.

ಇದೇ ವೇಳೆ ಕುಲಸಚಿವ ಪ್ರೊ. ರಮೇಶ್ ಲಂಡನಕರ್ ಮಾತನಾಡಿ, “ಇಂದು ಸಿಂಡಿಕೇಟ್ ಸಭೆ ಮುಕ್ತಾಯಗೊಂಡಿದೆ. ಅದರ ಪ್ರೊಸೀಡಿಂಗ್ಸ್ ಪೂರ್ಣಗೊಂಡ ಬಳಿಕ ಆಯ್ಕೆಯಾದ ಏಜೆನ್ಸಿಗೆ ಅಧಿಕೃತ ಆದೇಶ ನೀಡಲಾಗುತ್ತದೆ. ನಂತರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಒಂದು ವಾರದೊಳಗೆ ಮರುನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ” ಎಂದು ತಿಳಿಸಿದರು.
ವಿಶ್ವವಿದ್ಯಾಲಯ ಆಡಳಿತದ ಭರವಸೆಯ ಬಳಿಕ ಪ್ರತಿಭಟನಾಕಾರರು ಕಾರ್ಯಸೌಧ ಮುತ್ತಿಗೆಯನ್ನು ಹಿಂಪಡೆದರೂ, ಮರುನೇಮಕಾತಿ ಆದೇಶ ಹೊರಬರುವವರೆಗೆ ಅಹೋರಾತ್ರಿ ಧರಣಿಯನ್ನು ಮುಂದುವರಿಸುವುದಾಗಿ ಘೋಷಿಸಿದರು.

ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಗೀತಾ ಮತ್ತು ಕಾವ್ಯಾಶ್ರೀ ಎಂಬ ಇಬ್ಬರು ಮಹಿಳಾ ಸಿಬ್ಬಂದಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದು, ಅವರನ್ನು ಇಎಸ್‌ಐಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇದನ್ನು ಓದಿದ್ದೀರಾ? ಕಲಬುರಗಿ | ರೈತರಿಗೆ ಸಮರ್ಪಕ ಡಿಎಪಿ, ರಸಗೊಬ್ಬರ ಒದಗಿಸುವಂತೆ ಆಗ್ರಹಿಸಿ ಕೆಪಿಆರ್‌ಎಸ್ ಬೃಹತ್ ಪ್ರತಿಭಟನೆ
ನೌಕರರ ಸಂಘದ ಅಧ್ಯಕ್ಷ ಶೀಲಪ್ರಕಾಶ ದೊಡ್ಡಮನಿ, ಗೌರವಾಧ್ಯಕ್ಷ ವಿಜಯ ಕೆಂಗಲ್, ಕಾರ್ಯದರ್ಶಿ ಚಂದ್ರಶೇಖರ ಸಾವಳಗಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ನೂರಾರು ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





