ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರವಾದ ಕಲಬುರಗಿ ನಗರದಲ್ಲಿ 2024ರ ಜನವರಿ 14ರಂದು ಡಾ ಎಸ್ಎಂ ಪಂಡಿತ ರಂಗಮಂದಿರದಿಂದ ಮಹಾನಗರ ಪಾಲಿಕೆಯ ಗೇಟ್‌ವರೆಗೆ ಒಂದು ದಿನದ 11ನೇ ಚಿತ್ರಸಂತೆ ಆಯೋಜಿಸಲಾಗಿದ್ದು, ಹಿರಿಯ ಚಿತ್ರಕಲಾವಿದರು, ಯುವ ಚಿತ್ರಕಲಾವಿದರು ಮತ್ತು ಕಲಾವಿದ್ಯಾರ್ಥಿಗಳು ವಿವಿಧ ಮಾಧ್ಯಮದ ಚಿತ್ರಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ ಎಂದು ಎಂ ಹೆಚ್ ಬೆಳಮಗಿ ಹೇಳಿದರು.
ಕಲಬುರಗಿ ನಗರದ ಪತ್ರಿಕೆ ಭವನದಲ್ಲಿ 11ನೇ ಚಿತ್ರಸಂತೆ ಕುರಿತು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. “ಚಿತ್ರಕಲಾಕೃತಿಗಳು ಜನಸಾಮಾನ್ಯರಿಗೆ ತಲಪುವಂತೆ ಮಾಡಬೇಕೆನ್ನುವ ದೆಸೆಯಲ್ಲಿ ವಿಕಾಸ ಅಕಾಡೆಮಿ, ಕಲಬುರಗಿ, ಚೈತನ್ಯಮಯಿ ಟ್ರಸ್ಟ್, ಕಲಬುರಗಿ ವತಿಯಿಂದ ದೃಶ್ಯ, ಬೆಳಕು ಸಾಂಸ್ಕೃತಿಕ ಸಂಸ್ಥೆ, ಕಲಬುರಗಿ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ. ದಿ ಆರ್ಟ್ ಇಂಟಿಗ್ರೇಶನ್ ಸೊಸಾಯಿಟಿ, ಕಲಬುರಗಿ. ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ, ಕಲಬುರಗಿ. ಬಿಸಿಲು ಆರ್ಟ್ ಗ್ಯಾಲರಿ, ಕಲಬುರಗಿ, ಶರಣಬಸವ ವಿಶ್ವವಿದ್ಯಾಲಯ, ಕಲಬುರಗಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು. ಇವುಗಳ ಸಂಯುಕ್ತಾಶ್ರಯದಲ್ಲಿ ಚಿತ್ರಸಂತೆ ನಡೆಯಲಿದೆ” ಎಂದು ಹೇಳಿದರು.
“ಈ ಚಿತ್ರಸಂತೆಯಲ್ಲಿ ಪ್ರದರ್ಶನಗೊಳ್ಳಲಿರುವ ನಿಸರ್ಗಚಿತ್ರ, ಅಮೂರ್ತಚಿತ್ರ, ನೈಜಶೈಲಿಯ ಚಿತ್ರಗಳು, ಗ್ರಾಫಿಕ್ ಮಾಧ್ಯಮದ ಕಲಾಕೃತಿಗಳು, ಸಂಪ್ರದಾಯ ಶೈಲಿಯ ಚಿತ್ರಗಳು, ಕೋಲಾಜ್ ಮಾಧ್ಯಮದ ಚಿತ್ರಗಳು ಮತ್ತು ಶಿಲ್ಪಕಲಾಕೃತಿಗಳು ಹೀಗೆ ದೃಶ್ಯಕಲೆಯ ವಿವಿಧ ಪ್ರಕಾರದ ಕಲಾಕೃತಿಗಳನ್ನು ನಗರದ ವಾಣಿಜ್ಯೋದ್ಯಮಿಗಳು, ವೈದ್ಯರು, ಎಂಜಿನಿಯರ್‌ಗಳು, ವಾಸ್ತುಶಿಲ್ಪಿಗಳು ಮತ್ತು ಹೋಟೆಲ್ ಉದ್ಯಮಿಗಳಲ್ಲದೇ ಜನಸಾಮಾನ್ಯರೂ ಕೂಡಾ ಅತ್ಯಂತ ಕಡಿಮೆ ಬೆಲೆಗಳಲ್ಲಿ ತಮಗೆ ಇಷ್ಟವಾದ ಚಿತ್ರಕಲಾಕೃತಿಗಳನ್ನು ಖರೀದಿಸಿ, ತಮ್ಮ ಮನೆಯ ಗೋಡೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ” ಎಂದರು.
“ಈ ಚಿತ್ರಸಂತೆಯಲ್ಲಿ ₹100 ರಿಂದ ₹1 ಲಕ್ಷದವರೆಗಿನ ಬೆಲೆಯ ಕಲಾಕೃತಿಗಳು ಇರುತ್ತವೆ. ಜೊತೆಗೆ ಚಿತ್ರಸಂತೆ ನಡೆಯುವ ಸ್ಥಳದಲ್ಲಿ ಭಾವಚಿತ್ರ ರಚಿಸುವ ಚಿತ್ರಕಲಾವಿದರು ಇರುವುದರಿಂದ ನಿಮ್ಮದೇ ಭಾವಚಿತ್ರವನ್ನು ರಚಿಸಿಕೊಂಡು ಸಂತೋಷ ಪಡಬಹುದು ಒಟ್ಟಾರೆ ಸಾವಿರಾರು ಕಲಾವಿದರು ಕಲಾಸಕ್ತರು ಮತ್ತು ಕಲಾಪೋಷಕರನ್ನು ಒಂದೆಡೆ ಸೇರಿಸುವ ಈ ಚಿತ್ರಸಂತೆ ಒಂದು ದಿನದ ಮಟ್ಟಿಗೆ ನಗರದ ಡಾ. ಎಸ್ ಎಂ ಪಂಡಿತ ರಂಗಮಂದಿರದಿಂದ ಮಹಾನಗರ ಪಾಲಿಕೆಯ ಗೇಟ್‌ವರೆಗೆ ಹಬ್ಬದ ವಾತಾವರಣವನ್ನು ಸೃಷ್ಟಿಸಿ ಸಾರ್ವಜನಿಕರಲ್ಲಿ ಕಲಾಭಿಮಾನ ಬೆಳಸಲಿದೆ” ಎಂದರು.
“ಸಾಮಾನ್ಯವಾಗಿ ದೊಡ್ಡ ದೊಡ್ಡ ಮೆಟ್ರೊ ನಗರಗಳಲ್ಲಿ ನಡೆಯುವ ಕಲಾಮೇಳಗಳು, ಪ್ರತಿಷ್ಠಿತ ಕಲಾಗ್ಯಾಲರಿಗಳಲ್ಲಿ ನಡೆಯುವ ಪ್ರದರ್ಶನಗಳು ತುಂಬಾ ಕಮರ್ಷಿಯಲ್ ಆಗಿರುತ್ತವೆ. ಅಲ್ಲಿ ಜನಸಾಮಾನ್ಯರು ಚಿತ್ರಕಲಾಕೃತಿಗಳನ್ನು ಖರೀದಿಸಲು ಮತ್ತು ಕಲಾಕೃತಿಗಳನ್ನು ವೀಕ್ಷಿಸಲು ಸಾಧ್ಯವಾಗುವದಿಲ್ಲ. ಆದರೆ ಕಲಬುರಗಿಯಲ್ಲಿ ನಡೆಯುತ್ತಿರುವ ಈ ಚಿತ್ರಸಂತೆಗೆ ಅದ್ಯಾವುದರ ಚಿಂತೆಯಿರುವುದಿಲ್ಲ. ಕೇವಲ ಹಣವಂತರು ಮತ್ತು ವಾಣಿಜ್ಯ ಕಲಾಗ್ಯಾಲರಿಗಳವರು ಮಾತ್ರ ಉತ್ತಮವಾದ ಚಿತ್ರಕಲಾಕೃತಿಗಳನ್ನು ಖರೀದಿಸಬಹುದೆಂಬ ಅಪವಾದವನ್ನು ಸುಳ್ಳು ಮಾಡಿ ಶ್ರೀಸಾಮಾನ್ಯನಿಗೂ ಕೈಗೆಟುಕುವ ದರಗಳಲ್ಲಿ ದೊರೆಯಲಿ ಎಂಬುದೇ ಈ ಚಿತ್ರಸಂತೆಯ ಮುಖ್ಯ ಉದ್ದೇಶವಾಗಿದೆ” ಎಂದು ಹೇಳಿದರು.
“ಈ ಹಿಂದಿನ ಚಿತ್ರಸಂತೆಗಳಲ್ಲಿ ಸಿಕ್ಕಿರುವ ಅಭೂತಪೂರ್ವ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರೇರಣೆ ಹಾಗೂ ಪ್ರೋತ್ಸಾಹ ಪಡೆದು, 11ನೇ ಚಿತ್ರಸಂತೆಯನ್ನು ಇನ್ನೂ ಉತ್ತಮ ರೀತಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಇದೇ ಸಂದರ್ಭದಲ್ಲಿ ಮಕ್ಕಳಲ್ಲಿ ದೃಶ್ಯಕಲಾ ಪ್ರಜ್ಞೆಯನ್ನು ಬೆಳೆಸಲು ಚಿಕ್ಕಮಕ್ಕಳ ಚಿತ್ರಕಲಾ ಸ್ಪರ್ಧೆ ಮತ್ತು ಕುಂಭಕಲೆಯ ಪ್ರಾತ್ಯಕ್ಷತೆ ಮತ್ತು ಕಾರ್ಯಗಾರವನ್ನು ಏರ್ಪಡಿಸಲಾಗಿದೆ. ಸುಮಾರು 500 ಕ್ಕೂ ಹೆಚ್ಚು ಶಾಲಾ ಮಕ್ಕಳು ಭಾಗವಹಿಸುವ ನಿರೀಕ್ಷೆ ಇದೆ. ದೃಶ್ಯಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚಿತ್ರಸಂತೆಯಲ್ಲಿನ ಐದು ಅತ್ಯುತ್ತುಮವಾದ ಕಲಾ ಮಳಿಗೆಗಳಿಗೆ ತಲಾ ₹5,000 ನಗದು ಬಹುಮಾನ ನೀಡಿ ಗೌರವಿಸಲಾಗುವುದು” ಎಂದು ತಿಳಿಸಿದರು.
“ಇದೇ ಸಂದರ್ಭದಲ್ಲಿ 2023ನೇ ಸಾಲಿನ ರಮಣಶ್ರೀ ಪ್ರಶಸ್ತಿ ಪುರಸ್ಕೃತ ನಾಡೋಜ ಡಾ ಜೆ ಎಸ್ ಖಂಡೇರಾವ್, ಶರಣಬಸವ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕೃತ ಡಾ ಎ ಎಸ್ ಪಾಟೀಲ್, 2022-23ನೇ ಸಾಲಿನ ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಮಹಾದೇವಪ್ಪ ಶಿಲ್ಪಿ, 2023- 24ನೇ ಸಾಲಿನ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತ ಬಸವರಾಜ ಎಲ್. ಜಾನೆ, ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕೃತ ಮಾನಯ್ಯ ನಾ. ಬಡಿಗೇರ್ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹ
“ಈ ಚಿತ್ರ ಸಂತೆಯನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗ ಬಸವರಾಜ ದೇಶಮುಖ ಉದ್ಘಾಟಿಸಲಿದ್ದು, ವಿಕಾಸ ಅಕಾಡೆಮಿ, ಅಧ್ಯಕ್ಷ ಡಾ. ಬಸವರಾಜ ಪಾಟೀಲ ಸೇಡಂ ಅವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ. ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ, ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮುಡ, ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ. ನಮೋಶಿ, ಗುಲಬರ್ಗಾ ವಿಶ್ವವಿದ್ಯಾಲಯ, ಕುಲಪತಿ ದಯಾನಂದ ಅಗಸರ, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಶಶಿಕಾಂತ ಪಾಟೀಲ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮಾನವಿಕ ಹಾಗೂ ಭಾಷಾನಿಕಾಯದ ಡೀನ್ ಡಾ. ವಿಕ್ರಮ್ ವಿಸಾಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಚೈತನ್ಯಮಯಿ ಟ್ರಸ್ಟ್‌ನ ನಿರ್ದೇಶಕ ಡಾ ಎ ಎಸ್ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ” ಎಂದು ಹೇಳಿದರು.
“ಪುಷ್ಪಹಸ್ತ ನೃತ್ಯ ಕಲಾ ಕೇಂದ್ರ, ದೊರೆ ಆರ್ಕೆಸ್ಟ್ರಾ ಮತ್ತು ಸುಕಿ ಸಾಂಸ್ಕೃತಿಕ ಸಂಸ್ಥೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ” ಎಂದರು.
ಪತ್ರಿಕೆಗೋಷ್ಟಿಯಲ್ಲಿ ಚಿತ್ರಸಂತೆ ಪ್ರಧಾನ ಸಂಯೋಜಕ ಡಾ ಎ ಎಸ್ ಪಾಟೀಲ್, ಸಂಯೋಜಕರುಗಳಾದ ಎಂ ಹೆಚ್ ಬೆಳಮಗಿ, ವಿ ಬಿ ಬಿರಾದಾರ, ಡಾ. ಪರಶುರಾಮ ಪಿ ಇದ್ದರು.