ರಾಜ್ಯದಲ್ಲಿ ಗ್ರಾಮಗಳು ವಿಸ್ತರಣೆಗೊಂಡಿದ್ದರೂ ಗ್ರಾಮ ಠಾಣೆಗಳನ್ನು ಸಮರ್ಪಕವಾಗಿ ವಿಸ್ತರಣೆ ಮಾಡದಿರುವುದು, ಗ್ರಾಮ ನಕ್ಷೆಗಳನ್ನು ನವೀಕರಿಸುವ ಕ್ರಮ ಹಾಗೂ ಮನೆ ನಿರ್ಮಿಸಿಕೊಂಡಿರುವ ಸಾರ್ವಜನಿಕರಿಗೆ ಸೂಕ್ತ ದಾಖಲೆಗಳನ್ನು ಒದಗಿಸುವ ಕುರಿತು ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಗಳ ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಅವರು ವಿಧಾನ ಪರಿಷತ್‌ನಲ್ಲಿ ಕಂದಾಯ ಸಚಿವರನ್ನು ಪ್ರಶ್ನಿಸಿದರು.
ಬುಧವಾರ ನಡೆದ ವಿಧಾನ ಪರಿಷತ್ ಕಾರ್ಯಕಲಾಪದಲ್ಲಿ ಪ್ರಶ್ನೆ ಮಂಡಿಸಿದ ಅವರು, ಗ್ರಾಮ ನಕ್ಷೆಗಳನ್ನು ಎಷ್ಟು ವರ್ಷಗಳಿಗೊಮ್ಮೆ ತಯಾರಿಸಲಾಗುತ್ತದೆ, ಪ್ರಸ್ತುತ ಯಾವ ವರ್ಷದ ನಕ್ಷೆಗಳು ಚಾಲ್ತಿಯಲ್ಲಿವೆ ಹಾಗೂ ಹೊಸ ನಕ್ಷೆಗಳನ್ನು ತಯಾರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂದು ಪ್ರಶ್ನಿಸಿದರು. ಅಲ್ಲದೆ, ಸಾರ್ವಜನಿಕರು ಮನೆಗಳನ್ನು ನಿರ್ಮಿಸಿಕೊಂಡಿದ್ದರೂ ಸಮರ್ಪಕ ದಾಖಲೆಗಳಿಲ್ಲದಿರುವುದು ಸರ್ಕಾರದ ಗಮನದಲ್ಲಿದೆಯೇ ಹಾಗೂ ಫಾರಂ 11ಬಿ ಬದಲಿಗೆ 11ಎ ನೀಡಲು ಕೈಗೊಂಡಿರುವ ಕ್ರಮಗಳೇನು ಎಂದು ಸಚಿವರ ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ಕಂದಾಯ ಸಚಿವರು, ಕೇಂದ್ರ ಸರ್ಕಾರದ ‘ಸ್ವಮಿತ್ವ’ ಯೋಜನೆಯಡಿ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಡ್ರೋನ್ ಆಧಾರಿತ ಸರ್ವೆ ನಡೆಸಿ, ಆಸ್ತಿಗಳ ಹಕ್ಕು ದಾಖಲೆಗಳನ್ನು ಸಿದ್ಧಪಡಿಸಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಸರ್ವೆ ಗ್ಯಾರಂಟಿ ಅವಧಿ 30 ವರ್ಷ ಪೂರ್ಣಗೊಂಡ ನಂತರ ಭೂಮಿಯ ಮೇಲೆ ಆಗಿರುವ ವಿವಿಧ ಭೌಗೋಳಿಕ ಬದಲಾವಣೆಗಳನ್ನು ಒಳಗೊಂಡಂತೆ ರಾಜ್ಯದ ಎಲ್ಲಾ ಗ್ರಾಮಗಳನ್ನು ಮರುಭೂಮಾಪನಕ್ಕೆ ಒಳಪಡಿಸದಿರುವುದರಿಂದ ನಕ್ಷೆಗಳನ್ನು ಕಾಲೋಚಿತವಾಗಿ ನವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಸಚಿವರು ವಿವರಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ರೈತರ ಹತ್ಯೆ ಆರೋಪ: ಅರಣ್ಯಾಧಿಕಾರಿಗಳ ಬಂಧನಕ್ಕೆ ರೈತ ಸಂಘ ಆಗ್ರಹ
ಮುಂದಿನ ಹಂತದಲ್ಲಿ ಡ್ರೋನ್ ಆಧಾರಿತ ಸರ್ವೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಗ್ರಾಮ ಠಾಣೆಗಳನ್ನು ವಿಸ್ತರಣೆಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು.




