ಜಿಲ್ಲೆಯಲ್ಲಿ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ತಾಪಮಾನಕ್ಕೆ ಜನ ಕಂಗಾಲಾಗಿದ್ದಾರೆ. ಪ್ರಾಣಿ ಪಕ್ಷಿಗಳ ಪಾಡು ಹೇಳತೀರದು. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3ರವರೆಗೆ ಸೂರ್ಯನ ಶಾಖದ ಪ್ರಖರತೆ ಹೆಚ್ಚಾಗಿ ಹೊರಗಡೆ ಓಡಾಡಲು ಕಷ್ಟವಾಗುತ್ತಿದೆ. ಹಗಲಿಡೀ ಬಿಸಿಲಿಗೆ ಕಾದ ಭೂಮಿ ರಾತ್ರಿ ಸೆಕೆ ಹೊರಹೊಮ್ಮಿಸುತ್ತಿದ್ದು, ಸೆಕೆಯ ಬಾಧೆ ತಡೆದುಕೊಳ್ಳಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂತರಗಂಗೆ ಬೆಟ್ಟದಲ್ಲಿ ಕೋತಿಗಳು ನೀರಿಲ್ಲದೆ ಪರದಾಡುತ್ತಿದ್ದು, ಅಸ್ವಸ್ಥಗೊಳ್ಳುತ್ತಿವೆ. ಕೆಲ ಕೋತಿಗಳು ನಗರ ಪ್ರದೇಶದೊಳಗೆ ಲಗ್ಗೆ ಇಡುತ್ತಿವೆ. ಪ್ರವಾಸಿಗರು, ಸಮಾಜ ಸೇವಕರು, ಪರಿಸರ ಪ್ರೇಮಿಗಳು ನೀರು ಹಾಗೂ ಹಣ್ಣಿನ ವ್ಯವಸ್ಥೆ ಮಾಡುತ್ತಿದ್ದಾರೆ.ಹಸಿವು ಹಾಗೂ ದಾಹದಿಂದ ಭಕ್ತರ ಮೇಲೂ ಕೋತಿಗಳು ದಾಳಿ ನಡೆಸುತ್ತಿವೆ. ಮೆಟ್ಟಿಲು ಹತ್ತಿ ಅಂತರಗಂಗೆ ಕಾಶಿ ವಿಶ್ವೇಶ್ವರ ದೇಗುಲಕ್ಕೆ ತೆರಳುವವರ ಬ್ಯಾಗ್ ಕಿತ್ತುಕೊಳ್ಳಲು ಮುಂದಾಗುತ್ತಿವೆ.
ಮಕ್ಕಳು, ವಯೋವೃದ್ಧರು, ಬೀದಿಬದಿ ವ್ಯಾಪಾರಿಗಳು, ಸಂತೆಗಳಲ್ಲಿ ಮಾರಾಟಮಾಡುವ ವ್ಯಾಪಾರಿಗಳು, ಬಿಸಲಿನಲ್ಲಿ ಕೆಲಸ ಮಾಡುವ ಕೂಲಿಕಾರರು ಹಾಗೂ ವಾಹನ ಚಾಲಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ದಾಹ ತೀರಿಸಿಕೊಳ್ಳಲು ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಕಲ್ಲಂಗಡಿ, ಕಬ್ಬಿನ ಹಾಲು, ಎಳನೀರು ಮೊದಲಾದ ಪಾನೀಯಗಳ ಮಾರಾಟ ಬರದಿಂದ ಸಾಗಿದೆ. ಅಲ್ಲದೇ, ರಸ್ತೆ ಬದಿಯ ತಂಪು ಪಾನೀಯ ಅಂಗಡಿಯಲ್ಲಿ ಲಿಂಬೂ ಸೋಡಾ, ಲಸ್ಸಿ, ಸೇಬು, ಮೋಸಂಬಿ, ಕಿತ್ತಳೆ, ಮಜ್ಜಿಗೆ ಕುಡಿಯುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ. ಮಡಕೆಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ನಗರ ಕುಂಬಾರ ಬೀದಿಯಲ್ಲಿ ಮಾರಾಟ ಬಿರುಸಿನಿಂದ ಸಾಗಿದೆ. ಜ್ಯೂಸ್‌ಗೆ ಬೇಡಿಕೆ ಹೆಚ್ಚಿರುವ ಕಾರಣ ಒಂದು ನಿಂಬೆ ಹಣ್ಣಿಗೆ ₹ 10 ತಲುಪಿದೆ. ಕೆ.ಜಿ ನಿಂಬೆ ಹಣ್ಣಿನ ದರ ₹ 240ಕ್ಕೇರಿದೆ.
ಬಿಸಿಲಿನ ಧಗೆಯಿಂದ ರಕ್ಷಣೆ ಪಡೆಯಲು ಜಿಲ್ಲೆಯ ಜನರು ಮುಂಜಾಗ್ರತಾ ಕ್ರಮ ವಹಿಸಬೇಕು. ಸಮಸ್ಯೆಗೆ ಸ್ಪಂದಿಸಲು ಜಿಲ್ಲಾಡಳಿತ ಸದಾ ಸಿದ್ಧವಾಗಿದೆ. ಹೆಚ್ಚು ನೀರು, ತಂಪು ಪಾನೀಯ ಸೇವಿಸಿ. ಮಧ್ಯಾಹ್ನ 12ರಿಂದ ಮಧ್ಯಾಹ್ನ 3 ಗಂಟೆವರೆಗೆ ಅನವಶ್ಯಕವಾಗಿ ಓಡಾಡಬೇಡಿ. ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ಮನೆಯ ಹೊರಗಡೆ ನೀರು ಇಡುವ ಮೂಲಕ ಮಾನವೀಯ ಪ್ರದರ್ಶನ ಮಾಡಿ. ಕುಡಿಯುವ ನೀರಿಗೆ ಕೆಲವೆಡೆ ಸಮಸ್ಯೆ ಉದ್ಭವಿಸುತ್ತಿವೆ. ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರಿಕರು ಕೈ ಜೋಡಿಸಬೇಕು. ನೀರನ್ನು ಮಿತವಾಗಿ ಬಳಸಿ ಸಂರಕ್ಷಿಸಬೇಕು ಎಂ.ಆರ್.ರವಿ, ಜಿಲ್ಲಾಧಿಕಾರಿ
ಪ್ರಾಣಿ, ಪಕ್ಷಿಗಳ ರೋದನೆ ಹೇಳತೀರದು. ಸಾಕು ಪ್ರಾಣಿಗಳಿಂದ ಹಿಡಿದು ಬೆಟ್ಟ ಗುಡ್ಡ ಕಾಡುಗಳಲ್ಲಿ ಕೋತಿಗಳು, ಪಕ್ಷಿಗಳು, ಇತರ ಪ್ರಾಣಿಗಳಿಗೆ ನೀರು ಹಾಗೂ ಆಹಾರಕ್ಕೆ ತೊಂದರೆ ಉಂಟಾಗಿದೆ. ಬಿಸಿಲಿನಿಂದ ಕಾಡಿನಲ್ಲಿ ಕೆರೆ ಕಟ್ಟೆ, ಝರಿ ಒಣಗಿವೆ.
ಜಾನುವಾರುಗಳು ಹಾಗೂ ಶ್ವಾನಗಳಿಗೂ ಬಿಸಿಲಿನ ಝಳ ತಟ್ಟಿದೆ. ಕುರಿ ಮೇಕೆಗಳಿಗೂ ನೀರಿನ ಕೊರತೆ ಎದುರಾಗಿದೆ. ಕೆಲವಡೆ ಕೆರೆಗಳಲ್ಲಿ ನೀರು ಬತ್ತಿ ಹೋಗಿದೆ.
ಇದನ್ನು ಓದಿದ್ದೀರಾ..? ಚಿಕ್ಕಬಳ್ಳಾಪುರ | ರಾಸುಗಳ ಜಿಲ್ಲಾಡಳಿತ ಭವನಕ್ಕೆ ನುಗ್ಗಿಸಲು ಯತ್ನ; ರೈತರು, ಪೊಲೀಸರ ನಡುವೆ ತೀವ್ರ ಜಟಾಪಟಿ
ಕೋಲಾರ ನಗರದ ಮಳಿಗೆಗಳಲ್ಲಿ ಫ್ಯಾನ್ ಹಾಗೂ ಹವಾ ನಿಯಂತ್ರಣ ಯಂತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ಆಮದು ಆಗುತ್ತಿವೆ. ಮಳಿಗೆ ಒಳಗೆ ಜಾಗ ಸಾಲದೆ ಪಾದಚಾರಿ ರಸ್ತೆಯಲ್ಲೂ ಹೊಸದಾಗಿ ಬಂದಿರುವ ಫ್ಯಾನ್ ಹಾಗೂ ಏ.ಸಿ ಇಟ್ಟಿದ್ದಾರೆ. ಈ ನಡುವೆ ಜಿಲ್ಲಾಡಳಿತ ಕೂಡ ತಾಪಮಾನದ ಸಂಬಂಧ ಜನರಿಗೆ ಎಚ್ಚರಿಕೆ ನೀಡುತ್ತಿದೆ. ನಗರ, ಪಟ್ಟಣಗಳಲ್ಲಿ ವಾಹನದ ಮೂಲಕ ತೆರಳಿ ಯಾವ ರೀತಿ ಎಚ್ಚರಿಕೆ ಕ್ರಮ ವಹಿಸಬೇಕು ಎಂಬುದನ್ನು ಮೈಕ್ ಮೂಲಕ ಹೇಳಲಾಗುತ್ತಿದೆ.





