ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ‘ತ್ರಿವೇಣಿ ಸಂಗಮ ಪ್ರಶಸ್ತಿ’ ಹಾಗೂ ‘ವಿಜ್ಞಾನ ರತ್ನ ಪ್ರಶಸ್ತಿ’ ಪ್ರದಾನ ಸಮಾರಂಭದ ಜೊತೆಗೆ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಕಲಬುರಗಿ ರಂಗಾಯಣ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಪ್ರಸ್ತಾವಿಕವಾಗಿ ಡಾ. ಗವಿಸಿದ್ದಪ್ಪ ಪಾಟೀಲ್ ಮಾತನಾಡಿ, ಸಿರಿಗನ್ನಡ ವೇದಿಕೆ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ದಿಗೆ ಹಲವು ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ನಗರ ಪ್ರದೇಶಗಳ ಜೊತೆಗೆ ಚಿಂಚೋಳಿ, ಕುರಿಕೋಟ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿಯೂ ತನ್ನ ಚಟುವಟಿಕೆಗಳನ್ನು ವಿಸ್ತರಿಸುತ್ತಿದೆ ಎಂದರು. ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಅವರನ್ನು ಮುಖ್ಯವಾಹಿನಿಗೆ ತರುವುದು ವೇದಿಕೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್ ಹಾಗೂ ರಮಾಬಾಯಿ ಅಂಬೇಡ್ಕರ್ ಅವರ ಸಾಧನೆಗಳನ್ನು ಸ್ಮರಿಸಿದ ಅವರು, ಮಹಿಳಾ ಶಿಕ್ಷಣ ಮತ್ತು ಸಮಾಜ ಪರಿವರ್ತನೆಯಲ್ಲಿ ಅವರ ಕೊಡುಗೆ ಅಪಾರವಾಗಿದೆ. ಈ ಮಹನೀಯರ ಸ್ಮರಣಾರ್ಥವಾಗಿ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಸಾಧಕರಿಗೆ ಇದು ಮತ್ತಷ್ಟು ಉತ್ತೇಜನ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.
ಉದ್ಘಾಟಕರಾಗಿ ಮಾತನಾಡಿದ ಡಾ. ಜಯದೇವಿ ಗಾಯಕವಾಡ, ಸಾವಿತ್ರಿಬಾಯಿ ಫುಲೆ ಅವರು 1848ರಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಶಾಲೆಯನ್ನು ಆರಂಭಿಸುವ ಮೂಲಕ ಶಿಕ್ಷಣ ಕ್ರಾಂತಿಗೆ ಚಾಲನೆ ನೀಡಿದ ವಿಚಾರವನ್ನು ಉಲ್ಲೇಖಿಸಿದರು. ಫಾತಿಮಾ ಶೇಖ್ ಮತ್ತು ಜ್ಯೋತಿಬಾ ಫುಲೆ ಅವರೊಂದಿಗೆ ಸೇರಿ ಮೌಢ್ಯತೆ ವಿರುದ್ಧ ಹೋರಾಡಿ ಸಮಾಜದಲ್ಲಿ ಜಾಗೃತಿ ಮೂಡಿಸಿದುದನ್ನು ಸ್ಮರಿಸಿದರು. ಮಹಿಳೆಯರು ಇಂದಿನ ಸ್ಥಾನಮಾನಕ್ಕೇರಲು ಇವರ ತ್ಯಾಗವೇ ಕಾರಣವಾಗಿದೆ ಎಂದು ಹೇಳಿದರು.

ರಮಾಬಾಯಿ ಅಂಬೇಡ್ಕರ್ ಕುರಿತು ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರ ವಿದ್ಯಾಭ್ಯಾಸ ಹಾಗೂ ಸಾಧನೆಗೆ ಬೆನ್ನೆಲುಬಾಗಿ ನಿಂತ ಪ್ರೇರಣಾದಾಯಕ ವ್ಯಕ್ತಿತ್ವ ಎಂದು ವಿವರಿಸಿದರು. ಇದೇ ವೇಳೆ ಡಾ. ಸಿ.ವಿ. ರಾಮನ್ ಅವರ ವಿಜ್ಞಾನ ಕ್ಷೇತ್ರದ ಕೊಡುಗೆಗಳನ್ನು ಸ್ಮರಿಸಿ, ಭಾರತೀಯರ ವೈಜ್ಞಾನಿಕ ಸಾಧನೆಗೆ ಅವರು ನೀಡಿದ ಪ್ರಭಾವ ಅಪಾರವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ನಿರ್ದೇಶಕ ಡಾ. ಸತೀಶ್ ಕುಮಾರ ಹೊಸಮನಿ ಅವರು ‘ಸಾಕಿ ಕೇಳಿದ ರುಬಾಯಿಗಳು’ ಕೃತಿಯನ್ನು ಲೋಕಾರ್ಪಣೆ ಮಾಡಿದರು. ಮಾತನಾಡಿದ ಅವರು, ರುಬಾಯಿ ಕಾವ್ಯವು ಇರಾನ್‌ನಲ್ಲಿ ಹುಟ್ಟಿ ಫಾರಸಿ ಕವಿ ಉಮರ್ ಖಯ್ಯಾಮ್ ಅವರಿಂದ ಪ್ರಸಿದ್ಧಿ ಪಡೆದ ವಿಶಿಷ್ಟ ಕಾವ್ಯ ಪ್ರಕಾರವಾಗಿದೆ. ಪ್ರತಿಮೆ ಮತ್ತು ರೂಪಕಗಳ ಮೂಲಕ ಜೀವನಾನುಭವವನ್ನು ವ್ಯಕ್ತಪಡಿಸುವ ಈ ಶೈಲಿಯಲ್ಲಿ ಡಾ. ಜಯದೇವಿ ಗಾಯಕವಾಡ ಅವರು ಸುಮಾರು ಐನೂರು ರುಬಾಯಿಗಳನ್ನು ರಚಿಸಿರುವುದು ವಿಶೇಷ ಸಾಧನೆ ಎಂದು ಹೇಳಿದರು.

ಡಾ. ಜಯದೇವಿ ಗಾಯಕವಾಡ ಅವರು ನಾಡಿನ ಶ್ರೇಷ್ಠ ಲೇಖಕಿಯಾಗಿ ಹೊರಹೊಮ್ಮಿದ್ದು, ಅವರಿಗೆ ಸರ್ಕಾರದಿಂದ ಇನ್ನಷ್ಟು ಉನ್ನತ ಮಟ್ಟದ ಗೌರವಗಳು ದೊರಕಬೇಕು ಎಂದು ಅವರು ಅಭಿಪ್ರಾಯಪಟ್ಟರು. ಜೊತೆಗೆ, ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಶಿಕ್ಷಣ ಪಡೆಯಲು ಉತ್ತೇಜಿಸಬೇಕು ಎಂದು ಸಲಹೆ ನೀಡಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಹಾಗೂ ಆಕಾಶವಾಣಿ ನಿವೃತ್ತ ಕಾರ್ಯನಿರ್ವಾಹಕ ಡಾ. ಸದಾನಂದ ಪೆರ್ಲ, ಕಲ್ಯಾಣ ಕರ್ನಾಟಕ ಭಾಗದ ಸಾಧಕರು ಕೀಳರಿಮೆ ಬಿಟ್ಟು ಆತ್ಮವಿಶ್ವಾಸದಿಂದ ಮುಂದುವರಿಯಬೇಕು ಎಂದು ಹೇಳಿದರು. “ಕೊಡುವ ಕೈ ಮತ್ತು ಪಡೆಯುವ ಕೈ ಶುದ್ಧವಾಗಿರಬೇಕು” ಎಂಬ ಸಂದೇಶ ನೀಡುತ್ತಾ, ಯೋಗ್ಯತೆ ಮತ್ತು ಅವಕಾಶಗಳ ನಡುವಿನ ಅಂತರ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದರು.

ಮುಖ್ಯ ಅತಿಥಿಗಳಾದ ವೈದ್ಯಾಧಿಕಾರಿ ಡಾ. ಸಂಧ್ಯಾ ಎಸ್. ಕಾನೇಕರ ಮಾತನಾಡಿ, ಮಹಿಳೆಯರ ಸಾಧನೆಗೆ ಕುಟುಂಬದ ಬೆಂಬಲ ಅತ್ಯಂತ ಮುಖ್ಯವಾಗಿದೆ ಎಂದರು. ಹಿರಿಯ ಸಾಹಿತಿ ಡಾ. ಶೋಭಾದೇವಿ ಚೆಕ್ಕಿ ಅವರು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದನ್ನು ಪ್ರಶಂಸಿಸಿದರು.
ಪ್ರೊ. ಶಿವರಾಜ ಪಾಟೀಲ ಮಾತನಾಡಿ, ಪ್ರಶಸ್ತಿ ಪಡೆದ ನಂತರ ವ್ಯಕ್ತಿಯಲ್ಲಿ ಉತ್ತಮ ಪರಿವರ್ತನೆ ಕಂಡು ಬರಬೇಕು. ಸಮಾಜಮುಖಿ ಚಿಂತನೆ ಮತ್ತು ಹೊಣೆಗಾರಿಕೆಯಿಂದ ಮುಂದುವರಿಯಬೇಕು ಎಂದು ಸಲಹೆ ನೀಡಿದರು.

ಬೇಲೂರು ಉರಿಲಿಂಗಪೆದ್ದಿ ಮಠದ ಪೂಜ್ಯ ಶ್ರೀ ಪಂಚಾಕ್ಷರಿ ಸ್ವಾಮೀಜಿ ಸಾನಿಧ್ಯವಹಿಸಿ ಹಿತವಚನ ನುಡಿದರು.
ಈ ಸಂದರ್ಭದಲ್ಲಿ ಒಟ್ಟು ನಲವತ್ತಾರು ಮಂದಿಗೆ ಸಿ.ವಿ. ರಾಮನ್ ವಿಜ್ಞಾನ ರತ್ನ ಪ್ರಶಸ್ತಿ ಸೇರಿದಂತೆ ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್ ಹಾಗೂ ರಮಾಬಾಯಿ ಅಂಬೇಡ್ಕರ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಡಾ. ಪೀರಪ್ಪ ಸಜ್ಜನ ಹಾಗೂ ಡಾ. ಶೋಭಾದೇವಿ ಚೆಕ್ಕಿ ಪ್ರಾರ್ಥನೆ ಸಲ್ಲಿಸಿದರು. ಡಾ. ರಾಜಕುಮಾರ ಮಾಳಗೆ ಕಾರ್ಯಕ್ರಮ ನಿರೂಪಣೆ ಮಾಡಿದರು. ಡಾ. ಸಿದ್ದಪ್ಪ ಹೊಸಮನಿ ವಂದಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಈದ್ ಸೌಹಾರ್ದ ಕೂಟ, ಪುಸ್ತಕ ಬಿಡುಗಡೆ ಕಾರ್ಯಕ್ರಮ
ಈ ಸಂದರ್ಭದಲ್ಲಿ ಶಾಂತಾ ಪಸ್ತಾಪೂರ, ಡಾ. ಸಿದ್ದಪ್ಪ ಹೊಸಮನಿ, ಡಾ. ಶೀಲಾದೇವಿ ಬಿರಾದಾರ, ಡಾ. ಪೀರಪ್ಪ ಸಜ್ಜನ, ಸಿದ್ದರಾಮ ಸರಸಂಬಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.





