ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಆಸ್ಪತ್ರೆಗಳು ಮತ್ತು ಶಾಲೆಗಳ ಮುಂದೆ ನಾಯಿಗಳ ಹಿಂಡು ಬೀಡು ಬಿಟ್ಟಿದೆ ಇನ್ನೇನು ಬೇಸಿಗೆ ರಜೆ ಮುಗಿದು ಶಾಲೆಗಳು ಪುನರಾರಂಭಗೊಳ್ಳಲಿವೆ ಅದಕ್ಕೂ ಮುನ್ನ ನಗರಸಭೆ ಎಚ್ಚೆತ್ತುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
“ಕೆಜಿಎಫ್ ಸುತ್ತಮುತ್ತ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸರ್ಕಾರದ ಮಾರ್ಗಸೂಚಿಗಳನ್ನು ಗಾಳಿಗೆ ತೂರಲಾಗಿದೆ. ಪ್ರತಿನಿತ್ಯ ಪಟ್ಟಣದ ರಸ್ತೆಗಳಲ್ಲಿ ಪಾದಾಚಾರಿಗಳು ಜೊತೆಗೆ ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ನಾಯಿಗಳೇ ಇರದ ಸ್ಥಳಗಳಲ್ಲಿ ಫೀಡಿಂಗ್ ಕೇಂದ್ರದ ಗೋಡೆ ಬರಹ ಬರೆಸಿ, ಬೀದಿ ನಾಯಿ ನಿಗ್ರಹವನ್ನು ಕೇವಲ ತೋರ್ಪಡಿಕೆಗಾಗಿ ಮಾಡುತ್ತಿದ್ದಾರೆ” ಎಂಬ ದೂರುಗಳು ಕೇಳಿ ಬಂದಿದೆ.
ಗಣಿಗಾರಿಕೆಯಿಂದ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ರಾತ್ರಿ ಕೆಲಸ ಬಿಟ್ಟು ಮನೆಗೆ ತೆರಳುವವರು ಕತ್ತಲೆಯಲ್ಲಿ ನಾಯಿ ದಾಳಿಗೆ ಹೆದರುತ್ತಾ ಮನೆ ಸೇರುವಂತಾಗಿದೆ. ನಗರಸಭೆ 34 ಕಡೆಗಳಲ್ಲಿ ಫೀಡಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದೆ ಆದರೆ, ಸಾರ್ವಜನಿಕ ಶೌಚಾಲಯಗಳ ಮುಂದೆ ಡಾಗ್ ಫೀಡಿಂಗ್ ಕೇಂದ್ರ ಎಂದು ಬರೆದಿದ್ದಾರೆ.
ಇತ್ತ ನಗರಸಭೆ ಮತ್ತು ಪಶು ಸಂಗೋಪನ ಇಲಾಖೆಯ ಅಂಕಿ ಅಂಶಗಳಿಗೆ ತಾಳೆಯಾಗುತ್ತಿಲ್ಲ, ನಗರಸಭೆ ಅಧಿಕಾರಿಗಳು 2,250 ನಾಯಿಗಳು ನಗರ ವ್ಯಾಪ್ತಿಯಲ್ಲಿದೆ ಎಂದು ಹೇಳುತ್ತಾರೆ. ಪಶುಸಂಗೋಪನ ಇಲಾಖೆ ನಗರದಲ್ಲಿ 3 ಸಾವಿರ, ಗ್ರಾಮೀಣ ಭಾಗದಲ್ಲಿ 6 ಸಾವಿರ ಬೀದಿ ನಾಯಿಗಳು ಇದೆಯೆಂಬ ಮಾಹಿತಿ ನೀಡಿದೆ.
ರಾಜ್ಯದಲ್ಲಿ 2026ರ ಮೊದಲ ನಾಲ್ಕು ತಿಂಗಳುಗಳಲ್ಲಿ ಒಟ್ಟು 2,05,998 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ರೇಬಿಸ್ ಸೋಂಕಿನಿಂದ ಈ ವರ್ಷದಲ್ಲಿ 25 ಮಂದಿ ಸಾವನ್ನಪ್ಪಿದ್ದಾರೆ. ಏಪ್ರಿಲ್ ಒಂದೇ ತಿಂಗಳಿನಲ್ಲಿ 50,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ವಿಜಯಪುರ ಜಿಲ್ಲೆಯಲ್ಲಿ ಹೆಚ್ಚು ಪ್ರಕರಣ: ಕರ್ನಾಟಕದಲ್ಲಿಯೇ ವಿಜಯಪುರ ಜಿಲ್ಲೆಯಲ್ಲಿ ಅತಿಹೆಚ್ಚು ನಾಯಿಕಡಿತ ಪ್ರಕರಣಗಳು ದಾಖಲಾಗಿದೆ. 13,997 ನಾಯಿ ಕಡಿತ ಪ್ರಕರಣಗಳು ಕಳೆದ ನಾಲ್ಕು ತಿಂಗಳಿನಲ್ಲಿ ವರದಿಯಾಗಿದೆ.
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ 13,412 ಪ್ರಕರಣಗಳು ದಾಖಲಾಗಿವೆ. ರೇಬಿಸ್‌ನಿಂದ 6 ಸಾವುಗಳು ಸಂಭವಿಸಿರುವ ವರದಿಯಾಗಿದ್ದು, ರೇಬಿಸ್‌ನಿಂದ ಅತಿ ಹೆಚ್ಚು ಸಾವುಗಳು ಸಂಭವಿಸಿರುವುದು ಬೆಂಗಳೂರು ನಗರ ಜಿಲ್ಲೆಯಲ್ಲಿಯೇ.
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣ ವ್ಯಾಪ್ತಿಯಲ್ಲೂ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಗುಲಾಬ ಟಾಕೀಸು, ಭಂಜಾರ ಕಾಲೇಜು ವೃತ್ತ ಹಾಗೂ ಮುಖ್ಯ ಬಸ್ ನಿಲ್ದಾಣ ಸುತ್ತಮುತ್ತ 200ಕ್ಕೂ ಹೆಚ್ಚು ಬೀದಿ ನಾಯಿಗಳಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
“ಇನ್ನಾದರೂ ಸಂಬಂಧಿತ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಸಂಖ್ಯೆ ನಿಗ್ರಹಿಸಲು ನಾಯಿಗಳ ಸಂತಾನಹರಣ ಚಿಕಿತ್ಸೆಯನ್ನುಕೈಗೊಳ್ಳುವುದು ಮತ್ತು ನಾಯಿಗಳಿಗೆ ಶೆಲ್ಟರ್ ಒದಗಿಸುವ ಮೂಲಕ ಸಮಸ್ಯೆ ಪರಿಹರಿಸುವ ಶೀಘ್ರ ವಿಧಾನ ಕಂಡುಕೊಳ್ಳಬೇಕಿದೆ” ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈಗಾಗಲೇ ಕರ್ನಾಟಕ ಸರ್ಕಾರ 2023 ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ರಾಜ್ಯದ ಎಲ್ಲಾ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ರೇಬಿಸ್ ಲಸಿಕೆಯನ್ನು ಉಚಿತವಾಗಿ ನೀಡುವ ಘೋಷಣೆ ಮಾಡಿದೆ. ಬಿಪಿಎಲ್ ಜತೆಗೆ ಎಪಿಎಲ್ ಕಾರ್ಡುದಾರರಿಗೂ ಉಚಿತ ಲಸಿಕೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ. 2030ರ ಒಳಗೆ ಕರ್ನಾಟಕವನ್ನೂ ರೇಬಿಸ್ ಮುಕ್ತವಾಗಿಸುವ ಉದ್ದೇಶದಿಂದ ರೇಬಿಸ್ ಸಂಬಂಧಿತ ಚಿಕಿತ್ಸೆಗಳು ಸಾರ್ವಜನಿಕರಿಗೆ ಸುಲಭವಾಗಿ ದೊರೆಯುವ ಮಾರ್ಗೋಪಾಯಗಳನ್ನು ರೂಪಿಸಲಾಗಿದೆ.
ರೇಬಿಸ್ ಇಮ್ಯುನೋಗ್ಲೋಬುಲಿನ್ (RIG) ಮತ್ತು ಆಂಟಿ ರೇಬಿಸ್ ವ್ಯಾಕ್ಸಿನ್ (ARV) ಎರಡೂ ಚುಚ್ಚುಮದ್ದುಗಳೂ ಸರ್ಕಾರಿ ಆಸ್ಪತ್ರೆಗಳಲ್ಲಿ, ಜಿಲ್ಲಾ ಮತ್ತು ಪ್ರಾಥಮಿಕ ವೈದ್ಯಕೀಯ ಕೇಂದ್ರಗಳಲ್ಲಿ ಉಚಿತವಾಗಿ ಸಿಗಲಿದೆ.
ಕೆಜಿಎಫ್ | ಬೀದಿ ನಾಯಿ ಕಾಟಕ್ಕೆ ಜನ ಹೈರಾಣ: ಸೂಕ್ತ ಕ್ರಮಕ್ಕೆ ಆಗ್ರಹ
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ




