ಅಕ್ಷರ ಜ್ಞಾನವಿಲ್ಲದ, ಹೊರ ಪ್ರಪಂಚದ ನಾಗರಿಕತೆಯೇ ಅರಿಯದ, ಹಣ-ಆಸ್ತಿ-ಒಪ್ಪಂದಗಳಂತಹ ಆಧುನಿಕ ಪರಿಕಲ್ಪನೆಗಳೇ ತಿಳಿಯದ ಬುಡಕಟ್ಟು ಜನಾಂಗವೊಂದು ತನ್ನ ಅಸ್ತಿತ್ವವನ್ನೇ ನುಂಗಿಹಾಕುವ ಬೃಹತ್ ಯೋಜನೆವೊಂದಕ್ಕೆ ʼಸಮ್ಮತಿʼ ನೀಡಲು ಸಾಧ್ಯವೇ? ʼಗ್ರೇಟ್ ನಿಕೋಬಾರ್ʼ ದ್ವೀಪದಲ್ಲಿ ಪ್ರಕೃತಿ ಮತ್ತು ಮಾನವೀಯತೆಯ ವಿರುದ್ಧ ಇಂತಹದೊಂದು ಕಣ್ಣೊರೆಸುವ ಆಟ ಯಶಸ್ವಿಯಾಗಿ ನಡೆದುಹೋಗಿದೆ!
ಭಾರತದ ದಕ್ಷಿಣ ತುದಿಯಲ್ಲಿ, ಬಂಗಾಳ ಕೊಲ್ಲಿಯ ನೀಲ ಜಲರಾಶಿಯ ಮಧ್ಯೆ ಅಪರೂಪದ ಮುಕುಟದಂತೆ ಕಂಗೊಳಿಸುವ ದ್ವೀಪ ʼನಿಕೋಬಾರ್ʼ. ಈ ದ್ವೀಪ, ಇಂದು ಆರ್ಥಿಕ ಹಿತಾಸಕ್ತಿ ಮತ್ತು ಆದಿವಾಸಿಗಳ ಅಸ್ತಿತ್ವದ ನಡುವಿನ ಭೀಕರ ಸಂಘರ್ಷದ ಭೂಮಿಯಾಗಿದೆ. ಕೇಂದ್ರ ಸರ್ಕಾರ ಇಲ್ಲಿ ಜಾರಿಗೊಳಿಸಲು ಮುಂದಾಗಿರುವ ಸುಮಾರು ₹81,000 ಕೋಟಿ ವೆಚ್ಚದ ಬೃಹತ್ ಮೂಲಸೌಕರ್ಯ ಯೋಜನೆ ಮತ್ತು ಅದಕ್ಕಾಗಿ ಅಲ್ಲಿನ ದಟ್ಟ ಮಳೆಕಾಡುಗಳ ನಾಶ ಹಾಗೂ ಸ್ಥಳೀಯ ಬುಡಕಟ್ಟು ಸಮುದಾಯಗಳ ʼಅನುಮತಿʼ ಪ್ರಕ್ರಿಯೆ ಈಗ ತೀವ್ರ ವಿವಾದಕ್ಕೀಡಾಗಿದೆ. ಮಾಜಿ ಕೇಂದ್ರ ಕಾರ್ಯದರ್ಶಿ ಮೀನಾ ಗುಪ್ತಾ ಅವರು ಕಲ್ಕತ್ತಾ ಹೈಕೋರ್ಟ್‌ನ ಪೋರ್ಟ್ ಬ್ಲೇರ್ ಸರ್ಕ್ಯೂಟ್ ಬೆಂಚ್‌ನಲ್ಲಿ ಹೂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಈ ಇಡೀ ಯೋಜನೆಯ ಹಿಂದಿರುವ ಕಾನೂನುಬಾಹಿರ ನಡೆಗಳನ್ನು ಅನಾವರಣಗೊಳಿಸಿದೆ.
ಏನಿದು ಬೃಹತ್ ಯೋಜನೆ?
ʼಗ್ರೇಟ್ ನಿಕೋಬಾರ್ʼ ದ್ವೀಪಸಮೂಹವು ಅಂತಾರಾಷ್ಟ್ರೀಯ ನೌಕಾ ಸಾಗಣೆಯ ಪ್ರಮುಖ ಮಾರ್ಗವಾದ ಮಲಕ್ಕಾ ಜಲಸಂಧಿಗೆ ಅತ್ಯಂತ ಹತ್ತಿರದಲ್ಲಿದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಆಕ್ರಮಣಕಾರಿ ನೌಕಾ ಚಟುವಟಿಕೆಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಮತ್ತು ಭಾರತವನ್ನು ಜಾಗತಿಕ ಸಾಗಣೆ ಹಬ್ (Global Shipping Hub) ಮಾಡಲು ಈ ದ್ವೀಪ ಸೂಕ್ತ ಸ್ಥಳ ಎನ್ನುವುದು ಸರ್ಕಾರದ ವಾದ. ಇದಕ್ಕಾಗಿ ರೂಪುಗೊಂಡಿದ್ದೇ ʼಗ್ರೇಟ್ ನಿಕೋಬಾರ್ ಐಲ್ಯಾಂಡ್ ಪ್ರಾಜೆಕ್ಟ್ʼ. ಈ ₹81,000 ಕೋಟಿಯ ಮಹಾ ಯೋಜನೆಯಡಿ ನಾಲ್ಕು ಪ್ರಮುಖ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ: ಒಂದು- ಅಂತಾರಾಷ್ಟ್ರೀಯ ಟ್ರಾನ್ಸ್‌ಶಿಪ್‌ಮೆಂಟ್ ಕಂಟೈನರ್ ಪೋರ್ಟ್, ಎರಡು- ರಕ್ಷಣಾ ಮತ್ತು ನಾಗರಿಕ ಬಳಕೆಯ ದ್ವಿಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೂರು- ಸೌರ ಹಾಗೂ ಅನಿಲ ಆಧಾರಿತ ವಿದ್ಯುತ್ ಸ್ಥಾವರ, ಮತ್ತು ನಾಲ್ಕು- ಲಕ್ಷಾಂತರ ಜನರು ವಾಸಿಸಬಹುದಾದ ಒಂದು ಅತ್ಯಾಧುನಿಕ ಸ್ಮಾರ್ಟ್ ಸಿಟಿ.
ಕೇಂದ್ರ ಸರ್ಕಾರ ರೂಪಿಸಿ ಪ್ರಸ್ತಾವಿಸಿರುವ ೀ ಯೋಜನೆಯ ಆರ್ಥಿಕ ಮತ್ತು ಸುರಕ್ಷಾ ಆಯಾಮಗಳು ಆಕರ್ಷಕವಾಗಿ ಕಂಡರೂ, ಅದರ ಅನುಷ್ಠಾನಕ್ಕಾಗಿ ಆಯ್ದುಕೊಂಡ ಹಾದಿ ಮತ್ತು ಪರಿಸರಕ್ಕೆ ಉಂಟಾಗಲಿರುವ ಅಪಾರ ಹಾನಿ ಮಾತ್ರ ಆತಂಕಕಾರಿಯಾಗಿದೆ. ಅಂದಾಜು 166 ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ವಿಸ್ತೀರ್ಣದ ವರ್ಜಿನ್ ಮಳೆಕಾಡುಗಳನ್ನು (Rainforests) ಈ ಯೋಜನೆ ನುಂಗಿ ಹಾಕಲಿದೆ. ಲಕ್ಷಾಂತರ ವರ್ಷಗಳ ಹಳೆಯದಾದ, ಕೋಟ್ಯಂತರ ಜೀವಿಗಳಿಗೆ ಆಶ್ರಯ ನೀಡಿರುವ ಜಗತ್ತಿನ ಅತ್ಯಂತ ಸೂಕ್ಷ್ಮ ಬಯೋಸ್ಫಿಯರ್ ರಿಸರ್ವ್‌ನಲ್ಲಿ ಸುಮಾರು 8.5 ಲಕ್ಷಕ್ಕೂ ಹೆಚ್ಚು ಹೆಮ್ಮರಗಳನ್ನು ಉರುಳಿಸಲು ಸಿದ್ಧತೆ ನಡೆದಿದೆ. ಅರಣ್ಯನಾಶವಷ್ಟೇ ಅಲ್ಲದೆ, ಗಲಾಥಿಯಾ ಮತ್ತು ಕ್ಯಾಂಪ್‌ಬೆಲ್ ಬೇ ರಾಷ್ಟ್ರೀಯ ಉದ್ಯಾನವನಗಳ ʼಬಫರ್ ಜೋನ್ʼ (ಪರಿಸರ ಸೂಕ್ಷ್ಮ ವಲಯ) ಅನ್ನು ಯೋಜನೆಗೆ ಸ್ಥಳಾವಕಾಶ ಕಲ್ಪಿಸುವ ಏಕೈಕ ಉದ್ದೇಶದಿಂದ ಕಾನೂನುಬಾಹಿರವಾಗಿ ಕಡಿತಗೊಳಿಸಲಾಗಿದೆ ಎಂಬ ಗಂಭೀರ ಆರೋಪ ಸರ್ಕಾರದ ಮೇಲಿದೆ.
ಪ್ರಕರಣ ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದಾಗ…

ಈ ಇಡೀ ಯೋಜನೆಯ ನೈತಿಕ ಮತ್ತು ಕಾನೂನುಬದ್ಧ ಅಡಿಪಾಯವನ್ನು ಕದಡಿರುವುದು ಸ್ಥಳೀಯ ಆದಿವಾಸಿಗಳ ಹಕ್ಕುಗಳ ಉಲ್ಲಂಘನೆ. ಅರಣ್ಯ ಹಕ್ಕುಗಳ ಕಾಯ್ದೆ-2006 (FRA) ಮತ್ತು ಪರಿಸರ ಸಚಿವಾಲಯದ 2009ರ ಕಡ್ಡಾಯ ನಿಯಮಗಳ ಪ್ರಕಾರ, ಯಾವುದೇ ಅರಣ್ಯ ಭೂಮಿಯನ್ನು ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳುವ ಮುನ್ನ, ಅಲ್ಲಿನ ಮೂಲ ನಿವಾಸಿಗಳ ಸಾಂಪ್ರದಾಯಿಕ ಹಕ್ಕುಗಳನ್ನು ಸಂಪೂರ್ಣವಾಗಿ ಗುರುತಿಸಿ, ಇತ್ಯರ್ಥಪಡಿಸಬೇಕು. ತದನಂತರ ಅವರ ಮುಕ್ತ ಸಮ್ಮತಿಯನ್ನು ಪಡೆಯುವುದು ಕಡ್ಡಾಯ. ಆದರೆ ಗ್ರೇಟ್ ನಿಕೋಬಾರ್‌ನಲ್ಲಿ ಇಂತಹ ಯಾವುದೇ ಹಕ್ಕುಗಳ ಇತ್ಯರ್ಥ ಪ್ರಕ್ರಿಯೆ ನಡೆದಿಲ್ಲ ಎಂಬುದು ಮೀನಾ ಗುಪ್ತಾ ಅವರ ಅರ್ಜಿಯ ಪ್ರಮುಖ ಆರೋಪ.
ಕೇಂದ್ರ ಸರ್ಕಾರ ಮತ್ತು ದ್ವೀಪದ ಆಡಳಿತವು “ಯೋಜನೆಗೆ ಸ್ಥಳೀಯರ ಸಮ್ಮತಿ ಇದೆ” ಎಂದು ನ್ಯಾಯಾಲಯಕ್ಕೆ ಪ್ರಾಥಮಿಕ ಆಕ್ಷೇಪಣೆ ಸಲ್ಲಿಸಿದ್ದವು. ಆದರೆ, ಕಲ್ಕತ್ತಾ ಹೈಕೋರ್ಟ್ ಈ ಆಕ್ಷೇಪಣೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಅರ್ಜಿಯ ಆಳವಾದ ವಿಚಾರಣೆಗೆ ಮುಂದಾಗಿದೆ. ದಾಖಲೆಗಳ ಪ್ರಕಾರ, 2022ರ ಆ.12ರಂದು ಕ್ಯಾಂಪ್‌ಬೆಲ್ ಬೇ, ಲಕ್ಷ್ಮಿನಗರ ಮತ್ತು ಗೋವಿಂದ ನಗರಗಳಲ್ಲಿ ಗ್ರಾಮ ಸಭೆಗಳನ್ನು ನಡೆಸಿ, ಅರಣ್ಯ ಭೂಮಿ ಹಸ್ತಾಂತರಕ್ಕೆ ಒಪ್ಪಿಗೆ ಪಡೆಯಲಾಗಿತ್ತು. ಆದರೆ, ಆಘಾತಕಾರಿ ಸಂಗತಿಯೆಂದರೆ, ಈ ಗ್ರಾಮ ಸಭೆಗಳು ಅಲ್ಲಿನ ಮೂಲ ಬುಡಕಟ್ಟು ಜನಾಂಗದ ಸಭೆಗಳೇ ಆಗಿರಲಿಲ್ಲ. ಅವು ಹೊರಗಿನಿಂದ ಬಂದು ನೆಲೆಸಿದ ಬುಡಕಟ್ಟು ರಹಿತ (Settlers) ಜನರ ಪಂಚಾಯತ್‌ಗಳಾಗಿದ್ದವು. ಅರಣ್ಯದ ಮೇಲೆ ಯಾವುದೇ ಕಾನೂನಾತ್ಮಕ ಹಕ್ಕು ಹೊಂದಿಲ್ಲದ ಜನರ ಸಭೆ ನಡೆಸಿ, ಇಡೀ ದ್ವೀಪದ ಅರಣ್ಯವನ್ನು ಕಾರ್ಪೊರೇಟ್ ಯೋಜನೆಗೆ ಧಾರೆ ಎರೆದಿರುವುದು ಸ್ಪಷ್ಟವಾಗಿ ಕಾನೂನಿನ ಕಣ್ಣಿಗೆ ಮಣ್ಣು ಎರೆಚಿದಂತಾಗಿದೆ ಎನ್ನುವುದು ಮೀನಾ ಗುಪ್ತಾ ಅವರ ವಾದ.

ಅಲ್ಲದೆ, ಗ್ರಾಮ ಸಭೆಯ ನಿರ್ಣಯಗಳನ್ನು ಪರಿಶೀಲಿಸಬೇಕಾದ ಉಪ-ವಿಭಾಗೀಯ ಸಮಿತಿಯಲ್ಲಿ (SDLC) ಕನಿಷ್ಠ ಇಬ್ಬರು ಪರಿಶಿಷ್ಟ ಪಂಗಡದ ಸದಸ್ಯರು (ಅದರಲ್ಲೊಬ್ಬರು ಮಹಿಳೆ) ಇರಬೇಕು ಎಂಬ ನಿಯಮವಿದೆ. ಆದರೆ ಆಡಳಿತ ರಚಿಸಿದ ಸಮಿತಿಯಲ್ಲಿ ಕೇವಲ ಒಬ್ಬರೇ ಒಬ್ಬರು ನಿಕೋಬಾರೀಸ್ ಸದಸ್ಯರಿದ್ದರು. ಇಷ್ಟೆಲ್ಲಾ ಲೋಪಗಳಿದ್ದರೂ, ಕೇವಲ ಆರೇ ದಿನಗಳಲ್ಲಿ ಅಂದರೆ 2022ರ ಆ.18ರಂದು ಜಿಲ್ಲಾಧಿಕಾರಿಗಳು “ಎಲ್ಲಾ ಅರಣ್ಯ ಹಕ್ಕುಗಳನ್ನು ಇತ್ಯರ್ಥಪಡಿಸಲಾಗಿದೆ” ಎಂದು ʼಅರಣ್ಯ ಹಕ್ಕುಗಳ ಮನ್ನಣೆʼ (RoFR) ಪ್ರಮಾಣಪತ್ರ ನೀಡಿಬಿಟ್ಟರು. ಈ ಅವಸರದ ಮತ್ತು ಅಪಾರದರ್ಶಕ ಪ್ರಕ್ರಿಯೆಯೇ ಇಡೀ ಸಮ್ಮತಿ ಪ್ರಕ್ರಿಯೆ ಎಷ್ಟು ಕೃತಕವಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ.
ಅಕ್ಷರ ಅರಿಯದ ಸಮುದಾಯಗಳು ಅನುಮತಿ ಕೊಟ್ಟದ್ದು ಯಾತಕ್ಕೆ?
ನಿಕೋಬಾರ್ ದ್ವೀಪದಲ್ಲಿ ಎರಡು ವಿಶಿಷ್ಟ ಬುಡಕಟ್ಟು ಸಮುದಾಯಗಳಿವೆ. ಕರಾವಳಿಯಲ್ಲಿ ವಾಸಿಸುವ ʼನಿಕೋಬಾರೀಸ್ʼ ಮತ್ತು ದ್ವೀಪದ ಒಳಭಾಗದ ಕಾಡುಗಳಲ್ಲಿ ವಾಸಿಸುವ ʼಶೋಂಪೆನ್ʼ. ಇದರಲ್ಲಿ ಶೋಂಪೆನ್ ಜನಾಂಗವು ಹೊರ ಪ್ರಪಂಚದ ಯಾವುದೇ ನಾಗರಿಕತೆಯ ಸಂಪರ್ಕವಿಲ್ಲದ, ಕೇವಲ ಪ್ರಕೃತಿಯನ್ನು ನಂಬಿ ಬೇಟೆಯಾಡಿ ಬದುಕುವ ʼಅತ್ಯಂತ ದುರ್ಬಲ ಬುಡಕಟ್ಟು ಸಮುದಾಯʼ (PVTG). ಇಂದಿಗೂ ಇವರಿಗೆ ಹಿಂದಿ, ಇಂಗ್ಲಿಷ್ ಅಥವಾ ನಿಕೋಬಾರೀಸ್ ಭಾಷೆ ಓದಲು ಅಥವಾ ಬರೆಯಲು ಬರುವುದಿಲ್ಲ. ಹಣ, ಆಸ್ತಿ, ಒಪ್ಪಂದ, ಸಮ್ಮತಿ ಪತ್ರಗಳಂತಹ ಆಧುನಿಕ ಪರಿಕಲ್ಪನೆಗಳೇ ಈ ಜನರಿಗೆ ಸಂಪೂರ್ಣ ಅಪರಿಚಿತ.

ಪ್ರಸ್ತಾಪಿತ ಯೋಜನಾ ಪ್ರದೇಶದೊಳಗೆ ಶೋಂಪೆನ್ ಜನಾಂಗದ ಮೂರು ಪ್ರಮುಖ ವಾಸಸ್ಥಾನಗಳಿವೆ. ಅವರು ಆಹಾರಕ್ಕಾಗಿ ಹಣ್ಣು-ಹಂಪಲು ಸಂಗ್ರಹಿಸುವ, ಜೇನುತುಪ್ಪ ಅರಸುವ ಮತ್ತು ಬೇಟೆಯಾಡುವ ಸಾಂಪ್ರದಾಯಿಕ ಕಾಡುಗಳನ್ನು ಸಂಪೂರ್ಣವಾಗಿ ಕಡಿದು ಕಾಂಕ್ರೀಟ್ ಜಂಗಲ್ ಮಾಡಲಾಗುತ್ತಿದೆ. ಅವರ ಪವಿತ್ರ ಆರಾಧನಾ ಸ್ಥಳಗಳು, ತೋಟಗಾರಿಕಾ ಭೂಮಿ ಮತ್ತು ಶುದ್ಧ ಕುಡಿಯುವ ನೀರಿನ ನೈಸರ್ಗಿಕ ಮೂಲಗಳು ಈ ₹81,000 ಕೋಟಿಯ ಯೋಜನೆಯಡಿ ಹೂತುಹೋಗಲಿವೆ. ಹೀಗಿರುವಾಗ, ಆ ಸಮುದಾಯ ಅನುಮತಿ ಕೊಟ್ಟದ್ದು ಹೇಗೆ, ಯಾರಿಗೆ, ಯಾತಕ್ಕೆ ಎನ್ನುವುದು ಯಕ್ಷ ಪ್ರಶ್ನೆ.
ಇದಕ್ಕಿಂತ ದೊಡ್ಡ ವಿಪರ್ಯಾಸವೆಂದರೆ, ಈ ಶೋಂಪೆನ್ ಜನರ ʼಸಮ್ಮತಿʼಯನ್ನು ಸರ್ಕಾರ ಪಡೆದ ಹಾದಿ. ಅವರಿಗೆ ಭಾಷೆಯೇ ಅರ್ಥವಾಗದ ಕಾರಣ, ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ʼಅಂಡಮಾನ್ ಆದಿಮ್ ಜನಜಾತಿ ವಿಕಾಸ್ ಸಮಿತಿʼ (AAJVS)ಯ ಅಧಿಕಾರಿಯೊಬ್ಬರು ಶೋಂಪೆನ್ ಜನರ ಪರವಾಗಿ ತಾವೇ ಸಹಿ ಹಾಕಿ ಒಪ್ಪಿಗೆ ಪತ್ರ ನೀಡಿದ್ದಾರೆ! ಅಂದರೆ, ಯಾರ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆಯೋ ಅವರನ್ನೇ ಕೇಳದೆ, ಸರ್ಕಾರಿ ಅಧಿಕಾರಿಯೇ ಅವರ ಪರವಾಗಿ ʼಸಮ್ಮತಿʼ ನೀಡಿದ್ದಾರೆ. ಇದೇ ವೇಳೆ, ಕರಾವಳಿಯ ನಿಕೋಬಾರೀಸ್ ಬುಡಕಟ್ಟು ಮಂಡಳಿಯ ಅಧ್ಯಕ್ಷರು ನೀಡಿದ್ದ ಸಮ್ಮತಿಯನ್ನು ಸಹ ಇಡೀ ಸಮುದಾಯದ ಒಪ್ಪಿಗೆಯಿಲ್ಲದೆ ನೀಡಲಾಗಿತ್ತು. ತಮಗೆ ವಂಚನೆಯಾಗಿರುವುದನ್ನು ಅರಿತ ಬುಡಕಟ್ಟು ಮಂಡಳಿ 2022ರ ನವೆಂಬರ್‌ನಲ್ಲಿ ತನ್ನ ಸಮ್ಮತಿಯನ್ನು ಅಧಿಕೃತವಾಗಿ ಹಿಂಪಡೆದಿದ್ದರೂ, ಆಡಳಿತವು ಅದನ್ನು ಪರಿಗಣಿಸದೆ ಮುಂದುವರಿದಿದೆ.
ಗ್ರೇಟ್ ನಿಕೋಬಾರ್‌ನಲ್ಲಿ ಆದಿವಾಸಿಗಳ ವಾಸಸ್ಥಾನಗಳ ಮೇಲೆ ಆಧುನಿಕತೆ ದಾಳಿ ಮಾಡುತ್ತಿರುವುದು ಇದೇ ಮೊದಲೇನಲ್ಲ. 1972ರಲ್ಲಿ ಸುಮಾರು 330 ಮಾಜಿ ಸೈನಿಕರ ಕುಟುಂಬಗಳನ್ನು ಇಲ್ಲಿನ ಪೂರ್ವ ಕರಾವಳಿಯಲ್ಲಿ ತಂದು ನೆಲೆಗೊಳಿಸಿದಾಗ, ಅಲ್ಲಿಯವರೆಗೆ ಸ್ವಚ್ಛಂದವಾಗಿದ್ದ ಶೋಂಪೆನ್ ಜನಾಂಗದ ನೆಮ್ಮದಿ ಕೆಟ್ಟಿತ್ತು. ತಮ್ಮ ಸಾಂಪ್ರದಾಯಿಕ ನೆಲೆಗಳನ್ನು ಕಳೆದುಕೊಂಡ ಅವರು ವಿಧಿಯಿಲ್ಲದೆ ಪ್ರಾಣಭಯದಿಂದ ದಟ್ಟ ಅರಣ್ಯದ ಆಳಕ್ಕೆ ಓಡಿಹೋಗಬೇಕಾಯಿತು. ಈಗ ಇಡೀ ಅರಣ್ಯವನ್ನೇ ವಾಣಿಜ್ಯೀಕರಣಗೊಳಿಸಿದರೆ, ಅವರು ಹೋಗಲು ಬೇರೆ ಕಾಡೇ ಉಳಿಯುವುದಿಲ್ಲ. ಅಲೆಮಾರಿ ಬೇಟೆಗಾರರಾಗಿರುವ ಶೋಂಪೆನ್ ಸಮುದಾಯಕ್ಕೆ ಸ್ವಯಂ-ನಿರ್ಣಯದ ಹಕ್ಕಿದೆ ಮತ್ತು ಪ್ರಕೃತಿಯೊಂದಿಗೆ ತಮಗೆ ಬೇಕಾದಂತೆ ಬದುಕುವ ಸ್ವಾತಂತ್ರ್ಯವಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರು ವಾದಿಸುತ್ತಿದ್ದಾರೆ.
ಇದನ್ನೂ ಓದಿ: ಪ್ರೀಮಿಯಂ ಲೇಖನ | ಗ್ರೇಟ್ ನಿಕೋಬಾರ್: ಜಿಯೋ ಪಾಲಿಟಿಕ್ಸ್‌ಗೆ ಮಣಿಯಿತೇ ಹಸಿರು ನ್ಯಾಯಮಂಡಳಿ?
ಈ ವಿವಾದ ಸದ್ಯ ಒಂದು ಹಡಗು ಬಂದರು ಅಥವಾ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಸೀಮಿತವಾಗಿಲ್ಲ. ದೇಶದ ಆರ್ಥಿಕ ಸ್ವಾವಲಂಬನೆ ಮತ್ತು ರಾಷ್ಟ್ರೀಯ ಭದ್ರತೆಗಾಗಿ ₹81,000 ಕೋಟಿ ಹೂಡುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ಭಾರತದ ಸಂವಿಧಾನ ಮತ್ತು ಕಾನೂನುಗಳು ದೇಶದ ಅತ್ಯಂತ ದುರ್ಬಲ ಪ್ರಜೆಗಳಿಗೆ ನೀಡಿರುವ ರಕ್ಷಣೆಯನ್ನು ಕಾಪಾಡಬೇಕಾಗಿದೆ. ಬಲವಂತದ ಸಮ್ಮತಿ, ವಂಚನೆಯ ಒಪ್ಪಂದ ಮತ್ತು ಪ್ರಕೃತಿಯ ಮಾರಣಹೋಮದ ಮೇಲೆ ನಿರ್ಮಾಣವಾಗುವ ಯಾವುದೇ ʼಸ್ಮಾರ್ಟ್ ಸಿಟಿʼ ದೀರ್ಘಾವಧಿಯಲ್ಲಿ ದೇಶಕ್ಕೆ ಕಳಂಕವಾಗಿ ಪರಿಣಮಿಸಬಹುದು. ಕಲ್ಕತ್ತಾ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಈ ಕಾನೂನು ಸಮರ, ಭಾರತವು ಕಾರ್ಪೊರೇಟ್ ಹಿತಾಸಕ್ತಿಗಳ ಪರವಾಗಿ ನಿಲ್ಲುತ್ತದೆಯೇ ಅಥವಾ ಪ್ರಕೃತಿ ಮತ್ತು ಮಾನವೀಯತೆಯ ಪರವಾಗಿ ನಿಲ್ಲುತ್ತದೆಯೇ ಎಂಬುದನ್ನು ನಿರ್ಣಯಿಸುವ ಅತ್ಯಂತ ಪ್ರಮುಖ ಮೈಲಿಗಲ್ಲಾಗಲಿದೆ.




