ಕೋಲಾರದ ಗಾಂಧಿನಗರದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯ ಪ್ರಯುಕ್ತ ಇಂದು ಗೌತಮ ಬುದ್ಧ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಮಹತ್ವದ ಸಾಮಾಜಿಕ ಕಾರ್ಯಕ್ರಮ ನಡೆಯಿತು. ಮಾನವ ಹಕ್ಕುಗಳ ರಾಜ್ಯ ಅಧ್ಯಕ್ಷ ಸಿ ಯಲ್ಲಪ್ಪ ಅವರ ನೇತೃತ್ವದಲ್ಲಿ ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 20 ಅಡಿ ಎತ್ತರದ ಭವ್ಯ ಪುತ್ತಳಿ ಅನಾವರಣಕ್ಕೆ ಸಂಬಂಧಿಸಿದಂತೆ ಗುದ್ದಲಿ ಪೂಜೆ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು.
ಹಲವಾರು ಹೋರಾಟಗಾರರು, ಸಮಾಜ ಸೇವಕರು, ಪ್ರಮುಖ ಮುಖಂಡರು ಹಾಗೂ ಸ್ಥಳೀಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಸಮೂಹವಾಗಿ ಗುದ್ದಲಿಯನ್ನು ಹಿಡಿದು ಭೂಮಿ ಪೂಜೆ ನೆರವೇರಿಸಲಾಯಿತು. ಪೂಜಾ ಸಂದರ್ಭದಲ್ಲಿ ಹೂವುಗಳು, ಹಣ್ಣುಗಳು ಮತ್ತು ಪೂಜಾ ಸಾಮಗ್ರಿಗಳೊಂದಿಗೆ ಶಾಸ್ತ್ರೋಕ್ತ ವಿಧಾನದಲ್ಲಿ ಕಾರ್ಯ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿ ಯಲ್ಲಪ್ಪ ಅವರು ಡಾ. ಅಂಬೇಡ್ಕರ್ ಅವರ ತತ್ವಗಳು ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಶಿಕ್ಷಣದ ಬೆಳಕನ್ನು ಹರಡುತ್ತಿವೆ ಎಂದು ಅಭಿಪ್ರಾಯಪಟ್ಟರು. ಶಿಕ್ಷಣ ಪಡೆಯಿರಿ, ಸಂಘಟಿತರಾಗಿರಿ, ಹೋರಾಡಿರಿ ಎಂಬ ಅವರ ಸಂದೇಶವು ಇಂದಿಗೂ ಪ್ರಸ್ತುತವಾಗಿದೆ ಎಂದು ತಿಳಿಸಿದರು.
ಗೌತಮ ಬುದ್ಧ ಅವರ ಶಾಂತಿ, ಅಹಿಂಸೆ ಮತ್ತು ಮಾನವೀಯ ಮೌಲ್ಯಗಳ ಉಪದೇಶಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು ಈ ಇಬ್ಬರು ಮಹನೀಯರ ತತ್ವಗಳನ್ನು ಒಗ್ಗೂಡಿಸಿ ಹೊಸ ತಲೆಮಾರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಈ ಪುತ್ತಳಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಂಘದವರು ತಿಳಿಸಿದ್ದಾರೆ.
ಸುಮಾರು 20 ಅಡಿ ಎತ್ತರದ ಡಾ. ಅಂಬೇಡ್ಕರ್ ಅವರ ಭವ್ಯ ಪ್ರತಿಮೆ ಇದೇ ತಿಂಗಳ 29ರಂದು ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ. ಸ್ಥಳೀಯರು ಈ ಯೋಜನೆಗೆ ಸಂತೋಷ ವ್ಯಕ್ತಪಡಿಸಿದ್ದು, ಸಮಾನತೆ, ಶಿಕ್ಷಣ ಮತ್ತು ಶಾಂತಿಯ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತುವ ಮಹತ್ವದ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನು ಓದಿದ್ದೀರಾ..? ದ್ವಿತೀಯ ಪಿಯುಸಿ ಫಲಿತಾಂಶ : ಕೋಲಾರ ವಿದ್ಯಾರ್ಥಿನಿ ಚಿರಂತನ ರಾಜ್ಯಕ್ಕೆ 4ನೇ ಸ್ಥಾನ
ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಸದಸ್ಯರು ಸಮಾನತೆ, ಶಿಕ್ಷಣ ಮತ್ತು ಶಾಂತಿಯ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತೋಣ ಎಂಬ ಸಂಕಲ್ಪವನ್ನು ವ್ಯಕ್ತಪಡಿಸಿದರು. ಗಾಂಧಿನಗರದ ಅಂಬೇಡ್ಕರ್ ವಿಚಾರವಂತರು, ಮುಖಂಡರು ಹಾಗೂ ಸ್ಥಳೀಯರು ಭಾಗಿಯಾಗಿದ್ದರು.
ಕೋಲಾರ | ಅಂಬೇಡ್ಕರ್ ಜಯಂತಿ ಸಂಭ್ರಮ; 20 ಅಡಿ ಎತ್ತರದ ಭವ್ಯ ಪುತ್ಥಳಿ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಪೋಸ್ಟ್ ಹಂಚಿಕೊಳ್ಳಿ:




