ಕಲಬುರಗಿಯಲ್ಲಿ ಸೆ. 27ರಂದು ಹಮ್ಮಿಕೊಳ್ಳಲಾಗಿರುವ ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರ ‘ಬಸವಾದಿ ಶರಣರ ಹಿಂದೂ ಸಮಾವೇಶ’ಕ್ಕೆ ಅನುಮತಿ ನೀಡಬಾರದು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕನೇರಿ ಸ್ವಾಮೀಜಿ ಅವರ ಕಾರ್ಯಕ್ರಮವು ಸಮಾಜದಲ್ಲಿ ಅನಗತ್ಯ ಗೊಂದಲಕ್ಕೆ ಕಾರಣವಾಗಿ, ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮವನ್ನು ವಿರೋಧಿಸಿ ಬಸವ ಪರ ಸಂಘಟನೆಗಳು ಹಾಗೂ ಬಸವ ಭಕ್ತರು ಕಲಬುರಗಿಯಲ್ಲಿ ಸೆ. 25ರಂದು ಹಮ್ಮಿಕೊಂಡಿರುವ ಪ್ರತಿಭಟನೆ ನ್ಯಾಯೋಚಿತವಾಗಿದೆ. ಈ ಪ್ರತಿಭಟನೆಗೆ ಜಾಗತಿಕ ಲಿಂಗಾಯತ ಮಹಾಸಭಾದ ಸಂಪೂರ್ಣ ಬೆಂಬಲವಿದ್ದು, ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕ ಬಸವ ಭೂಮಿಯಾಗಿದೆ. ಬಸವಣ್ಣನವರ ತತ್ವ, ವಚನ ಸಾಹಿತ್ಯ ಹಾಗೂ ಶರಣ ಪರಂಪರೆಯನ್ನು ಉಳಿಸಿ ಬೆಳೆಸಲು ಈ ಭಾಗದಲ್ಲಿ ಅನೇಕ ಮಠಾಧೀಶರು, ಬಸವ ಪರ ಸಂಘಟನೆಗಳು ಹಾಗೂ ಬಸವ ಭಕ್ತರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕನೇರಿ ಸ್ವಾಮೀಜಿ ಅವರು ಇಲ್ಲಿ ಬಸವ ತತ್ವದ ಹೆಸರಿನಲ್ಲಿ ಕಾರ್ಯಕ್ರಮ ನಡೆಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಶರಣ ಪರಂಪರೆ ಮತ್ತು ಬಸವ ತತ್ವದ ಕುರಿತು ಸಮರ್ಪಕ ಅರಿವಿಲ್ಲದೆ ಕನೇರಿ ಸ್ವಾಮೀಜಿ ಬಸವಾದಿ ಶರಣರ ಸಂದೇಶ ಹಾಗೂ ವಚನ ಸಾಹಿತ್ಯವನ್ನು ಮನ ಬಂದಂತೆ ವ್ಯಾಖ್ಯಾನಿಸುತ್ತಿರುವುದರಿಂದ ಬಸವ ಭಕ್ತರಲ್ಲಿ ಗೊಂದಲ ಉಂಟಾಗುತ್ತಿದೆ. ಶರಣರ ಇತಿಹಾಸ ಮತ್ತು ಪರಂಪರೆಯನ್ನು ಗೌರವಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದ್ದಾರೆ.
ಕನೇರಿ ಸ್ವಾಮೀಜಿ ಅವರು ಈಗಾಗಲೇ ವಿವಿಧ ಸಂದರ್ಭಗಳಲ್ಲಿ ನ್ಯಾಯಾಲಯಗಳು ಹಾಗೂ ಜಿಲ್ಲಾಡಳಿತಗಳು ನಿರ್ಬಂಧಗಳನ್ನು ಎದುರಿಸಿದ್ದಾರೆ. 2026ರ ಜೂನ್ 28ರಂದು ಬಸವಕಲ್ಯಾಣದಲ್ಲಿ ನಡೆದ ಕಾರ್ಯಕ್ರಮಕ್ಕೂ ಅನುಮತಿ ನೀಡಲಾಗಿದ್ದರೂ, ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಅವರ ಭಾಷಣಕ್ಕೆ ಹೈಕೋರ್ಟ್ ನಿರ್ಬಂಧ ವಿಧಿಸಲಾಗಿತ್ತು. ಇಂತಹ ಹಿಂದಿನ ಬೆಳವಣಿಗೆಗಳ ನಡುವೆಯೂ ಸಮಾಜದಲ್ಲಿ ಗೊಂದಲ ಮತ್ತು ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದಾದ ಕಾರ್ಯಕ್ರಮಗಳನ್ನು ಮುಂದುವರಿಸಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಕೊಪ್ಪಳ | ಡಿಜೆ, ಪಟಾಕಿಗೆ ಗುಡ್ ಬೈ: ರಸ್ತೆ, ಬಾವಿ, ಶಾಲೆ ಅಂದಗೊಳಿಸಿದ ಗಣೇಶ ಮಂಡಳಿ ಯುವಕರು!
ಸಮಾಜದಲ್ಲಿ ಒಡಕು ಉಂಟು ಮಾಡುವ, ಪರಸ್ಪರ ನಿಂದನೆ ಮತ್ತು ಅಪಮಾನಕ್ಕೆ ಅವಕಾಶ ನೀಡುವ ಯಾವುದೇ ಕಾರ್ಯಕ್ರಮಗಳಿಂದ ಸಮಾಜಕ್ಕೆ ಪ್ರಯೋಜನವಿಲ್ಲ. ಬಸವಣ್ಣನವರ ಸಂದೇಶವು ಸಮಾನತೆ, ಕಾಯಕ, ದಾಸೋಹ, ಸಹಬಾಳ್ವೆ ಮತ್ತು ಮಾನವೀಯತೆಯ ಸಂದೇಶವಾಗಿದೆ. ಆದ್ದರಿಂದ ಬಸವ ತತ್ವದ ಹೆಸರಿನಲ್ಲಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನಗಳು ನಡೆಯಬಾರದು ಎಂದು ಹೇಳಿದ್ದಾರೆ.






