ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಿಡಿಎ ಲೇಔಟ್‌ನಲ್ಲಿರುವ ಕಸ್ತೂರಿ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಲಾಡ್ಜ್ ಮ್ಯಾನೇಜರ್‌ವೊಬ್ಬನನ್ನು ಪೊಲೀಸರು ಬಂಧಿಸಿ, ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಅಕ್ರಮ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಐಪಿಎಸ್ ಅವರ ನಿರ್ದೇಶನದ ಮೇರೆಗೆ, ಉಪ ಪೊಲೀಸ್ ಆಯುಕ್ತರಾದ ಶಾಲೂ, ಐಪಿಎಸ್ ಹಾಗೂ ಪ್ರವೀಣ್ ಎಚ್. ನಾಯಕ್ ಮತ್ತು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಅಶೋಕ ನಗರ ಪೊಲೀಸ್ ಠಾಣೆ ಪಿಐ ಸತೀಶ ಕಣೀಮೇಶ್ವರ ನೇತೃತ್ವದ ತಂಡವು ಆ.6ರಂದು ಖಚಿತ ಮಾಹಿತಿ ಆಧರಿಸಿ ಕಸ್ತೂರಿ ಲಾಡ್ಜ್ ಮೇಲೆ ದಾಳಿ ನಡೆಸಿತು. ಈ ವೇಳೆ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಅವಿನಾಶ ತಂದೆ ಅಣ್ಣಪ್ಪ ನಡುವಿನಕೇರಿ (27) ಎಂಬಾತನನ್ನು ಬಂಧಿಸಲಾಗಿದೆ.
ದಾಳಿಯ ಸಂದರ್ಭದಲ್ಲಿ ಮೂವರು ಮಹಿಳೆಯರನ್ನು ಪೊಲೀಸರು ಸಂರಕ್ಷಿಸಿದ್ದು, ಬಂಧಿತ ಆರೋಪಿತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎಎಸ್‌ಐ ಶಿವಶರಣಪ್ಪ ಹಾಗೂ ಪೊಲೀಸ್ ಸಿಬ್ಬಂದಿ ಆಕಾಶ, ಸಂತೋಷ ಪವಾರ್, ಶ್ವೇತಾ ಮತ್ತು ಬೋರಮ್ಮ ಪಾಲ್ಗೊಂಡಿದ್ದರು.
ಇದನ್ನು ಓದಿದ್ದೀರಾ? ಕಲಬುರಗಿ | ಹರಿಯುವ ನದಿಯಲ್ಲೇ ಶವ ಸಾಗಿಸಿ ಅಂತ್ಯಕ್ರಿಯೆ
ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ ಅಶೋಕ ನಗರ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರು ಶ್ಲಾಘಿಸಿದ್ದಾರೆ.





