ಅಧಿಕಾರಿಗಳು ಹಾಗೂ ನೌಕರರು ಸೇವಾಮನೋಭಾವದಿಂದ ಗ್ರಾಮೀಣ ಜನರಿಗೆ ನೆರವಾಗಬೇಕೆಂಬುದು ನಮ್ಮ ಆದ್ಯತೆಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆಯವರು ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಪಿಡಿಒ ಹಾಗೂ ಇತರ ನೌಕರರ ಕೌನ್ಸೆಲಿಂಗ್ ಮಾದರಿ ವರ್ಗಾವಣೆಗೆ ಸಿದ್ಧತೆ ಕುರಿತು ಕಲಬುರಗಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.
“ಗ್ರಾಮೀಣಾಭಿವೃದ್ಧಿ ಖಾತೆಯನ್ನು ವಹಿಸಿಕೊಂಡ ಆರಂಭದಲ್ಲಿಯೇ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಂಚಾಯತಿ ಕಾರ್ಯದರ್ಶಿಗಳ ವರ್ಗಾವಣೆಗಳಲ್ಲಿ ಪಾರದರ್ಶಕತೆಯನ್ನು ತರುವ ಸಲುವಾಗಿ ಕೌನ್ಸೆಲಿಂಗ್ ಪದ್ಧತಿಯನ್ನು ಜಾರಿಗೆ ತರುವುದಾಗಿ ಹೇಳಿದ್ದೆ. ಈಗ ಪೂರಕ ಚಟುವಟಿಕೆಗಳು ಆರಂಭಗೊಂಡಿದ್ದು ಈ ಕುರಿತು ಸೇವಾ ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯ ಹಂತ ತಲುಪಿದೆ” ಎಂದರು.
“ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತನ್ನ ನೌಕರರ ವರ್ಗಾವಣೆಗಳಿಗಾಗಿ ಮೊದಲ ಬಾರಿಗೆ ಹೊಸತನವನ್ನು ತುಂಬಿಕೊಳ್ಳಲಿದೆ. 2024-25ನೇ ಸಾಲಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಇಲಾಖೆಯ ನೌಕರರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲು ಸೇವಾ ನಿಯಮ ರೂಪಿಸುತ್ತಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂ.ಗ್ರಾ. | ದೊಡ್ಡಬಳ್ಳಾಪುರ ತಾಲೂಕು ಕಚೇರಿ ಮೇಲೆ ಲೋಕಾಯುಕ್ತ ದಾಳಿ
“ನೌಕರರ ಹಾಗೂ ಸರ್ಕಾರದ ಹಿತದೃಷ್ಟಿಯನ್ನು ಇರಿಸಿಕೊಂಡು ಕೌನ್ಸೆಲಿಂಗ್ ಮಾದರಿ ವರ್ಗಾವಣೆಗಳನ್ನು ಮುಂದಿನ ಆರ್ಥಿಕ ವರ್ಷದಿಂದ ಜಾರಿಗೊಳಿಸಲಾಗುವುದು. ಪಂಚಾಯಿತಿ ಮಟ್ಟದಲ್ಲಿ ಅಧಿಕಾರಿಗಳು ಹಾಗೂ ನೌಕರರು ಸೇವಾಮನೋಭಾವದಿಂದ ಗ್ರಾಮೀಣ ಜನರಿಗೆ ನೆರವಾಗಬೇಕೆಂಬುದು ನಮ್ಮ ಆದ್ಯತೆಯಾಗಿದೆ” ಎಂದರು.