ದೇವಲ ಗಾಣಗಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಸರಗಳ್ಳತನ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಮೂವರು ಅಂತರರಾಜ್ಯ ಕಳ್ಳರನ್ನು ಬಂಧಿಸಿ, ಅವರಿಂದ 40 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಸೋಲಾಪುರ ರಸ್ತೆಯ ಜೋಪಡಿಪಟ್ಟಿ ನಿವಾಸಿಗಳಾದ ಭಗತ್ ಸಿಂಗ್ ಅಶೋಕ ಸಾಳುಂಕೆ, ಬಾದಲ್ ಅಶೋಕ ಸಾಳುಂಕೆ ಹಾಗೂ ಅಭಿಮನ್ಯು ಅರ್ಜುನ ಡಾಂಗೆ ಎಂದು ಗುರುತಿಸಲಾಗಿದೆ.
2025ರ ನವೆಂಬರ್ 5ರಂದು ದೇವಲ ಗಾಣಗಾಪುರ ಬಸ್ ನಿಲ್ದಾಣದಲ್ಲಿ ಅಶ್ವಿನಿ ಎಂಬ ಮಹಿಳೆಯ 20 ಗ್ರಾಂ ತೂಕದ ಚಿನ್ನದ ತಾಳಿ ಸರ ಕಳವಾಗಿತ್ತು. ಬಳಿಕ 2026ರ ಫೆಬ್ರವರಿ 16ರಂದು ದೇವಲ ಗಾಣಗಾಪುರ ಸಂಗಮದ ಭೀಮಾ ನದಿ ದಂಡೆಯಲ್ಲಿ ಕಲ್ಯಾಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಲಾವತಿ ಅವರ ಚಿನ್ನದ ತಾಳಿ ಸರ, ತಾಳೆಗುಂಡು ಹಾಗೂ ಜೋರಮಾಳ ಸೇರಿದಂತೆ ಒಟ್ಟು 40 ಗ್ರಾಂ ತೂಕದ ಚಿನ್ನಾಭರಣಗಳನ್ನು ದುಷ್ಕರ್ಮಿಗಳು ಕಳವು ಮಾಡಿಕೊಂಡು ಪರಾರಿಯಾಗಿದ್ದರು.
ಎರಡೂ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಅಡ್ಡೂರು ಶ್ರೀನಿವಾಸು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ್ ಮೇಘಣ್ಣನವರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಡಿವೈಎಸ್ಪಿ ತಮ್ಮರಾಯ ಪಾಟೀಲ್ ಹಾಗೂ ಅಫಜಲಪುರ ವೃತ್ತದ ಸಿಪಿಐ ಲಖನ್ ಮಸಗುಪ್ಪಿ ಅವರ ನೇತೃತ್ವದಲ್ಲಿ ದೇವಲ ಗಾಣಗಾಪುರ ಠಾಣೆಯ ಪಿಎಸ್‌ಐ ಸಂಗೀತಾ ಸಿಂಧೆ ಮತ್ತು ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಯಿತು.
ಇದನ್ನು ಓದಿದ್ದೀರಾ? ಕಲಬುರಗಿ | ಅಕ್ರಮ ಪಡಿತರ ಅಕ್ಕಿ ಸಾಗಾಟಕ್ಕೆ ಆಹಾರ ಇಲಾಖೆ ಬ್ರೇಕ್; ₹3.39 ಲಕ್ಷ ಮೌಲ್ಯದ ಅಕ್ಕಿ ಜಪ್ತಿ
ಬಂಧಿತರಿಂದ ಒಟ್ಟು 40 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ಇದೇ ರೀತಿಯ ಇತರ ಕೃತ್ಯಗಳಲ್ಲಿ ಇವರ ಭಾಗವಹಿಸುವಿಕೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





