ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಆರಂಭವಾಗಿರುವ ಸಂದರ್ಭದಲ್ಲಿ ಜಿಲ್ಲೆಯ ರೈತರು ಡಿಎಪಿ ಸೇರಿದಂತೆ ವಿವಿಧ ರಸಗೊಬ್ಬರಗಳ ಕೊರತೆ ಹಾಗೂ ಗೊಬ್ಬರ ಬೆಲೆ ಏರಿಕೆಯಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ನೆಹರೂ ಗಂಜ್ನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಂಟಿ ಕೃಷಿ ನಿರ್ದೇಶಕರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ‘ಮುಂಗಾರು ಹಂಗಾಮಿನ ಆರಂಭದಲ್ಲಿಯೇ ಡಿಎಪಿ ರಸಗೊಬ್ಬರದ ತೀವ್ರ ಕೊರತೆ ಉಂಟಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಹೇಳಿದರು.
‘ಟಿಎಪಿಸಿಎಂಎಸ್ ಮತ್ತು ವಿಎಸ್ಎಸ್ಎನ್ ಕೇಂದ್ರಗಳ ಮುಂದೆ ರೈತರು ಆಧಾರ್ ಕಾರ್ಡ್ ಹಿಡಿದು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತರೂ ಗೊಬ್ಬರ ದೊರೆಯುತ್ತಿಲ್ಲ. ಹಲವೆಡೆ ಒಬ್ಬ ರೈತನಿಗೆ ಕೇವಲ ಎರಡು ಚೀಲಗಳಷ್ಟೇ ವಿತರಣೆ ಮಾಡಲಾಗುತ್ತಿದೆ. ಇದರಿಂದ ಬಿತ್ತನೆ ಕಾರ್ಯ ವಿಳಂಬವಾಗುತ್ತಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ’ ಎಂದು ಅವರು ದೂರಿದರು.
‘ಜಿಲ್ಲೆಯಲ್ಲಿ ಡಿಎಪಿ ಮಾತ್ರವಲ್ಲದೆ ಪೊಟ್ಯಾಶ್, ಎನ್ಪಿಕೆ ಹಾಗೂ ವಿವಿಧ ಕಾಂಪ್ಲೆಕ್ಸ್ ರಸಗೊಬ್ಬರಗಳ ಕೊರತೆಯೂ ಕಂಡುಬರುತ್ತಿದೆ. ರೈತರಿಗೆ ಅಗತ್ಯವಿರುವ 10-26-26, 10-20-20 ಸೇರಿದಂತೆ ವಿವಿಧ ಕಾಂಪ್ಲೆಕ್ಸ್ ಗೊಬ್ಬರಗಳ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಕೃಷಿ ವೆಚ್ಚವನ್ನು ಮತ್ತಷ್ಟು ಹೆಚ್ಚಿಸಿದೆ’ ಎಂದು ಹೇಳಿದರು.
‘ರಸಗೊಬ್ಬರ ಬೆಲೆ ಏರಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರು, ಕಳೆದ ವರ್ಷ ಸುಮಾರು ₹1,800 ಇದ್ದ ಪೊಟ್ಯಾಶ್ ಬೆಲೆ ಈಗ ₹1,975ಕ್ಕೆ ಏರಿಕೆಯಾಗಿದೆ. ಡಿಎಪಿ ಬೆಲೆ ₹1,350ರಿಂದ ₹1,490ಕ್ಕೆ, ಎನ್ಪಿಕೆ ಬೆಲೆ ₹1,350ರಿಂದ ₹1,550ಕ್ಕೆ ಏರಿಕೆಯಾಗಿದೆ. 10-26-26 ಹಾಗೂ 14-35-14 ಸೇರಿದಂತೆ ವಿವಿಧ ಕಾಂಪ್ಲೆಕ್ಸ್ ಗೊಬ್ಬರಗಳ ಬೆಲೆಗಳಲ್ಲಿಯೂ ಹೆಚ್ಚಳವಾಗಿದ್ದು, ಕೃಷಿ ಈಗಾಗಲೇ ನಷ್ಟದಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ ಈ ಏರಿಕೆ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರ ಕಾಂಪ್ಲೆಕ್ಸ್ ರಸಗೊಬ್ಬರಗಳಿಗೆ ನೀಡುತ್ತಿದ್ದ ಸಹಾಯಧನವನ್ನು ಸಮರ್ಪಕವಾಗಿ ಹೆಚ್ಚಿಸದಿರುವುದು ಹಾಗೂ ಬೆಲೆ ನಿಯಂತ್ರಣ ವ್ಯವಸ್ಥೆಯನ್ನು ದುರ್ಬಲಗೊಳಿಸಿರುವುದೇ ಗೊಬ್ಬರ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ ಎಂದು ರೈತ ಸಂಘ ಟೀಕಿಸಿತು. ರಸಗೊಬ್ಬರ ಕಂಪನಿಗಳು ಮತ್ತು ವ್ಯಾಪಾರಿಗಳ ನಿಯಂತ್ರಣವಿಲ್ಲದ ಬೆಲೆ ನೀತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಆರೋಪಿಸಲಾಯಿತು.
‘ಕೆಲವೆಡೆ ಕಳಪೆ ಗುಣಮಟ್ಟದ ರಸಗೊಬ್ಬರ ಮತ್ತು ಬೀಜಗಳನ್ನು ದುಬಾರಿ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಕಾಳಸಂತೆ, ಅಕ್ರಮ ದಾಸ್ತಾನು ಮತ್ತು ಕಳಪೆ ಗುಣಮಟ್ಟದ ಗೊಬ್ಬರ ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ಎಫ್ಐಡಿ (FID) ವ್ಯವಸ್ಥೆಯ ಮೂಲಕ ರಸಗೊಬ್ಬರ ವಿತರಣೆ ಮಾಡುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಬಡ ಹಾಗೂ ಅಕ್ಷರಜ್ಞಾನ ಕಡಿಮೆ ಇರುವ ರೈತರಿಗೆ ತೊಂದರೆಯಾಗುತ್ತಿದೆ. ರೈತ ಸ್ನೇಹಿ ಹಾಗೂ ಸರಳ ವಿತರಣಾ ವ್ಯವಸ್ಥೆಯನ್ನು ಜಾರಿಗೊಳಿಸಿ ಪ್ರತಿಯೊಬ್ಬ ರೈತನಿಗೂ ಅಗತ್ಯ ಪ್ರಮಾಣದಲ್ಲಿ ಗೊಬ್ಬರ ದೊರೆಯುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತಗಳಿಂದ ರಸಗೊಬ್ಬರಗಳ ಬೆಲೆ ಮೇಲೆ ಪರಿಣಾಮ ಬಿದ್ದಿದೆ. ಆದರೆ ಅದರ ಸಂಪೂರ್ಣ ಹೊರೆ ರೈತರ ಮೇಲೆ ಹಾಕುವುದು ಸರಿಯಲ್ಲ. ದೇಶದ ಆಹಾರ ಭದ್ರತೆ ಹಾಗೂ ಕೃಷಿ ಕ್ಷೇತ್ರದ ಉಳಿವಿಗಾಗಿ ಸರ್ಕಾರಗಳು ತುರ್ತು ಮಧ್ಯಪ್ರವೇಶ ಮಾಡಿ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆ ಮಾಡಬೇಕು’ ಎಂದು ತಿಳಿಸಿದರು.
ಇದೇ ವೇಳೆ ಪೆಟ್ರೋಲ್, ‘ಡೀಸೆಲ್ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಇಂಧನಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು ಹಾಗೂ ವಿದ್ಯುತ್ ಕ್ಷೇತ್ರದ ಖಾಸಗೀಕರಣ ನೀತಿಯನ್ನು ಹಿಂಪಡೆಯಬೇಕು’ ಒತ್ತಾಯಿಸಿದರು.
‘ಕೃಷಿ ಕ್ಷೇತ್ರ ಈಗಾಗಲೇ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ನೀರಿನ ಸಮಸ್ಯೆ, ಸಾಲದ ಹೊರೆ ಮತ್ತು ಮಾರುಕಟ್ಟೆ ಅನಿಶ್ಚಿತತೆಗಳಿಂದ ತೀವ್ರ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ರಸಗೊಬ್ಬರ ಕೊರತೆ ಹಾಗೂ ಬೆಲೆ ಏರಿಕೆ ರೈತರ ಆತ್ಮವಿಶ್ವಾಸವನ್ನೇ ಕುಗ್ಗಿಸುತ್ತಿದೆ. ಭೂಮಿ ಮತ್ತು ನೀರಿನ ಜೊತೆಗೆ ಕೃಷಿಗೆ ಅಗತ್ಯವಾದ ರಸಗೊಬ್ಬರಗಳ ಪೂರೈಕೆ ಸರ್ಕಾರದ ಜವಾಬ್ದಾರಿಯಾಗಿದ್ದು, ರೈತರ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಕ್ರಮಗಳನ್ನು ಕೈಬಿಡಬೇಕು’ ಎಂದು ಅವರು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | 75 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ! ಗೊಗಡಿಹಾಳ ಶಾಲೆಯ ದುಸ್ಥಿತಿ ಖಂಡಿಸಿ ಎಐಡಿಎಸ್ಒ ಪ್ರತಿಭಟನೆ
ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷ ಭೀಮಶಾ ಬಡದಾಳ, ಉಪಾಧ್ಯಕ್ಷರಾದ ದೇವು ಬಿರಾದಾರ, ರೇವಣಸಿದ್ದಪ್ಪ ಪಾಟೀಲ, ಶರಣಪ್ಪ ವೆಚ್ಚಾ ಪೂಜಾರಿ, ಸಿದ್ದು ಎನ್ಎಸ್ಎಲ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಭಾಗಗಳ ರೈತರು ಭಾಗವಹಿಸಿದ್ದರು.





