ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್‌ಪಿ) ಕೆ.ಜಿಗೆ ₹60ಕ್ಕೆ ಹೆಚ್ಚಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದರೆ ಮಾತ್ರ ದೆಹಲಿಗೆ ತೆರಳುವುದಾಗಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಚೂನಪ್ಪ ಪೂಜೇರಿ ಹೇಳಿದರು.
ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸುವ ತೀರ್ಮಾನದಿಂದಲೇ ಹುಬ್ಬಳ್ಳಿಗೆ ತೆರಳಿದ್ದೆವು. ಆದರೆ, ಪ್ರಹ್ಲಾದ ಜೋಶಿ ಅವರು ಇಬ್ಬರು ಶಾಸಕರ ಮೂಲಕ ಒತ್ತಡ ಹಾಕಿ ಹೋರಾಟ ಹಿಂಪಡೆಯುವಂತೆ ಮಾಡಿದರು. ಬಳಿಕ ನಾಲ್ಕು ಸುದ್ದಿಗೋಷ್ಠಿ ನಡೆಸಿರುವ ಜೋಶಿ ಅವರು ಎಂಎಸ್‌ಪಿ ವಿಚಾರವನ್ನು ತಿರುಚಿ ಗೊಂದಲ ಸೃಷ್ಟಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ಸಕ್ಕರೆಯ ಎಂಎಸ್‌ಪಿ ಹೆಚ್ಚಳ, ರಾಜ್ಯದ ಸಕ್ಕರೆ ಕಾರ್ಖಾನೆಗಳು ಉತ್ಪಾದಿಸುವ ಎಥೆನಾಲ್ ಅನ್ನು ಪೂರ್ಣ ಪ್ರಮಾಣದಲ್ಲಿ ಕೇಂದ್ರ ಸರ್ಕಾರ ಖರೀದಿಸುವುದು ಹಾಗೂ ಗೃಹಬಳಕೆ ಮತ್ತು ವಾಣಿಜ್ಯ ಬಳಕೆಗೆ ಪ್ರತ್ಯೇಕ ಸಕ್ಕರೆ ದರ ನಿಗದಿಪಡಿಸುವ ಕುರಿತು ತೀರ್ಮಾನ ಕೈಗೊಳ್ಳುವ ಅಧಿಕಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರಿಗಿದೆ. ಕೇವಲ ಚರ್ಚೆಗಾಗಿ ನಮ್ಮನ್ನು ದೆಹಲಿಗೆ ಕರೆದರೆ ಹೋಗುವುದಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರೆ ಮಾತ್ರ ತೆರಳುತ್ತೇವೆ” ಎಂದು ಸ್ಪಷ್ಟಪಡಿಸಿದರು.
ಎಥೆನಾಲ್ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೂ ರಾಜಕಾರಣ ಮಾಡಬಾರದು ಎಂದು ಚೂನಪ್ಪ ಪೂಜೇರಿ ಎಚ್ಚರಿಸಿದರು.



