ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಆರಿದಂತೆ ಕಾಣುತ್ತಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ‘ಟ್ರುತ್ ಸೋಷಿಯಲ್’ (Truth Social) ಜಾಲತಾಣದಲ್ಲಿ AI ಬಳಸಿ ರಚಿಸಲಾದ ಮಧ್ಯಪ್ರಾಚ್ಯದ (Middle East) ನಕ್ಷೆಯೊಂದನ್ನು ಹಂಚಿಕೊಂಡಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಅಮೆರಿಕ ಧ್ವಜವನ್ನು ಹೊಂದಿರುವ ಈ ನಕ್ಷೆಯಲ್ಲಿ ಹಲವು ಕೆಂಪು ಬಾಣದ ಗುರುತುಗಳು ಇರಾನ್ ದೇಶದತ್ತ ಗುರಿ ಇಟ್ಟಿರುವುದನ್ನು ತೋರಿಸಲಾಗಿದೆ.
ಸ್ಥಗಿತಗೊಂಡಿರುವ ಪರಮಾಣು ಮಾತುಕತೆಗಳ ಕುರಿತು ಟೆಹ್ರಾನ್ ತಕ್ಷಣವೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದ ಬೆನ್ನಲ್ಲೇ ಟ್ರಂಪ್ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಇರಾನ್‌ಗೆ ಕಠಿಣ ಸಂದೇಶ ರವಾನಿಸಿರುವ ಅವರು, “ಇರಾನ್ ಪಾಲಿಗೆ ಸಮಯದ ಮುಳ್ಳು ಉರುಳುತ್ತಿದೆ. ಅವರು ಆದಷ್ಟು ಬೇಗ ಕಾರ್ಯಪ್ರವೃತ್ತರಾಗುವುದು ಒಳ್ಳೆಯದು. ಇಲ್ಲದಿದ್ದರೆ ಅವರ ಅಸ್ತಿತ್ವವೇ ಉಳಿಯುವುದಿಲ್ಲ, ಸಮಯ ಕೈಮೀರುತ್ತಿದೆ!” ಎಂದು ಬರೆದುಕೊಂಡಿದ್ದಾರೆ.
ಟ್ರಂಪ್ ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಇಂತಹ ಹಲವು AI ರಚಿತ ಚಿತ್ರಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೂ ಮುನ್ನ, ಅಮೆರಿಕದ ಯುದ್ಧನೌಕೆಗಳು ಇರಾನ್ ತಾಣಗಳ ಮೇಲೆ ದಾಳಿ ಮಾಡುತ್ತಿರುವ ಮತ್ತು ಬಾಹ್ಯಾಕಾಶ ಯುದ್ಧದ ಕೆಲವು ಕಾಲ್ಪನಿಕ ಚಿತ್ರಗಳನ್ನು ಪೋಸ್ಟ್ ಮಾಡಿದ್ದರು. ಆ ಪೈಕಿ ಒಂದು ಚಿತ್ರದಲ್ಲಿ ಟ್ರಂಪ್ ಸೆರೆಸಿಕ್ಕ ಪರಗ್ರಹ ಜೀವಿಯೊಂದರ (Alien) ಜೊತೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಿದ್ದರೆ, ಮತ್ತೊಂದರಲ್ಲಿ “ಸ್ಪೇಸ್ ಫೋರ್ಸ್” ಎಂಬ ಶೀರ್ಷಿಕೆಯೊಂದಿಗೆ ಅವರು ಬಾಹ್ಯಾಕಾಶದಲ್ಲಿರುವಂತೆ ಬಿಂಬಿಸಲಾಗಿತ್ತು.


ಅಮೆರಿಕ ವಿಧಿಸಿದ ಷರತ್ತುಗಳು: ಮರು ಪರಮಾಣು ಮಾತುಕತೆಗಳನ್ನು ಆರಂಭಿಸಲು ಅಮೆರಿಕ ವಿಧಿಸಿದೆ ಎನ್ನಲಾದ ಕೆಲವು ಕಠಿಣ ಷರತ್ತುಗಳ ವಿವರಗಳನ್ನು ಇರಾನ್ ಮಾಧ್ಯಮಗಳು ಬಹಿರಂಗಪಡಿಸಿವೆ. ವಾಷಿಂಗ್ಟನ್‌ನ ಬೇಡಿಕೆಗಳ ಪ್ರಕಾರ, ಟೆಹ್ರಾನ್ ತನ್ನ ಬಳಿ ಇರುವ ಸುಮಾರು 400 ಕಿಲೋಗ್ರಾಂಗಳಷ್ಟು ಪುಷ್ಟೀಕರಿಸಿದ ಯುರೇನಿಯಂ ಅನ್ನು ಹಸ್ತಾಂತರಿಸಬೇಕು, ತನ್ನ ಪರಮಾಣು ಚಟುವಟಿಕೆಯನ್ನು ಕೇವಲ ಒಂದು ಘಟಕಕ್ಕೆ ಸೀಮಿತಗೊಳಿಸಬೇಕು ಮತ್ತು ಯುದ್ಧದ ಪರಿಹಾರಕ್ಕಾಗಿ ಮಾಡುತ್ತಿರುವ ಬೇಡಿಕೆಯನ್ನು ಕೈಬಿಡಬೇಕು. ಅಲ್ಲದೆ, ಫ್ರೀಜ್ ಆಗಿರುವ ಇರಾನ್‌ನ ಆಸ್ತಿಗಳನ್ನು ಮುಕ್ತಗೊಳಿಸುವುದಿಲ್ಲ ಮತ್ತು ಮಾತುಕತೆಗಳು ಸಂಪೂರ್ಣವಾಗಿ ಮುಗಿಯುವವರೆಗೂ ಸಂಘರ್ಷ ಕೊನೆಗೊಳ್ಳುವುದಿಲ್ಲ ಎಂದು ಅಮೆರಿಕ ಷರತ್ತು ವಿಧಿಸಿದೆ.
ಷರತ್ತುಗಳನ್ನು ತಳ್ಳಿಹಾಕಿದ ಇರಾನ್: ಅತ್ತ ಅಮೆರಿಕ ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಿದ್ದರೆ, ಇತ್ತ ಇರಾನ್ ಆ ಎಲ್ಲಾ ಎಚ್ಚರಿಕೆ ಮತ್ತು ಷರತ್ತುಗಳನ್ನು ತಳ್ಳಿಹಾಕುತ್ತಿದೆ. ಪ್ರತಿಯಾಗಿ, ಈ ಪ್ರದೇಶದಲ್ಲಿನ ಅಮೆರಿಕದ ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸಬೇಕು, ಯುದ್ಧದಿಂದಾದ ನಷ್ಟಕ್ಕೆ ಪರಿಹಾರ ನೀಡಬೇಕು ಮತ್ತು ಸ್ಟ್ರೈಟ್ ಆಫ್ ಹಾರ್ಮುಜ್ (Strait of Hormuz) ಜಲಸಂಧಿಯ ಮೇಲಿನ ಇರಾನ್ ನಿಯಂತ್ರಣವನ್ನು ಅಂಗೀಕರಿಸಬೇಕು ಎಂದು ಇರಾನ್ ಪಟ್ಟು ಹಿಡಿದಿದೆ. ಇದೇ ವೇಳೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಅಮೆರಿಕ ಮತ್ತು ಇಸ್ರೇಲ್ ದೇಶಗಳು ʼಭಯೋತ್ಪಾದಕ ಗುಂಪುಗಳನ್ನುʼ ಬೆಂಬಲಿಸುವ ಮೂಲಕ ಇರಾನ್ ಅನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ‘ಅಣ್ವಸ್ತ್ರ ತ್ಯಜಿಸಿದರೆ ಮಾತ್ರ ರಾಜಿ’ ಎಂದ ಟ್ರಂಪ್‌ಗೆ ಇರಾನ್ ತಿರುಗೇಟು
ಕಳೆದ ಏಪ್ರಿಲ್ ತಿಂಗಳಿನಲ್ಲಿ ಕದನ ವಿರಾಮ ಘೋಷಣೆಯಾಗಿದ್ದರೂ, ಇವೆರಡೂ ದೇಶಗಳ ನಡುವೆ ಯಾವುದೇ ಶಾಶ್ವತ ಒಪ್ಪಂದ ಏರ್ಪಡದ ಕಾರಣ ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ. ಈ ಕದನ ವಿರಾಮದ ಕುರಿತು ಈ ಹಿಂದೆ ಮಾತನಾಡಿದ್ದ ಟ್ರಂಪ್, “ನಾವು ಮತ್ತೊಂದು ದೇಶದ ಕೋರಿಕೆಯ ಮೇರೆಗೆ ಈ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದೆವು. ಪಾಕಿಸ್ತಾನಕ್ಕೆ ನೀಡಿದ ಮರ್ಯಾದೆಗಾಗಿ ನಾವು ಇದನ್ನು ಮಾಡಿದ್ದೆವು” ಎಂದು ಹೇಳಿದ್ದರು.




