ಜಿಲ್ಲೆಯಲ್ಲಿ ತಲೆದೋರಿರುವ ಭೀಕರ ಬರ ಪರಿಸ್ಥಿತಿಯ ಗಂಭೀರತೆಯನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ, ಕೂಡಲೇ ಬರ ಪರಿಹಾರಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ವತಿಯಿಂದ ಮಂಗಳವಾರ ನಗರದ ಮೆಕ್ಕೆ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಜೆಡಿಎಸ್ ಮುಖಂಡ ಸಿ.ಎಂ.ಆರ್. ಶ್ರೀನಾಥ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರ್ ಶ್ರೀನಿವಾಸ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಸದ ಎಂ. ಮಲ್ಲೇಶ್ ಬಾಬು, ಬರಪೀಡಿತ ಜಿಲ್ಲೆ ಎಂಬ ಹೆಸರೇ ಹೊಂದಿರುವ ಕೋಲಾರದಲ್ಲಿ ಈ ಬಾರಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ರಾಜ್ಯ ಸರ್ಕಾರ ಬರ ನಿರ್ವಹಣೆ ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ಹಿಂದೆ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾದಾಗ ಕೇಂದ್ರ ಸರ್ಕಾರದತ್ತ ಬೆರಳು ತೋರಿಸದೆ ರಾಜ್ಯದ ಸಂಪನ್ಮೂಲಗಳ ಮೂಲಕವೇ ಸಮರ್ಪಕವಾಗಿ ನಿರ್ವಹಣೆ ಮಾಡಲಾಗಿತ್ತು. ಆದರೆ ಈಗ ಭೀಕರ ಬರ ಎದುರಾಗಿದ್ದರೂ ರೈತರಿಗೆ ನಯಾಪೈಸೆ ಪರಿಹಾರ ನೀಡಿಲ್ಲ ಎಂದು ದೂರಿದರು.
ರಾಜ್ಯ ಸರ್ಕಾರದ ಬಳಿ ಹಣದ ಕೊರತೆ ಉಂಟಾಗಿದ್ದು ಕಾರಣ ನೀಡಿ ರೈತರ ಸಮಸ್ಯೆಯನ್ನು ಕಡೆಗಣಿಸಲಾಗುತ್ತಿದೆ. ಇನ್ನೊಂದು ವಾರದೊಳಗೆ ಜಿಲ್ಲೆಯ ಬರಪೀಡಿತ ರೈತರಿಗೆ ಸೂಕ್ತ ಪರಿಹಾರ ಹಾಗೂ ಅನುದಾನ ಬಿಡುಗಡೆ ಮಾಡದಿದ್ದರೆ ಜೆಡಿಎಸ್ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜೆಡಿಎಸ್ ಮುಖಂಡ ಸಿ.ಎಂ.ಆರ್. ಶ್ರೀನಾಥ್ ಮಾತನಾಡಿ, ಕಳೆದ ಹತ್ತು ವರ್ಷಗಳ ಬಳಿಕ ಜಿಲ್ಲೆಯಲ್ಲಿ ಇಂತಹ ಭೀಕರ ಬರಗಾಲ ಎದುರಾಗಿದೆ. ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಶೇ.80ರಷ್ಟು ಮಳೆ ಕೊರತೆಯಾಗಿದೆ. ರೈತರು ಬಿತ್ತನೆ ಮಾಡಿದರೂ ಮಳೆಯ ಕೊರತೆಯಿಂದ ಬೆಳೆಗಳು ಮೊಳಕೆಯೊಡೆಯದೆ ನಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸುಮಾರು ಶೇ.50ರಷ್ಟು ರೈತರು ನೀರಾವರಿ ಸೌಲಭ್ಯ ಹೊಂದಿದ್ದರೂ, ಸಾವಿರಾರು ಅಡಿ ಆಳದ ಬೋರ್‌ವೆಲ್‌ಗಳಿಂದ ನೀರನ್ನು ಮೇಲೆತ್ತಿ ಕೃಷಿ ಮಾಡುತ್ತಿದ್ದಾರೆ. ಅಂತರ್ಜಲ ಮಟ್ಟ ಕುಸಿದಿರುವುದರಿಂದ ಬೋರ್‌ವೆಲ್‌ಗಳ ಮೇಲಿನ ಅವಲಂಬನೆ ಹೆಚ್ಚಾಗಿದೆ. ಇದರ ನಡುವೆ ರೈತರ ಪಂಪ್‌ಸೆಟ್‌ಗಳಿಗೆ ಪ್ರತಿನಿತ್ಯ ನೀಡಲಾಗುತ್ತಿದ್ದ ಏಳು ಗಂಟೆಗಳ ವಿದ್ಯುತ್ ಪೂರೈಕೆಯನ್ನು ಕೇವಲ ಎರಡು ಗಂಟೆಗಳಿಗೆ ಸೀಮಿತಗೊಳಿಸಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು.
ರೈತರ ಬೆಳೆ ನಷ್ಟ, ಜಾನುವಾರುಗಳ ಮೇವಿನ ಕೊರತೆ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಬರದಿಂದ ಉಂಟಾಗಿರುವ ಸಂಕಷ್ಟಕ್ಕೆ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಬೇಕು. ತುರ್ತು ಪರಿಹಾರದಡಿ ಜಿಲ್ಲೆಯ ರೈತ ಕುಟುಂಬಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಕನಿಷ್ಠ 600 ಕೋಟಿ ಪರಿಹಾರ ನೀಡಬೇಕು ಇಲ್ಲವಾದರೆ ರೈತರು ಜೀವನೋಪಾಯಕ್ಕಾಗಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತರ ಸಮಸ್ಯೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸದಿದ್ದರೆ ಜಿಲ್ಲೆಯಿಂದ ಬೆಂಗಳೂರಿಗೆ ತೆರಳಿ ಬೆಂಗಳೂರು ಚಲೋ ಹಮ್ಮಿಕೊಂಡು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಸಿ.ಎಂ.ಆರ್. ಶ್ರೀನಾಥ್ ಎಚ್ಚರಿಸಿದರು.
ಇದನ್ನು ಓದಿದ್ದೀರಾ..?ಮಾಲೂರು | ನೈಸ್ ಟೋಲ್ ಅಕ್ರಮ – 7 ದಿನದಲ್ಲಿ ಸ್ಫೋಟಕ ಸತ್ಯ ಬಹಿರಂಗವಾಗುತ್ತೆ
ಪ್ರತಿಭಟನೆಯಲ್ಲಿ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಬನಕನಹಳ್ಳಿ ನಟರಾಜ್, ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ವಕ್ಕಲೇರಿ ರಾಮು, ತಾಲೂಕು ಸೊಸೈಟಿ ಅಧ್ಯಕ್ಷ ವಡಗೂರು ರಾಮು, ವೇಮಗಲ್–ಕುರಗಲ್ ಪಟ್ಟಣ ಪಂಚಾಯಿತಿ ಸದಸ್ಯರಾದ ಲೋಕೇಶ್ ಮರಿಯಪ್ಪ, ರವಿ, ಕೆ.ಎಸ್. ರಮೇಶ್, ಮುಖಂಡರಾದ ಬಾಬು ಮೌನಿ, ಚಿಕ್ಕಹಸಾಳ ಮಂಜುನಾಥ್, ಕಲಾ ರಮೇಶ್, ಜೆಟ್ ಅಶೋಕ್, ಕುರಗಲ್ ಗಿರೀಶ್, ಜಯನಗರ ಕಾರ್ತಿಕ್, ಛತ್ರಕೋಡಿಹಳ್ಳಿ ಕುಮಾರ್, ಅನ್ವರ್ ಪಾಷ್, ವಕ್ಕಲೇರಿ ಚಿರಂಜೀವಿ, ಚಿಕ್ಕನಹಳ್ಳಿ ಮುನಿಸ್ವಾಮಿಗೌಡ, ವಿ.ಕೆ.ರಾಜೇಶ್, ಚಂಬೆ ರಾಜೇಶ್, ಎಸ್‌ಎಂಎಸ್ ಸಂತೋಷ್ ಮುಂತಾದವರು ಭಾಗವಹಿಸಿದ್ದರು.




