ಚಿಂತಾಮಣಿ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೋನಕುಂಟ್ಲ ದೇವಸ್ಥಾನದ ಅರ್ಚಕ ವೃತ್ತಿಗೆ ಸಂಬಂಧಿಸಿದಂತೆ ಹಳೆಯ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ದೇವಸ್ಥಾನದ ಪೂಜಾ ಕೈಂಕರ್ಯಗಳ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ ಎಂದು ಹಾಲಿ ಅರ್ಚಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಹಕ್ಕಿಗಾಗಿ ರಂಗಪ್ಪ ಕುಟುಂಬ ಮತ್ತು ನರಸಪ್ಪ ಕುಟುಂಬದ ನಡುವೆ ದೀರ್ಘಕಾಲದ ಪೈಪೋಟಿ ನಡೆಯುತ್ತಿದೆ. 2012ರಲ್ಲಿ ಹೈಕೋರ್ಟ್ ಆದೇಶದಂತೆ ವರ್ಷಕ್ಕೊಮ್ಮೆ ಸರದಿಯ ಆಧಾರದ ಮೇಲೆ ಉಭಯ ಕುಟುಂಬದವರು ಪೂಜೆ ಸಲ್ಲಿಸಬೇಕೆಂದು ನಿರ್ಧರಿಸಲಾಗಿತ್ತು.
ಈ ಹಿಂದೆ ಕಮಿಷನರ್ ಕಚೇರಿಯಿಂದ ಬಂದಿದ್ದ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರು. ಆದರೆ ಈಗ ದಿಢೀರನೆ ತಹಶೀಲ್ದಾರ್ ಮಟ್ಟದಲ್ಲಿ ಆದೇಶ ಹೊರಬಿದ್ದಿರುವುದು ಹಾಲಿ ಅರ್ಚಕರ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ನಮಗೆ ನ್ಯಾಯಯುತವಾಗಿ ಸಿಗಬೇಕಾದ ಪೂಜಾ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ.ಈ ಆದೇಶವು ನಿಯಮಬಾಹಿರವಾಗಿದ್ದು, ಜಿಲ್ಲಾಡಳಿತವು ಕೂಡಲೇ ಮಧ್ಯಪ್ರವೇಶಿಸಿ ನಮಗೆ ನ್ಯಾಯ ಒದಗಿಸಬೇಕು ಎಂದು ಸಂತ್ರಸ್ತ ಅರ್ಚಕರು ಮನವಿ ಮಾಡಿದ್ದಾರೆ.
ದೇವಸ್ಥಾನದ ಪೂಜಾ ಕೈಂಕರ್ಯಗಳನ್ನು ಸಾಂಪ್ರದಾಯಿಕವಾಗಿ ‘ಎ’ ಮತ್ತು ‘ಬಿ’ ಎಂಬ ಎರಡು ಗುಂಪುಗಳಾಗಿ ವಿಂಗಡಿಸಿ ನಡೆಸಿಕೊಂಡು ಬರಲಾಗುತ್ತಿತ್ತು. ಒಂದು ವರ್ಷ ರಂಗಪ್ಪನವರ ವಂಶಸ್ಥರು(ಎ ಗುಂಪು) ಹಾಗೂ ಮಗದೊಂದು ವರ್ಷ ನರಸಪ್ಪನವರ ವಂಶಸ್ಥರು (ಬಿ ಗುಂಪು)ಪೂಜೆ ಮಾಡುವುದು ಹಿಂದಿನಿಂದಲೂ ನಡೆದುಬಂದ ಪದ್ಧತಿಯಾಗಿದೆ.ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸರದಿಯಲ್ಲಿ ಗೊಂದಲ ಉಂಟಾಗಿದ್ದು,ಒಂದು ಕುಟುಂಬಕ್ಕೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಕಳೆದ ಹಲವು ವರ್ಷಗಳಿಂದ ಪೂಜಾ ಹಕ್ಕಿಗಾಗಿ ನಾವು ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದೇವೆ.ತಹಶೀಲ್ದಾರ್ ಕಚೇರಿಗೆ ಹೋದರೆ ಡಿಸಿ ಕಚೇರಿಗೆ ಹೋಗಿ ಎನ್ನುತ್ತಾರೆ, ಡಿಸಿ ಕಚೇರಿಯಲ್ಲಿ ಕೇಳಿದರೆ ಮತ್ತೆ ತಹಶೀಲ್ದಾರ್ ಬಳಿ ಕಳುಹಿಸುತ್ತಾರೆ. ಧಾರ್ಮಿಕ ದತ್ತಿ ಇಲಾಖೆಯಲ್ಲೂ ನಮಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ, ಎಂದು ಹಾಲಿ ಕೆಲಸ ನಿರ್ವಹಿಸುತ್ತಿರುವ ಅರ್ಚಕ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ..?ಉಚಿತ ಹೊಲಿಗೆ ಯಂತ್ರಗಳಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ : ಶಾರ್ಲೆನ್
ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಸಾಂಪ್ರದಾಯಿಕವಾಗಿ ನಡೆದುಬಂದಿರುವ’ಎ’ ಮತ್ತು’ಬಿ’ ಸರದಿಯಂತೆ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಕುಟುಂಬವು ಒತ್ತಾಯಿಸಿದೆ. ಈಗಾಗಲೇ ಒಂದು ವರ್ಷದ ಅವಧಿಯನ್ನು ಪೂರ್ಣಗೊಳಿಸಿರುವ ಕುಟುಂಬದ ಬದಲಿಗೆ ಮುಂದಿನ ಸರದಿಯಲ್ಲಿರುವ ನರಸಪ್ಪನವರ ವಂಶಸ್ಥರಿಗೆ ಪೂಜಾ ಕೈಂಕರ್ಯಗಳನ್ನು ಹಸ್ತಾಂತರಿಸಬೇಕು ಎಂಬುದು ಇವರ ಪ್ರಮುಖ ಆಗ್ರಹವಾಗಿದೆ.




