ಮಾಲೂರಿನಲ್ಲಿ ಮುಖ್ಯಮಂತ್ರಿಗಳ ಬೃಹತ್ ಕಾರ್ಯಕ್ರಮ: ಅದ್ದೂರಿ ಸ್ವಾಗತಕ್ಕೆ ಜಿಲ್ಲಾಧಿಕಾರಿ ಖಡಕ್ ಸೂಚನೆ

Date:

ಆಗಸ್ಟ್ 10 ರಂದು ಮಾಲೂರಿಗೆ ಆಗಮಿಸುತ್ತಿರುವ ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಬೃಹತ್ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಹಾಗೂ ಅದ್ದೂರಿಯಾಗಿ ನೆರವೇರಿಸಲು ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಸೂಚನೆ ನೀಡಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ಸೌಲಭ್ಯ ವಿತರಿಸುವ ಈ ಐತಿಹಾಸಿಕ ಕಾರ್ಯಕ್ರಮವು ಮಾಲೂರಿನ ಚೊಕ್ಕಂಡಹಳ್ಳಿ ಗ್ರಾಮದಲ್ಲಿ ನಡೆಯಲಿದ್ದು, ಇಂದು ಖುದ್ದು ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಅಲ್ಲಿಯೇ ನಡೆದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದರು.

ವೇದಿಕೆ ಕಾರ್ಯಕ್ರಮವನ್ನು ಶಿಷ್ಟಾಚಾರದಂತೆ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲು ಸೂಚಿಸಿರುವ ಜಿಲ್ಲಾಧಿಕಾರಿಗಳು, ಮುಖ್ಯಮಂತ್ರಿಗಳಿಗೆ ಹಾರ, ಶಾಲು, ಮೈಸೂರು ಪೇಟ ಹಾಗೂ ಡ್ರೈ ಫ್ರೂಟ್ಸ್ ನೀಡಿ ವಿಶೇಷವಾಗಿ ಗೌರವಿಸಲು ತಿಳಿಸಿದ್ದಾರೆ. ಸಿಎಂ ಅವರನ್ನು ಅದ್ಧೂರಿಯಾಗಿ ಸ್ವಾಗತಿಸುವ ನಿಟ್ಟಿನಲ್ಲಿ ಡೊಳ್ಳು ಕುಣಿತ ಸೇರಿದಂತೆ 10 ವಿವಿಧ ಜಾನಪದ ಕಲಾತಂಡಗಳನ್ನು ಸಜ್ಜುಗೊಳಿಸುವಂತೆ ಹಾಗೂ ನಾಡಗೀತೆ, ಸ್ವಾಗತ ಗೀತೆಗಳೊಂದಿಗೆ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮೆರುಗು ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಜವಾಬ್ದಾರಿಯನ್ನು ವಹಿಸಲಾಗಿದೆ.

ಈ ಬೃಹತ್ ಸಮಾವೇಶಕ್ಕೆ ಸುಮಾರು 35,000ಕ್ಕೂ ಹೆಚ್ಚು ಸಾರ್ವಜನಿಕರು ಮತ್ತು ಫಲಾನುಭವಿಗಳು ಆಗಮಿಸುವ ನಿರೀಕ್ಷೆಯಿದ್ದು, ಪ್ರತಿಯೊಬ್ಬರಿಗೂ ಸುಸಜ್ಜಿತ ಆಸನ ವ್ಯವಸ್ಥೆ ಕಲ್ಪಿಸಲು ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಜಿಲ್ಲೆಯ ಮೂಲೆಮೂಲೆಗಳಿಂದ ಜನರನ್ನು ಸುರಕ್ಷಿತವಾಗಿ ಕರೆತರಲು ಕೆ.ಎಸ್.ಆರ್.ಟಿ.ಸಿ ವತಿಯಿಂದ 470 ಸ್ಥಳೀಯ ಹಾಗೂ 130 ಹೆಚ್ಚುವರಿ ಬಸ್ಸುಗಳು ಸೇರಿದಂತೆ ಒಟ್ಟು 600 ಬಸ್ಸುಗಳನ್ನು ನಿಯೋಜಿಸಲಾಗಿದೆ. ಅಲ್ಲದೆ, ಜಿಯೋ ಲೊಕೇಶನ್ (Geo-Location) ತಂತ್ರಜ್ಞಾನದ ಮೂಲಕ ನಿಖರವಾದ ರೂಟ್ ಮ್ಯಾಪ್ ಸಿದ್ಧಪಡಿಸಿ ಬೆಳಿಗ್ಗೆ 6 ಗಂಟೆಯಿಂದಲೇ ಸಾರಿಗೆ ಸೇವೆ ಒದಗಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.

ಕಾರ್ಯಕ್ರಮಕ್ಕೆ ಆಗಮಿಸುವ 30 ಸಾವಿರಕ್ಕೂ ಅಧಿಕ ಜನರಿಗೆ ಗುಣಮಟ್ಟದ ವೆಜ್ ಪಲಾವ್, ಮಜ್ಜಿಗೆ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಆಹಾರ ಸಮಿತಿಗೆ ನಿರ್ದೇಶಿಸಲಾಗಿದೆ. ಊಟ ವಿತರಣೆಯಲ್ಲಿ ಯಾವುದೇ ಗೊಂದಲವಾಗದಂತೆ ಹಾಗೂ ನೂಕುನುಗ್ಗಲು ತಪ್ಪಿಸಲು ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಬೇಕು ಹಾಗೂ ಆಹಾರವನ್ನು ಗುಣಮಟ್ಟ ನಿಯಂತ್ರಣ ಅಧಿಕಾರಿಗಳಿಂದ ಪರೀಕ್ಷಿಸಿದ ನಂತರವೇ ವಿತರಿಸಬೇಕು ಎಂದು ಖಡಕ್ ಸೂಚನೆ ನೀಡಲಾಗಿದೆ. ಇದೇ ವೇಳೆ, ಕಾರ್ಯಕ್ರಮಕ್ಕೆ ಆಗಮಿಸುವ ವಿಐಪಿಗಳು ಹಾಗೂ ಸುಮಾರು 200 ಮಂದಿ ಪತ್ರಕರ್ತರಿಗೂ ಪ್ರತ್ಯೇಕ ಮತ್ತು ಅಚ್ಚುಕಟ್ಟಾದ ಭೋಜನ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗಿದೆ.

ಸಮಾವೇಶವು ಸುಗಮವಾಗಿ ನಡೆಯಲು ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್ ಅಳವಡಿಕೆ, ಸುಸಜ್ಜಿತ ಪಾರ್ಕಿಂಗ್ ಹಾಗೂ ಬಿಗಿ ಬಂದೋಬಸ್ತ್ ಏರ್ಪಡಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತುರ್ತು ವೈದ್ಯಕೀಯ ನೆರವಿಗಾಗಿ ಆಂಬುಲೆನ್ಸ್‌ಗಳು, ಐಸಿಯು ಸೌಲಭ್ಯವಿರುವ ತಾತ್ಕಾಲಿಕ ಕ್ಲಿನಿಕ್‌ಗಳನ್ನು ಹಾಗೂ ಅಗ್ನಿಶಾಮಕ ವಾಹನಗಳನ್ನು ಸನ್ನದ್ಧವಾಗಿರಿಸುವಂತೆ ತಿಳಿಸಲಾಗಿದೆ. ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಉದ್ದೇಶದಿಂದ ಇಲಾಖಾವಾರು ಆಕರ್ಷಕ ವಸ್ತುಪ್ರದರ್ಶನ ಮಳಿಗೆಗಳನ್ನು ನಿರ್ಮಿಸುವಂತೆಯೂ ಸೂಚನೆ ನೀಡಲಾಗಿದೆ. ಜಿಲ್ಲೆಗೆ ಮುಖ್ಯಮಂತ್ರಿಗಳ ಆಗಮನ ಒಂದು ಸಂಭ್ರಮದ ಕಾರ್ಯಕ್ರಮವಾಗಿದ್ದು, ಎಲ್ಲಾ ಇಲಾಖೆಗಳ ಅಧಿಕಾರಿಗಳು ಅತ್ಯಂತ ಉತ್ಸಾಹ, ಜವಾಬ್ದಾರಿ ಹಾಗೂ ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳನ್ನು ಹುರಿದುಂಬಿಸಿದರು.

ಇದನ್ನು ಓದಿದ್ದೀರಾ..?ಕೋಲಾರ | ಎನ್‌ಎಸ್‌ಯುಐ ಪದಾಧಿಕಾರಿಗಳ ಆಯ್ಕೆ

ಈ ಮಹತ್ವದ ಸಭೆಯಲ್ಲಿ ಸ್ವಾಗತ, ಗಣ್ಯರ ಶಿಷ್ಠಾಚಾರ ಹಾಗೂ ಆಹ್ವಾನ ಪತ್ರಿಕೆ ಸಮಿತಿಯ ಅಧ್ಯಕ್ಷರಾದ ಕೋಲಾರ ಉಪ-ವಿಭಾಗದ ಸಹಾಯಕ ಕಮೀಷನರ್ ಜಂಬಗಿ ರೇಣುಕಾಪ್ರಸಾದ್ ದಿಲೀಪ್, ವೇದಿಕೆ ಸಮಿತಿ ಅಧ್ಯಕ್ಷರಾದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಮಮೂರ್ತಿ ಹಾಗೂ ನೆನಪಿನ ಕಾಣಿಕೆ ಸಮಿತಿಯ ಅಧ್ಯಕ್ಷರಾದ ಕೋಲಾರ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಟಿ.ಕೆ. ರಮೇಶ್, ಆಹಾರ ಸಮಿತಿ ಅಧ್ಯಕ್ಷರಾದ ಆಹಾರ ಸರಬರಾಜು ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ, ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷರಾದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಫಲಾನುಭವಿಗಳಿಗೆ ಆಸನ ವ್ಯವಸ್ಥೆ ಸಮಿತಿಯ ಅಧ್ಯಕ್ಷರಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾರಾಯಣ ಸ್ವಾಮಿ, ಸಾರಿಗೆ ಸಮಿತಿಯ ಅಧ್ಯಕ್ಷರಾದ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ ಹಾಗೂ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್. ವಿಜಯಲಕ್ಷ್ಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಜನಪ್ರತಿನಿಧಿಗಳನ್ನು ಕಡೆಗಣಿಸಿ ಕಾಮಗಾರಿ ನಡೆಸಿದರೆ ಸಹಿಸುವುದಿಲ್ಲ: ಶಾಸಕ ಡಾ.ಕೊತ್ತೂರು ಜಿ ಮಂಜುನಾಥ್ ಗರಂ

ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರದೆ ಹಾಗೂ ಶಿಷ್ಟಾಚಾರ ಪಾಲಿಸದೆ ಏಕಾಏಕಿ ಕಾಮಗಾರಿಗಳನ್ನು...

ಕೊಲ್ಹಾರ | ಶಾಸಕರಿಲ್ಲದ ಪ್ರಜಾಸೇವಾ ಆಂದೋಲನ: ಅಹವಾಲು ಹೊತ್ತುಬಂದವರಿಗೆ ನಿರಾಸೆ, ಅಧಿಕಾರಿಗಳಿಂದ ಪರಿಹಾರದ ಭರವಸೆ

ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಶಾಸಕರಿಲ್ಲದೆ ಪ್ರಜಾಸೇವಾ ಆಂದೋಲನ ನಡೆಯಿತು. ಇದರಿಂದಾಗಿ...

ಬಾಗಲಕೋಟೆ | ಹಾವು ಕಚ್ಚಿದರೆ ಕ್ಷಣವೂ ತಡಮಾಡದೆ, ಸರ್ಕಾರಿ ಆಸ್ಪತ್ರೆಯತ್ತ ಧಾವಿಸಿ: ಡಾ. ಮಹೇಶ ಕೋಣಿ

ಹಾವು ಕಡಿತಕ್ಕೆ ಒಳಗಾದವರು ಆತಂಕಕ್ಕೊಳಗಾಗಿ ನಾಟಿ ಚಿಕಿತ್ಸೆ, ನಕಲಿ ವೈದ್ಯರ ಮೊರೆ...