ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ಜಾರಿಗೊಳಿಸಲು ರಾಜ್ಯ ಸರ್ಕಾರ 2,500 ಐಟಿ ಶಿಕ್ಷಕರ ನೇಮಕಾತಿ ಘೋಷಿಸಿರುವುದನ್ನು ಎಐಡಿಎಸ್ಓ ತೀವ್ರವಾಗಿ ವಿರೋಧಿಸಿದೆ. ಎಲ್ಲ ಹುದ್ದೆಗಳನ್ನೂ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಿಗೆ (ಕೆಪಿಎಸ್) ಮೀಸಲಿಟ್ಟಿರುವುದು ಹಳ್ಳಿಯ ಸರ್ಕಾರಿ ಶಾಲೆಗಳ ವಿರುದ್ಧದ ತಾರತಮ್ಯವಾಗಿದೆ ಎಂದು ಸಂಘಟನೆ ಆರೋಪಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ದೇವದುರ್ಗ, ‘ಇತ್ತೀಚೆಗೆ ನೇಮಕಗೊಂಡ 11 ಸಾವಿರ ಅತಿಥಿ ಶಿಕ್ಷಕರ ಹುದ್ದೆಗಳಲ್ಲಿಯೂ ಕೆಪಿಎಸ್ ಶಾಲೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವರ್ಗಾವಣೆಯಲ್ಲಿಯೂ ಇದೇ ನೀತಿ ಅನುಸರಿಸಲಾಗುತ್ತಿದ್ದು, ದಶಕಗಳಿಂದ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳನ್ನು ಕಡೆಗಣಿಸಲಾಗುತ್ತಿದೆ’ ಎಂದು ದೂರಿದ್ದಾರೆ.
‘ಕೆಪಿಎಸ್ ಶಾಲೆಗಳ ಹೆಸರಿನಲ್ಲಿ ಸಾವಿರಾರು ಗ್ರಾಮೀಣ ಸರ್ಕಾರಿ ಶಾಲೆಗಳ ವಿಲೀನ ಪ್ರಕ್ರಿಯೆ ನಡೆಯುತ್ತಿದ್ದು, ಇದನ್ನು ವಿರೋಧಿಸಿ ಎಐಡಿಎಸ್ಓ ಹಾಗೂ ಸಾರ್ವಜನಿಕ ಶಿಕ್ಷಣ ಸಮಿತಿಯ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಯುತ್ತಿದೆ. ಸಾವಿರಾರು ಶಾಲೆಗಳ ವಿಲೀನಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರೂ, ಇದೀಗ ನೇಮಕಾತಿ ಹಾಗೂ ಸೌಲಭ್ಯಗಳ ಹಂಚಿಕೆಯಲ್ಲಿ ಕೆಪಿಎಸ್‌ಗೆ ಆದ್ಯತೆ ನೀಡುವ ಮೂಲಕ ಹಳ್ಳಿಯ ಶಾಲೆಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.
‘ರಾಜ್ಯದಲ್ಲಿ ಸುಮಾರು 7 ಸಾವಿರ ಏಕೋಪಾಧ್ಯಾಯ ಶಾಲೆಗಳಿದ್ದು, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಅನೇಕ ಶಾಲೆಗಳು ಶಿಕ್ಷಕರ ತೀವ್ರ ಕೊರತೆಯನ್ನು ಎದುರಿಸುತ್ತಿವೆ. ಇಂತಹ ಶಾಲೆಗಳಿಗೆ ಆದ್ಯತೆ ನೀಡಿ ಶಿಕ್ಷಕರನ್ನು ನೇಮಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಪೋಕ್ಸೊ ಪ್ರಕರಣದಲ್ಲಿ ಲಂಚ ಆರೋಪ; ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು
‘ಗ್ರಾಮೀಣ ಸರ್ಕಾರಿ ಶಾಲೆಗಳ ಉಳಿವಿಗಾಗಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಪ್ರೇಮಿ ಸಾರ್ವಜನಿಕರು “ನಮ್ಮೂರ ಶಾಲೆ ಉಳಿಸಿ” ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕು’ ಎಂದು ಎಐಡಿಎಸ್ಓ ಕರೆ ನೀಡಿದೆ.





