ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿ ವಿಶೇಷ ಪೋಕ್ಸೊ ನ್ಯಾಯಾಲಯ ತೀರ್ಪು ನೀಡಿದೆ. ಅಲ್ಲದೆ, ಸಂತ್ರಸ್ತ ಬಾಲಕಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ₹5 ಲಕ್ಷ ಪರಿಹಾರಧನ ನೀಡುವಂತೆ ಆದೇಶಿಸಿದೆ.
ಕಮಲಾನಗರದ ನಿವಾಸಿ ಹಾಗೂ ಆಟೋ ಚಾಲಕ ಗುಂಡಪ್ಪ ಗೋವಿಂದಪ್ಪ ಕುಶಾಳಕರ್ (26) ಶಿಕ್ಷೆಗೆ ಗುರಿಯಾದ ಆರೋಪಿ. 2024ರ ಮೇ 19ರಂದು ಆತ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಸುಲ್ತಾನಪುರ ಕ್ರಾಸ್‌ಗೆ ಕರೆಸಿಕೊಂಡು, ಬಳಿಕ ಕಮಲಾಪುರದ ಖಾಸಗಿ ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದನು ಎಂದು ತನಿಖೆಯಲ್ಲಿ ದೃಢಪಟ್ಟಿತ್ತು.
ಈ ಕುರಿತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಅಪಹರಣ, ಲೈಂಗಿಕ ದೌರ್ಜನ್ಯ ಹಾಗೂ ಪೋಕ್ಸೊ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಪೊಲೀಸ್ ಇನ್‌ಸ್ಪೆಕ್ಟರ್ ಸಂತೋಷ ಎಲ್. ತಟ್ಟೆಪಳ್ಳಿ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕ್ಸೊ) ನ್ಯಾಯಾಲಯ-ಎಫ್‌ಟಿಎಸ್‌ಸಿ-1ರ ನ್ಯಾಯಾಧೀಶ ಎಸ್.ಎಲ್. ಚವ್ಹಾಣ, ಆರೋಪಿಯ ವಿರುದ್ಧದ ಅಪರಾಧವು ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ ಎಂದು ತೀರ್ಮಾನಿಸಿದರು.
ತೀರ್ಪಿನಂತೆ ಪೋಕ್ಸೊ ಕಾಯ್ದೆಯಡಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹25 ಸಾವಿರ ದಂಡ, ಅಪಹರಣ ಪ್ರಕರಣದಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ₹25 ಸಾವಿರ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ ಸರಳ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಿದೆ. ಎರಡೂ ದಂಡ ಸೇರಿ ಆರೋಪಿಗೆ ಒಟ್ಟು ₹50 ಸಾವಿರ ದಂಡ ವಿಧಿಸಲಾಗಿದೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ವಾದ ಮಂಡಿಸಿದ್ದು, ಪ್ರಕರಣದ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಸಬ್ ಅರ್ಬನ್ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಭುರಾಜ, ಬ್ರಹ್ಮಾನಂದ ಮತ್ತು ಅಮೃತರಾಜ್ ಸಹಕರಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಜಿಲ್ಲಾ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ; ಶ್ವಾನದಳದಿಂದ ಶೋಧ ಕಾರ್ಯಾಚರಣೆ
ಇದೇ ವೇಳೆ, ಸಂತ್ರಸ್ತ ಬಾಲಕಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ತೀರ್ಪಿನ ದಿನಾಂಕದಿಂದ ಒಂದು ತಿಂಗಳೊಳಗೆ ₹5 ಲಕ್ಷ ಪರಿಹಾರಧನ ಬಿಡುಗಡೆ ಮಾಡುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.





