ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಸೆ.27ರಂದು ಕಲಬುರಗಿಯಲ್ಲಿ ಹಮ್ಮಿಕೊಂಡಿರುವ ಬಸವಾದಿ ಶರಣರ ಹಿಂದೂ ಸಮಾವೇಶ ವಿರೋಧಿಸಿ ವಚನ ಸಾಹಿತ್ಯ ಸಂರಕ್ಷಣಾ ಸಮಿತಿಯು ನಾಳೆ (ಸೆ.25) ʼಕಲಬುರಗಿ ಚಲೋʼ ಕಾರ್ಯಕ್ರಮ ಹಮ್ಮಿಕೊಂಡಿದೆ.
ವಚನ ಸಾಹಿತ್ಯ ಸಂರಕ್ಷಣಾ ಸಮಿತಿಯ ಪ್ರಮುಖರಾದ ಯೋಗೇಶ ಸಿರಿಗೆರೆ, ಸಿದ್ರಾಮ ಶೆಟಗಾರ, ರವಿ ಪಾಪಡೆ, ಮಹೇಶ ಗೋರನಾಳಕರ್, ಜಗದೀಶ್ವರ ಬಿರಾದರ್, ಪ್ರವೀಣ ಎಕಲಾರೆ ಮತ್ತಿತರರು ಬುಧವಾರ ಬೀದರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಬಸವಣ್ಣನವರ ಕಾಯಕ, ದಾಸೋಹ, ಸಮಾನತೆ ಹಾಗೂ ಜಾತಿ-ಲಿಂಗ ತಾರತಮ್ಯ ವಿರೋಧಿ ಚಿಂತನೆಗಳನ್ನು ಬೇರೊಂದು ಧಾರ್ಮಿಕ ಚೌಕಟ್ಟಿನಲ್ಲಿ ಬಿಂಬಿಸುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ನಮ್ಮ ವಿರೋಧವಿದ್ದು, ಅದರ ವಿರುದ್ಧ ನಾಳೆ ಬೃಹತ್ ಪ್ರತಿಭಟನೆ ನಡೆಯಲಿದೆ” ಎಂದರು.
ಸಮಿತಿಯ ಸಿದ್ರಾಮ ಶಟಕಾರ ಮಾತನಾಡಿ, “ಬಸವತತ್ವವು ಶರಣರ ವಚನಗಳ ಮೂಲಕ ರೂಪುಗೊಂಡ ವೈಚಾರಿಕ ಪರಂಪರೆಯಾಗಿದ್ದು, ಅದನ್ನು ಯಾವುದೇ ಒಂದು ಧರ್ಮ ಅಥವಾ ಜಾತಿಗೆ ಸೀಮಿತಗೊಳಿಸಬಾರದು. ವಚನಗಳನ್ನು ಸಂದರ್ಭದಿಂದ ಬೇರ್ಪಡಿಸಿ ಅಥವಾ ತಿರುಚಿ ಬಳಸುವುದರಿಂದ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆಯಿದೆ. ಕನೇರಿ ಸ್ವಾಮೀಜಿ ಹಿಂದೂ ಸಮಾವೇಶ ನಡೆಸಿದರೆ ನಮ್ಮ ವಿರೋಧವಿಲ್ಲ. ಆದರೆ ಬಸವಾದಿ ಶರಣರನ್ನು ವೈದಿಕ, ಸನಾತನ ಪರಂಪರೆಯ ಭಾಗವೆಂದು ಹೇಳುತ್ತಾ ಅಪಪ್ರಚಾರ ಮಾಡುತ್ತಿರುವುದಕ್ಕೆ ನಮ್ಮ ವಿರೋಧವಿದೆ” ಎಂದು ಸ್ಪಷ್ಟಪಡಿಸಿದರು.
ಮುಖಂಡ ಮಹೇಶ ಗೋರನಾಳಕರ್ ಮಾತನಾಡಿ, “ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳು ಸಮಾನತೆ, ಮಾನವ ಘನತೆ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತವೆ. ಪ್ರತಿಯೊಬ್ಬರ ಧಾರ್ಮಿಕ ನಂಬಿಕೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಗೌರವಿಸುವುದರ ಜೊತೆಗೆ ಇತರರ ಸಾಂಸ್ಕೃತಿಕ ಅಸ್ಮಿತೆಯನ್ನೂ ಗೌರವಿಸಬೇಕು” ಎಂದರು.
This video cannot be played in your browser. Open the video directly

ಸಮಿತಿ ಸಂಚಾಲಕ ರವಿ ಪಾಪಡೆ ಮಾತನಾಡಿ, “ಕಲ್ಯಾಣ ಕರ್ನಾಟಕ ಸೇರಿದಂತೆ ನಾಡಿನ ವಿವಿಧ ಜಿಲ್ಲೆಗಳಿಂದ ಬಸವಪರ, ದಲಿತ, ಮಹಿಳಾ ಹಾಗೂ ಪ್ರಗತಿಪರ ಸಂಘಟನೆಗಳ ಪ್ರಮುಖರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಲಬುರಗಿಯ ಕನ್ನಡ ಭವನದಿಂದ ಜಗತ್ ವೃತ್ತದವರೆಗೆ ಮೆರವಣಿಗೆ ನಡೆಯಲಿದೆ” ಎಂದು ಮಾಹಿತಿ ನೀಡಿದರು.
ಪ್ರಗತಿಪರ ಚಿಂತಕ ಜಗದೀಶ್ವರ ಬಿರಾದಾರ ಮಾತನಾಡಿ, “ವಚನ ಸಾಹಿತ್ಯ ಮತ್ತು ಸಂವಿಧಾನದ ಆಶಯಗಳ ಸಂರಕ್ಷಣೆ ಹಾಗೂ ಲಿಂಗಾಯತ ಧಾರ್ಮಿಕ ಅಸ್ಮಿತೆ ಕುರಿತು ಜಾಗೃತಿ ಮೂಡಿಸುವುದು ಪ್ರತಿಭಟನೆಯ ಉದ್ದೇಶವಾಗಿದೆ. ಬಸವತತ್ವದ ಕುರಿತ ಚರ್ಚೆಯನ್ನು ಶಾಂತಿಯುತ ಹಾಗೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ಮುಂದುವರಿಸಲಾಗುವುದು” ಎಂದರು.
ಇದನ್ನೂ ಓದಿ : ಕಲಬುರಗಿಯಲ್ಲಿ ಸೆ.27ರಂದು ಬಸವಾದಿ ಶರಣರ ಹಿಂದೂ ಸಮಾವೇಶ : ಕನೇರಿ ಸ್ವಾಮೀಜಿಗೆ ಅನುಮತಿ ಬೇಡ
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಬುಳ್ಳಾ, ಬಸವಕುಮಾರ ಪಾಟೀಲ್, ಗಣೇಶ ಬಿರಾದಾರ, ಗುರುನಾಥ ಬಿರಾದಾರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.





