ಅರುಣಾಚಲ ಪ್ರದೇಶದ ಭಾರತ-ಚೀನಾ ಗಡಿಯಲ್ಲಿ ಸೀಮಾ ನಿರ್ಧಾರ ಆಗದಿರುವುದರಿಂದ ಕೆಲವು ಸಮಸ್ಯೆಗಳು ಇರುವುದು ನಿಜ. ಆದರೆ, ಚೀನಾ ಸೇನೆಯು ಭಾರತದ ಭೂಪ್ರದೇಶದೊಳಗೆ 60 ಕಿಲೋಮೀಟರ್‌ಗಳಷ್ಟು ಅತಿಕ್ರಮಣ ಮಾಡಿದೆ ಅಥವಾ ಭಾರತದ ಗ್ರಾಮಗಳನ್ನು ವಶಪಡಿಸಿಕೊಂಡಿದೆ ಎಂಬ ವರದಿಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ಸುಳ್ಳು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿಕೊಂಡಿದ್ದಾರೆ. ಆದರೆ ಕಿರಣ್ ರಿಜಿಜು ನೀಡಿದ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಅರುಣಾಚಲ ಪ್ರದೇಶದ ಗಡಿವಾಸಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸುದ್ದಿ ಸಂಸ್ಥೆ IANS ಗೆ ನೀಡಿದ ಸಂದರ್ಶನದಲ್ಲಿ ಸಚಿವ ಕಿರಣ್ ರಿಜಿಜು, ಚೀನಾ 60 ಕಿ.ಮೀ ನುಗ್ಗಿದೆ ಎಂಬ ವರದಿಗಳು ಸುಳ್ಳು ಮತ್ತು ಇದು ಬರಿ ಸೀಮಾ ನಿರ್ಧಾರದ ಗೊಂದಲ ಎಂದು ಪ್ರತಿಪಾದಿಸಿದ್ದರು. ಈ ಹೇಳಿಕೆ ಬಹಿರಂಗಗೊಳ್ಳುತ್ತಿದ್ದಂತೆ ‘ಎಕ್ಸ್’ (ಟ್ವಿಟರ್) ಹಾಗೂ ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ಗುಡ್‌ಬಾಯ್ ಇಂಡಿಯಾ, ಶೀಘ್ರದಲ್ಲೇ ಚೀನಾದಲ್ಲಿ ಸಿಗೋಣ: ಅರುಣಾಚಲ ಪ್ರದೇಶ ಯುವಕ ಹೀಗೆ ಹೇಳಿದ್ದೇಕೆ?
ಅರುಣಾಚಲ ಪ್ರದೇಶದ ಗಡಿ ಭಾಗದ ಮೂಲ ನಿವಾಸಿಗಳು ಹಾಗೂ ಸ್ಥಳೀಯ ಬುಡಕಟ್ಟು ಸಂಘಟನೆಗಳ ಪ್ರತಿನಿಧಿಗಳು ಸಚಿವರ ಹೇಳಿಕೆಯನ್ನು ಖಂಡಿಸಿದ್ದಾರೆ. ತಮ್ಮ ಸಾಂಪ್ರದಾಯಿಕ ಮೇಯಿಸುವಿಕೆ ಭೂಮಿ (Grazing Lands) ಮತ್ತು ಜಮೀನುಗಳನ್ನು ದಿನದಿಂದ ದಿನಕ್ಕೆ ಚೀನಾ ವಶಪಡಿಸಿಕೊಳ್ಳುತ್ತಿದ್ದು, ಸಚಿವರು ಇದನ್ನು ಕೇವಲ “ಗಡಿ ರೇಖೆಯ ಗೊಂದಲ” ಎಂದು ಕರೆದು ಘಟನೆಯ ಗಂಭೀರತೆಯನ್ನು ತಗ್ಗಿಸಲು ಯತ್ನಿಸುತ್ತಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.
ಇನ್ನು “ಸ್ಥಳೀಯ ಜನಸಾಮಾನ್ಯರು ಅನುಭವಿಸುತ್ತಿರುವ ನೈಜ ಭದ್ರತಾ ಆತಂಕಗಳನ್ನು ‘ಸುಳ್ಳು ವದಂತಿ’ ಅಥವಾ ‘ಹಳೆಯ ವೀಡಿಯೊಗಳ ಅಪಪ್ರಚಾರ’ ಎಂದು ಕರೆಯುವುದು ಗಡಿಭಾಗದ ಜನರ ತ್ಯಾಗ ಹಾಗೂ ಕಾಳಜಿಗೆ ಮಾಡುವ ಅಪಮಾನ” ಎಂದು ಹಲವು ಜಾಲತಾಣ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಗಡಿಯಲ್ಲಿ ವಾಸ್ತವ ರೇಖೆಯ ಸ್ಪಷ್ಟತೆ ಇಲ್ಲದಿರುವುದನ್ನೇ ಚೀನಾ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಸರ್ಕಾರ ಕೇವಲ ಸಮರ್ಥನೆ ನೀಡುವ ಬದಲು ಕಟ್ಟುನಿಟ್ಟಿನ ಗಡಿ ಗುರುತಿಸುವಿಕೆ ಮತ್ತು ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಅರುಣಾಚಲ ಪ್ರದೇಶವನ್ನು ಚೀನಾ ತನ್ನ ‘ಝಂಗ್ನಾನ್’ (ದಕ್ಷಿಣ ಟಿಬೆಟ್) ಎಂದು ಕರೆಯುತ್ತಾ ತನ್ನದೆಂದು ಹಕ್ಕು ಸಾಧಿಸುತ್ತಿದೆ. ಗಡಿಯಲ್ಲಿ ನಿಧಾನವಾಗಿ ನುಸುಳುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಾತ್ರ ತೆಪ್ಪಗಿದೆ. ಈ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಅರುಣಾಚಲ ಪ್ರದೇಶದ ಯುವಕನೋರ್ವನ ವಿಡಿಯೋ ಇತ್ತೀಚೆಗೆ ತೀವ್ರ ವೈರಲ್ ಆಗಿತ್ತು.
ಇದನ್ನೂ ಓದಿ: ಚೀನಾದ ಹೊಸ ನಕ್ಷೆಯಲ್ಲಿ ಅರುಣಾಚಲ ಪ್ರದೇಶ ಸೇರ್ಪಡೆ: ಭಾರತ ಆಕ್ರೋಶ
ವಿಡಿಯೋದಲ್ಲಿ ಯುವಕ, “ಗುಡ್ ಬಾಯ್ ಇಂಡಿಯಾ, ಶೀಘ್ರದಲ್ಲೇ ನೀವು ನನ್ನನ್ನು ಚೀನಾದಲ್ಲಿ ನೋಡುತ್ತೀರಿ. ನನ್ನನ್ನು ಮಾತ್ರವಲ್ಲ ಇಡೀ ಅರುಣಾಚಲ ಪ್ರದೇಶದವರನ್ನು ನೀವು ಚೀನಾದಲ್ಲಿ ನೋಡಬೇಕಾಗುತ್ತದೆ. ನಿಧಾನವಾಗಿ ಚೀನಾ ಅರುಣಾಚಲದೊಳಕ್ಕೆ ನುಗ್ಗುತ್ತಿದೆ. ಇಲ್ಲಿನ ಭೂಮಿಯನ್ನು ಕಬಳಿಸುತ್ತಿದೆ. ಈ ನಿಟ್ಟಿನಲ್ಲಿ ಚೀನಾದ ವಿರುದ್ಧ ಕ್ರಮಕೈಗೊಳ್ಳುವಂತೆ ಇಲ್ಲಿನ ಜನರು ಸರ್ಕಾರಕ್ಕೆ ಪದೇ ಪದೇ ಹೇಳುತ್ತಲೇ ಇದ್ದಾರೆ. ಆದರೆ ಸರ್ಕಾರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾನೆ.
ಹಾಗೆಯೇ, “ಸರ್ಕಾರ ಬರೀ ಸುಳ್ಳು ಹೇಳುತ್ತಲೇ ಇದೆ. ಹೀಗೆಯೇ ಆದರೆ ತುಂಬ ಸಮಯ ಬೇಕಾಗಿಲ್ಲ, ಕೆಲವೇ ವರ್ಷದಲ್ಲಿ ಚೀನಾ ಅರುಣಾಚಲವನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆದುಕೊಳ್ಳುತ್ತದೆ. ನೀವೆಲ್ಲರೂ ನಮ್ಮನ್ನು ಅಂದರೆ ಅರುಣಾಚಲ ವಾಸಿಗಳನ್ನು ಚೀನಾದಲ್ಲಿ ನೋಡಬೇಕಾಗುತ್ತದೆ. ಅದಕ್ಕಾಗಿ ನಾನು ಈಗಲೇ ಗುಡ್ ಬಾಯ್ ಹೇಳುತ್ತೇನೆ. ಸರ್ಕಾರ ಯಾವುದೇ ಕ್ರಮಕೈಗೊಳ್ಳ. ನಾವೂ ಏನೂ ಮಾಡೋಕೆ ಆಗಲ್ಲ. ಈಗ ಚೀನಾದೊಂದಿಗೆಯೇ ಹೋಗಬೇಕಾಗುತ್ತದೆ. ಭವಿಷ್ಯದಲ್ಲಿ ಚೀನಾದಲ್ಲಿ ಸಿಗೋಣ” ಎಂದಿದ್ದಾನೆ. ಈ ವಿಡಿಯೋವನ್ನು ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಹಂಚಿಕೊಂಡಿದ್ದರು. ಆದರೆ ಆ ಪೋಸ್ಟ್ ಅನ್ನು ಸಂಘಪರಿವಾರದವರು ರಿಪೋರ್ಟ್ ಮಾಡಿ ಡಿಲೀಟ್ ಆಗುವಂತೆ ಮಾಡಿದ್ದಾರೆ.




