ಕಳೆದ ಚುನಾವಣಾ ಚಕ್ರದಲ್ಲಿ ನಡೆದ ನಾಲ್ಕು ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶದ (ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ) ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಕೇಂದ್ರ ಕಚೇರಿಯು ಬರೋಬ್ಬರಿ ₹529.38 ಕೋಟಿ ಖರ್ಚು ಮಾಡಿದೆ. ಇದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಭಾಗ ಅಂದರೆ ಶೇ. 54ರಷ್ಟು (₹286 ಕೋಟಿ) ಮೊತ್ತವನ್ನು ಒಂದೇ ರಾಜ್ಯವಾದ ಪಶ್ಚಿಮ ಬಂಗಾಳದ ಚುನಾವಣೆಗೆ ವೆಚ್ಚ ಮಾಡಲಾಗಿದೆ ಎಂದು ಪಕ್ಷವು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವೆಚ್ಚದ ವರದಿಯಲ್ಲಿ ತಿಳಿಸಿದೆ.
ಪಶ್ಚಿಮ ಬಂಗಾಳದಲ್ಲಿ ಪ್ರಚಾರಕ್ಕಾಗಿ ₹217.16 ಕೋಟಿ, ಅಭ್ಯರ್ಥಿಗಳ ವೆಚ್ಚಕ್ಕಾಗಿ ₹69.83 ಕೋಟಿ, ಅಂದರೆ ಒಟ್ಟಾಗಿ ₹286 ಕೋಟಿ ಬಳಸಲಾಗಿದೆ. ಅಸ್ಸಾಂನಲ್ಲಿ ₹96.26 ಕೋಟಿ, ಕೇರಳದಲ್ಲಿ ₹82.67 ಕೋಟಿ, ತಮಿಳುನಾಡಿನಲ್ಲಿ ₹51.56 ಕೋಟಿ, ಪುದುಚೇರಿಯಲ್ಲಿ ₹11.89 ಕೋಟಿ ಬಿಜೆಪಿ ವ್ಯಯಿಸಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದ ಸುಂದರಬನಗಳ ‘ವ್ಯಾಘ್ರ ವಿಧವೆ’ಯರ ನೆರಳು ಚುನಾವಣೆ ಮೇಲೆ ಚಾಚಿತೇ?
ಚುನಾವಣಾ ಅವಧಿಯಲ್ಲಿ ಬಿಜೆಪಿಗೆ ಒಟ್ಟು ₹1,494 ಕೋಟಿ ಆದಾಯ/ಸಹಾಯಧನ ಹರಿದುಬಂದಿತ್ತು. ಈ ಚುನಾವಣಾ ಚಕ್ರದ ಅಂತ್ಯದ ವೇಳೆಗೆ ಪಕ್ಷದ ಬಳಿ ಬ್ಯಾಂಕ್ ಬ್ಯಾಲೆನ್ಸ್ ಮತ್ತು ನಗದು ರೂಪದಲ್ಲಿ ಒಟ್ಟು ₹7,689.06 ಕೋಟಿ ಅಂತಿಮ ಬಾಕಿ ಉಳಿದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
This video cannot be played in your browser. Open the video directly
ದೇಶದ ಚುನಾವಣಾ ನಿಯಮಾವಳಿಗಳ ಪ್ರಕಾರ, ಒಬ್ಬ ಅಭ್ಯರ್ಥಿ ಚುನಾವಣೆಗೆ ಖರ್ಚು ಮಾಡಲು ನಿರ್ದಿಷ್ಟ ಮಿತಿಯಿರುತ್ತದೆ. ಆದರೆ, ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರ, ವಿಮಾನ ಹಾಗೂ ಹೆಲಿಕಾಪ್ಟರ್ ಪ್ರಯಾಣ, ಜಾಹೀರಾತು ಮತ್ತು ರ್‍ಯಾಲಿಗಳಿಗಾಗಿ ಎಷ್ಟು ಬೇಕಾದರೂ ವೆಚ್ಚ ಮಾಡಲು ಅವಕಾಶವಿದೆ. ಚುನಾವಣೆ ಮುಗಿದ ನಂತರ ಪ್ರತಿ ಪಕ್ಷವೂ ತನ್ನ ಸಮಗ್ರ ವೆಚ್ಚದ ವಿವರವನ್ನು ಆಯೋಗಕ್ಕೆ ಸಲ್ಲಿಸುವುದು ಕಡ್ಡಾಯವಾಗಿದೆ.





