ಇತಿಹಾಸವನ್ನು ತಿರುಚಿ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಪ್ರವೃತ್ತಿ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ, ಸುಳ್ಳು ಹೇಳುವವರ ಬಾಯಿ ಲೌಡ್ ಸ್ಪೀಕರ್ ಆಗಿದ್ದು, ಸತ್ಯ ಹೇಳುವವರ ಬಾಯಿಗೆ ಲಕ್ವಾ ಹೊಡೆದಂತಾಗಿದೆ ಎಂದು ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಕೃತಿಕಾರ ನವೀನ್ ಸೂರಿಂಜಿ ರಚಿಸಿರುವ ‘ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಕೃತಿ ಪರಿಚಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಒಬ್ಬ ಮಾನವತಾವಾದಿ ಹಾಗೂ ಅದಮ್ಯ ಚೇತನದ ವ್ಯಕ್ತಿಯಾಗಿದ್ದು, ಭಾರತವನ್ನು ಆಂಗ್ಲರ ಆಳ್ವಿಕೆಯಿಂದ ರಕ್ಷಿಸುವುದು ಅವರ ಮಹತ್ವಾಕಾಂಕ್ಷೆಯಾಗಿತ್ತು ಎಂದು ಹೇಳಿದರು.
ಕೇರಳದ ನಂಬೂದಿರಿ ಬ್ರಾಹ್ಮಣರ ಕೆಲವು ಕ್ರೂರ ಸಾಮಾಜಿಕ ಆಚರಣೆಗಳಿಂದ ಶೂದ್ರ ಸಮುದಾಯದ ಮಹಿಳೆಯರ ಮಾನ ಹಾಗೂ ಬದುಕನ್ನು ಕಾಪಾಡಲು ಟಿಪ್ಪು ಸುಲ್ತಾನ್ ಪ್ರಯತ್ನಿಸಿದ್ದನ್ನು ಉಲ್ಲೇಖಿಸಿದ ಅವರು, ಟಿಪ್ಪುವಿನ ಘನತೆ ಮತ್ತು ಕೊಡುಗೆಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿ ಸುಳ್ಳುಗಳನ್ನು ಹರಡುವ ಮೂಲಕ ಸಮಾಜವನ್ನು ದಾರಿತಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು.
ಇಂತಹ ಸಂದರ್ಭದಲ್ಲಿ ಸತ್ಯವನ್ನು ಶೋಧಿಸಿ ದಾಖಲೆಗಳ ಆಧಾರದ ಮೇಲೆ ನವೀನ್ ಸೂರಿಂಜಿ ಅವರು ಈ ಕೃತಿಯನ್ನು ರಚಿಸಿರುವುದು ಮಹತ್ವದ ಕೆಲಸವಾಗಿದೆ. ಜನರು ಕೃತಿಯನ್ನು ಓದಿ ಇತಿಹಾಸದ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡಿ, ಇತಿಹಾಸವನ್ನು ವಿರೂಪಗೊಳಿಸುವ ಪ್ರಯತ್ನಗಳು ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ‘ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಕೃತಿ ಸತ್ಯಾನ್ವೇಷಣೆಯ ಪ್ರಮುಖ ದಾಖಲೆಯಾಗಿದೆ ಎಂದು ಅಭಿಪ್ರಾಯಪಟ್ಟರು. ರಾಜಕೀಯ ಸ್ವಾರ್ಥಕ್ಕಾಗಿ ಇತಿಹಾಸವನ್ನು ತಿರುಚುವ ಪ್ರಯತ್ನಗಳು ನಡೆಯುತ್ತಿದ್ದು, ಸತ್ಯವನ್ನು ಉಳಿಸುವ ಕೆಲಸವನ್ನು ಇಂತಹ ಕೃತಿಗಳು ಮಾಡುತ್ತವೆ ಎಂದರು.
ಹಿರಿಯ ಸಾಹಿತಿ ಕೆ. ಷರೀಫ್ ಮಾತನಾಡಿ, ಎರಡು ತಿಂಗಳಲ್ಲೇ ಮೂರನೇ ಮುದ್ರಣ ಕಾಣುತ್ತಿರುವ ಈ ಕೃತಿ ಓದುಗರ ಮೆಚ್ಚುಗೆ ಗಳಿಸಿದ್ದು, ಇತಿಹಾಸದ ಸತ್ಯವನ್ನು ಹೊಸ ಆಯಾಮದಲ್ಲಿ ಪರಿಚಯಿಸುತ್ತಿದೆ ಎಂದು ಹೇಳಿದರು. ಟಿಪ್ಪು ಸುಲ್ತಾನ್ ದೇಶ ಮತ್ತು ಮಣ್ಣಿನ ರಕ್ಷಣೆಗೆ ಹೋರಾಡಿ ಪ್ರಾಣ ತ್ಯಾಗ ಮಾಡಿದ ಮಾನವತಾವಾದಿ ನಾಯಕ ಎಂದು ಬಣ್ಣಿಸಿದರು.
ಇದಕ್ಕೂ ಮುನ್ನ ಡಾ. ಅರಿವು ಶಿವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಟಿಪ್ಪು ಸುಲ್ತಾನ್ ಅವರ ಕಾರ್ಯಗಳು ಮತ್ತು ಐತಿಹಾಸಿಕ ಕೊಡುಗೆಗಳನ್ನು ಪರಿಚಯಿಸಿದರು.
ಇದನ್ನು ಓದಿದ್ದೀರಾ..? ಕೋಲಾರ | ಸಕಾಲದಲ್ಲಿ ಪಿಂಚಣಿ ವಿತರಣೆ, ಬಲವಂತ ಭೂ ಸ್ವಾಧೀನ ಕೈಬಿಡುವಂತೆ ಒತ್ತಾಯಿಸಿ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ
ಕಾರ್ಯಕ್ರಮದಲ್ಲಿ ಕೃತಿಕಾರ ನವೀನ್ ಸೂರಿಂಜಿ ಗೌರವ ಉಪಸ್ಥಿತರಿದ್ದರು. ಗೋಪಾಲಗೌಡ ಎನ್.ಬಿ. ಸ್ವಾಗತಿಸಿದರು. ಸಮುದಾಯ ಜನಾರ್ಧನ್ ವಂದನಾರ್ಪಣೆ ನೆರವೇರಿಸಿದರು. ಜೆ.ಜಿ. ನಾಗರಾಜ ಕಾರ್ಯಕ್ರಮ ನಿರೂಪಿಸಿದರು. ಕೊಂಡರಾಜನಹಳ್ಳಿ ಮಂಜುಳ ಗಾಯನ ನಡೆಸಿಕೊಟ್ಟರು.
ಕೋಲಾರ | ಸುಳ್ಳು ಹೇಳುವವರ ಬಾಯಿ ಲೌಡ್ ಸ್ಪೀಕರ್ ಆಗಿದೆ, ಸತ್ಯ ಹೇಳುವವರ ಬಾಯಿಗೆ ಲಕ್ವಾ ಹೊಡೆದಿದೆ : ರಮೇಶ್ ಕುಮಾರ್
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ




