ಸರ್ವೀಸ್ ಬುಕ್ ಕಳುಹಿಸಲು 15 ಸಾವಿರ ರೂ. ಲಂಚ ಪಡೆದ ಪ್ರಕರಣದಲ್ಲಿ ಕಲಬುರಗಿ ತಾಲೂಕು ಪಂಚಾಯಿತಿಯ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಹಾಗೂ ದ್ವಿತೀಯ ದರ್ಜೆ ಸಹಾಯಕನಿಗೆ ಜಿಲ್ಲಾ ನ್ಯಾಯಾಲಯ ತಲಾ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ ತಲಾ 20 ಸಾವಿರ ರೂ. ದಂಡ ವಿಧಿಸಿದೆ.
ನಿವೃತ್ತ ಇಒ ಅಶೋಕ ರೆಡ್ಡಿ ಮತ್ತು ಎಸ್‌ಡಿಎ ನಿಜಲಿಂಗಪ್ಪ ಪಂಡಿತ್ ಶಿಕ್ಷೆಗೆ ಗುರಿಯಾದವರು.
ಪ್ರಕರಣದ ವಿವರದಂತೆ, ಕಲಬುರಗಿ ತಾಲೂಕಿನ ಕಿಣ್ಣಿಸಡಕ ಗ್ರಾಮ ಪಂಚಾಯಿತಿಯ ಪಿಡಿಒ ಶರಣಗೌಡ ಕವಿತಾಳ ಅವರನ್ನು ಜೇವರ್ಗಿ ತಾಲೂಕಿನ ಹುಲ್ಲೂರು ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡಲಾಗಿತ್ತು. ಈ ವೇಳೆ ಅವರ ಸರ್ವೀಸ್ ಬುಕ್ ಮತ್ತು ಕೊನೆಯ ವೇತನ ಪ್ರಮಾಣಪತ್ರ ಕಳುಹಿಸಲು ಆರೋಪಿಗಳು 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಸಂಬಂಧ ಶರಣಗೌಡ ಕವಿತಾಳ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಬಳಿಕ ನಿಜಲಿಂಗಪ್ಪ ಪಂಡಿತ್ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಲೋಕಾಯುಕ್ತ ಇನ್‌ಸ್ಪೆಕ್ಟರ್ ಕೆ.ಎಸ್. ಕಲ್ಲದೇವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀನಾರಾಯಣ, ಲಂಚ ಸ್ವೀಕರಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 7(ಬಿ) ಅಡಿಯಲ್ಲಿ ಇಬ್ಬರಿಗೂ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ₹35 ಸಾವಿರ ಲಂಚ ಸ್ವೀಕಾರ : ಲೋಕಾಯುಕ್ತ ಬಲೆಗೆ ಕೆಬಿಜೆಎನ್‌ಎಲ್‌ನ ಎಇಇ, ಜೆಇ
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ ಎಸ್. ಚಾಂದಕವಠ ವಾದ ಮಂಡಿಸಿದರು.





