ಜೆಡಿಎಸ್ ಮುಖಂಡ ಹೂಡಿ ವಿಜಿಕುಮಾರ್ ಅವರ ನೇತೃತ್ವದಲ್ಲಿ ಮಾಲೂರು ತಾಲೂಕಿನ ಎಲ್ಲಾ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್‌ಗಳನ್ನು ವಿತರಿಸುವ ಯೋಜನೆಗೆ ಮಾಲೂರು ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹೂಡಿ ವಿಜಿಕುಮಾರ್, ತಾಲೂಕಿನ ಪ್ರಾಂಶುಪಾಲರು ಹಾಗೂ ಮುಖ್ಯೋಪಾಧ್ಯಾಯರು ವಿವಿಧ ದಾನಿಗಳ ಸಹಕಾರ ಪಡೆದು ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು ಹಿಂದಿನ ವರ್ಷ ವಿದ್ಯಾರ್ಥಿಗಳಿಗೆ ಪರೀಕ್ಷಾ ಕಿಟ್‌ಗಳನ್ನು ವಿತರಿಸಲಾಗಿತ್ತು. ಈ ಬಾರಿ ತಾಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಗುತ್ತಿದೆ. ಕಳೆದ ವರ್ಷ ತಾಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ.42 ಇದ್ದರೆ, ಈ ಬಾರಿ ಶೇ.77ಕ್ಕೆ ಏರಿಕೆಯಾಗಿದೆ. ಈ ಸಾಧನೆಗೆ ಕಾರಣರಾದ ಶಿಕ್ಷಕರು, ಪ್ರಾಂಶುಪಾಲರು, ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಸರ್ಕಾರದ ಅನುದಾನ ಎಲ್ಲ ಅಗತ್ಯಗಳಿಗೆ ಸಾಕಾಗದ ಹಿನ್ನೆಲೆಯಲ್ಲಿ ದಾನಿಗಳ ನೆರವಿನಿಂದ ಶಾಲೆಗಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕಾಲೇಜು ಹಾಗೂ ಶಾಲೆಗಳಿಗೆ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ತಿಳಿಸಿದರೆ ಅವುಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು. ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಉನ್ನತ ಸ್ಥಾನಗಳನ್ನು ಅಲಂಕರಿಸಬೇಕು ಎಂದು ಕರೆ ನೀಡಿದರು.
ಜೆಡಿಎಸ್ ಮುಖಂಡ ಆರ್. ಪ್ರಭಾಕರ್ ಗೌಡ ಮಾತನಾಡಿ, ತಾಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡುತ್ತಿರುವುದು ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಲಿದೆ. ಪೋಷಕರು ಕಷ್ಟಪಟ್ಟು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಮಾದರಿ ಪ್ರಜೆಗಳಾಗಿ, ತಮ್ಮ ಕುಟುಂಬ ಹಾಗೂ ತಾಲೂಕಿನ ಹೆಮ್ಮೆ ಹೆಚ್ಚಿಸಬೇಕು ಎಂದು ಹೇಳಿದರು.
ಪ್ರಾಂಶುಪಾಲೆ ಚಂದ್ರಿಕಾ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವಾಗುವ ಉದ್ದೇಶದಿಂದ ಬ್ಯಾಗ್‌ಗಳನ್ನು ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳು ಈ ಸೌಲಭ್ಯದ ಸದ್ಬಳಕೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಸಾಧಿಸಬೇಕು ಎಂದು ಆಶಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಎಸ್‌ಐಆರ್ ಅವಾಂತರ: ಇಷ್ಟು ವರ್ಷ ಮತ ಚಲಾಯಿಸಿದ್ದರೂ ಕೆಲವರ ಹೆಸರು ಗಾಯಬ್…?
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ರಾಮಕೃಷ್ಣಪ್ಪ, ಮುಖಂಡರಾದ ಮೈಲಾಂಡಹಳ್ಳಿ ನಾರಾಯಣಸ್ವಾಮಿ ಸೇರಿದಂತೆ ಜೆಡಿಎಸ್ ಮುಖಂಡರು ಕಾರ್ಯಕರ್ತರು ಇದ್ದರು.




