ಬಡ ಕಲ್ಲುಕುಟುಕರ 3ಎಫ್ ಫಲಾನುಭವಿಗಳಿಗೆ ವಿನಾಕಾರಣ ತೊಂದರೆ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನರಸಾಪುರ ಮತ್ತು ವೇಮಗಲ್ ಹೋಬಳಿಗಳ ಬಡ ಕೂಲಿ ಕಾರ್ಮಿಕರಿಗೆ ಕಟ್ಟಡ ಕಲ್ಲು ಗಣಿಗಾರಿಕೆ ಗುತ್ತಿಗೆ ಪಡೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೂಲಕ ಪ್ರಕ್ರಿಯೆಗೊಳಿಸಿರುವ ಪರವಾನಗಿ ಹಾಗೂ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ರದ್ದುಪಡಿಸಬಾರದು ಎಂದು ಜಿಲ್ಲಾ ಬೋವಿ ಸಂಘ ಹಾಗೂ ವಿವಿಧ ದಲಿತಪರ ಸಂಘಟನೆಗಳು ಒತ್ತಾಯಿಸಿದರು
ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದ ಮುಖಂಡರು, ಅಪರ ಜಿಲ್ಲಾಧಿಕಾರಿ ಎಂ.ಎಸ್. ಮಂಗಳ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೋವಿ ಯುವ ವೇದಿಕೆಯ ಜಿಲ್ಲಾ ಅಧ್ಯಕ್ಷ ಲಕ್ಷ್ಮೀಸಾಗರ ಮುನಿರಾಜು ಮಾತನಾಡಿ ನರಸಾಪುರ ಹೋಬಳಿಯ ದಿನ್ನೆಹೊಸಹಳ್ಳಿ ಗ್ರಾಮದ ಸರ್ವೆ ನಂ.58, ದಾನವಹಳ್ಳಿ ಗ್ರಾಮದ ಸರ್ವೆ ನಂ.2, ತೋರಣಕಂಬದಹಳ್ಳಿ ಗ್ರಾಮದ ಸರ್ವೆ ನಂ.7 ಹಾಗೂ ಸೊಣ್ಣೆನಹಳ್ಳಿ ಗ್ರಾಮದ ಸರ್ವೆ ನಂ.25ರಲ್ಲಿ ಕಟ್ಟಡ ಕಲ್ಲು ಗಣಿಗಾರಿಕೆ ಗುತ್ತಿಗೆ ಪಡೆಯಲು ಬಡ ಕೂಲಿ ಕಾರ್ಮಿಕರು ಅರ್ಜಿ ಸಲ್ಲಿಸಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ, ಸ್ಥಳ ತನಿಖೆ ನಡೆಸಿ ಅರ್ಹ ಅರ್ಜಿದಾರರಿಗೆ ಗುತ್ತಿಗೆ ಮಂಜೂರು ಮಾಡಲು ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವಂತೆ ಶಿಫಾರಸು ಮಾಡಿದ್ದಾರೆ. ಆದರೆ ಕೆಲವರು ವೈಯಕ್ತಿಕ ದ್ವೇಷದಿಂದ ತಕರಾರು ಅರ್ಜಿಗಳನ್ನು ಸಲ್ಲಿಸಿ ಬಡ ಕಾರ್ಮಿಕರ ಬದುಕಿಗೆ ಅಡ್ಡಿಯಾಗುತ್ತಿದ್ದಾರೆ ಎಂದು ಆರೋಪಿಸಿದರು.
ದಸಂಸ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವರದೇನಹಳ್ಳಿ ವೆಂಕಟೇಶ್ ಮಾತನಾಡಿ ಕಲ್ಲುಕುಟುಕುವ ವೃತ್ತಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಕುಟುಂಬಗಳಿಗೆ ಗಣಿಗಾರಿಕೆ ಗುತ್ತಿಗೆ ದೊರೆತರೆ ಉದ್ಯೋಗ ಮತ್ತು ಆರ್ಥಿಕ ಭದ್ರತೆ ಸಿಗಲಿದೆ. ಆದರೆ ದಾನವಹಳ್ಳಿ ಗ್ರಾಮದ ಕೆಂಪರಾಜು ಮತ್ತು ಅವರ ಸಹಚರರು ಸಾರ್ವಜನಿಕರು, ಗುತ್ತಿಗೆದಾರರು, ಸರ್ಕಾರಿ ಅಧಿಕಾರಿಗಳು ಹಾಗೂ ಬಡ ಕಲ್ಲುಕುಟುಕರಿಗೆ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಿ, ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬೋವಿ ಸಂಘದ ಜಿಲ್ಲಾ ಅಧ್ಯಕ್ಷ ಸಿ.ವಿ ಗೋಪಾಲ್ ಮಾತನಾಡಿ ಬಡ ಕಾರ್ಮಿಕರ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಸುಳ್ಳು ದೂರು ಹಾಗೂ ತಕರಾರುಗಳ ಆಧಾರದಲ್ಲಿ ಅರ್ಹರ ಅರ್ಜಿಗಳನ್ನು ತಿರಸ್ಕರಿಸಬಾರದು. ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ..? ಶ್ರೀನಿವಾಸಪುರ | ರೈತರ ಮೇಲೆ ದೌರ್ಜನ್ಯ ಆರೋಪ, ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹ
ಪ್ರತಿಭಟನೆಯಲ್ಲಿ ಮಾದಿಗ ದಂಡೋರ ಜಿಲ್ಲಾ ಅಧ್ಯಕ್ಷ ಅಲೇರಿ ಮುನಿರಾಜು, ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಮುಳ್ಳಹಳ್ಳಿ ವೆಂಕಟಸ್ವಾಮಿ, ಚುಂಚದೇನಹಳ್ಳಿ ವೆಂಕಟೇಶ್, ಬೈರಸಂದ್ರ ಪ್ರಕಾಶ್, ಬೆಳ್ಳೂರು ಅನಿಲ್, ಜ್ಞಾನಮ್ಮ, ಕರ್ನಾಟಕ ಬೋವಿ ಬಳಗದ ಲೋಕೇಶ್ ಸೇರಿದಂತೆ ಜಿಲ್ಲಾ ಬೋವಿ ಸಂಘದ ಮುಖಂಡರು ಹಾಗೂ ವಿವಿಧ ದಲಿತಪರ ಸಂಘಟನೆಗಳ ಪದಾಧಿಕಾರಿಗಳು, ಕಲ್ಲುಕುಟುಕರು ಮತ್ತು ಕಾರ್ಮಿಕರು ಭಾಗವಹಿಸಿದ್ದರು.




