ಉಡುಪಿ ಮೂಲದ ವ್ಯಕ್ತಿಯೊಬ್ಬರು ಯುಎಇಯ ಶಾರ್ಜಾದಲ್ಲಿ ಹತ್ಯೆಯಾಗಿದ್ದಾರೆ ಎಂಬ ವರದಿಗಳು ಕೆಲವು ಸ್ಥಳೀಯ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿವೆ.
ಆದರೆ, ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಶಾರ್ಜಾ ಪೊಲೀಸ್ ಇಲಾಖೆ ಅಥವಾ ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ/ಕಾನ್ಸುಲೇಟ್ ವತಿಯಿಂದ ಉಡುಪಿ ಜಿಲ್ಲಾ ಪೊಲೀಸರಿಗೆ ಯಾವುದೇ ಅಧಿಕೃತ ಮಾಹಿತಿ ಅಥವಾ ದೃಢೀಕರಣ ಲಭ್ಯವಾಗಿರುವುದಿಲ್ಲ.
ಹೀಗಾಗಿ, ಸಾಮಾಜಿಕ ಜಾಲತಾಣಗಳು ಹಾಗೂ ಇತರೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿಗಳ ಅಧಿಕೃತತೆಯನ್ನು ಸದ್ಯಕ್ಕೆ ದೃಢೀಕರಿಸಲು ಸಾಧ್ಯವಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿ ಉಡುಪಿ ಜಿಲ್ಲಾ ಪೊಲೀಸರಿಗೆ ಲಭ್ಯವಾದಲ್ಲಿ, ಅದನ್ನು ಪರಿಶೀಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಮೃತರ ಸಹೋದರ ಅನಿಲ್ ಪ್ರಶಾಂತ್ ಕುಂದರ್ ಇಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜು.20ರಂದು ನಾನು ಪ್ರಕಾಶ್‌ಗೆ ಕರೆ ಮಾಡಿದ್ದು, ಆದರೆ ಆತ ಕರೆಯನ್ನು ಸ್ವೀಕರಿಸಿರಲಿಲ್ಲ. ಅದರ ಬದಲು ಆತ ನನಗೆ ಟೈಪಿಂಗ್ ಮೆಸೇಜ್ ಕಳುಹಿಸಿ ನಾನು ಸೌಖ್ಯ ಇದ್ದೇನೆ ಎಂದು ಹೇಳಿದ್ದನು. ಅವ ಯಾವತ್ತಿಗೂ ಈ ರೀತಿ ಟೈಪಿಂಗ್ ಮೆಸೇಜ್ ಕಳುಹಿಸುವುದಿಲ್ಲ. ಒಂದು ವಾರ ಬಿಟ್ಟು ಮತ್ತೆ ಕರೆ ಮಾಡಿದಾಗಲೂ ಸ್ವೀಕರಿಸಲಿಲ್ಲ ಎಂದು ತಿಳಿಸಿದರು.
ಇದರಿಂದ ಸಂಶಯ ಮೂಡಿ ಅಲ್ಲೇ ಇರುವ ಪ್ರಕಾಶ್‌ನ ಕ್ಲಾಸ್‌ಮೇಟ್ ಮನೋಹರ್‌ಗೆ ಕರೆ ಮಾಡಿ ಮಾಹಿತಿ ನೀಡಿದೆ. ಆತ ಪ್ರಕಾಶ್‌ಗೆ ಕಂಪೆನಿಗೆ ನೀಡಿದ ಫ್ಲ್ಯಾಟ್‌ಗೆ ಹೋಗಿ ವಿಚಾರಿಸಿದನು. ಆಗ ಅಲ್ಲಿನ ವಾಚ್‌ಮೆನ್ ಅವರು ಭಾರತಕ್ಕೆ ಹೋಗಿದ್ದಾರೆ ಎಂದು ತಿಳಿಸಿದ್ದನು. ಈ ಹಿನ್ನೆಲೆಯಲ್ಲಿ ನಾನೇ ಸ್ವತಃ ಪ್ರಕಾಶ್ ಕಂಪೆನಿಯ ಎಚ್‌ಆರ್‌ಗೆ ಕರೆ ಮಾಡಿದೆ. ಅವರು ಕೂಡ ಅವರ ಭಾರತಕ್ಕೆ ಹೋಗಿದ್ದರು ಎಂದು ತಿಳಿಸಿದರು.
ಅದಕ್ಕೆ ನಾನು ಮರುದಿನ ಕರೆ ಮಾಡಿ, ಅವರು ಭಾರತಕ್ಕೆ ಬಂದಿಲ್ಲ, ಅಲ್ಲಿಯೇ ಇದ್ದಾರೆ. ಪರಿಶೀಲಿಸುವಂತೆ ಮನವಿ ಮಾಡಿದೆ. ಆಗ ಅವರು ಪಾಸ್‌ಪೋರ್ಟ್ ಚೆಕ್ ಮಾಡುವಾಗ ಪ್ರಕಾಶ್ ಶಾರ್ಜಾದಲ್ಲಿಯೇ ಇರುವುದು ಕಂಡುಬಂದಿದೆ.
ಅದರಂತೆ ಇಲ್ಲಿಂದ ಆತ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದೆ. ಬಳಿಕ ತನಿಖೆ ಮಾಡಿದಾಗ ಒಮನ್‌ಗೆ ಹೋಗುವ ಮಾರ್ಗದ ಬದಿ ಕಾರಿನಲ್ಲಿ ಒಂಭತ್ತು ತುಂಡುಗಳಾಗಿ ಎರಡು ಬ್ಯಾಗ್‌ನಲ್ಲಿ ತುಂಬಿಸಿಟ್ಟ ಮೃತದೇಹ ಪತ್ತೆಯಾಯಿತು. ಬಳಿಕ ಪರಿಶೀಲಿಸಿದಾಗ ಈ ಮೃತದೇಹ ಪ್ರಕಾಶ್ ಅವರದ್ದೇ ಎಂಬುದು ದೃಢಪಟ್ಟಿತು. ಈ ಸಂಬಂಧ ಮರಣೋತ್ತರ ಪರೀಕ್ಷೆಯ ವರದಿ ನಿನ್ನೆಯಷ್ಟೇ ನಮ್ಮ ಕೈಸೇರಿದೆ ಎಂದು ಅವರು ತಿಳಿಸಿದರು.
ಪ್ರಕಾಶ್ ಪತ್ನಿ ಮತ್ತು ಮಗ ಈಗ ಶಾರ್ಜಾದಲ್ಲಿ ಇಲ್ಲ. ಆಕೆ ಭಾರತಕ್ಕೆ ಬಂದಿದ್ದಾರೆ ಎಂದು ಹೇಳುತ್ತಾರೆ. ಆದರೆ ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಎಸ್ಪಿಗೆ ಮನವಿ ಸಲ್ಲಿಸಿದ್ದೇನೆ. ಈ ಕುರಿತು ಸಮಗ್ರ ತನಿಖೆ ಆಗಬೇಕು. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.






