ದೇವದುರ್ಗ ತಾಲೂಕಿನ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್‌ಎಲ್) ನಾರಾಯಣಪುರ ಬಲದಂಡೆ ಕಾಲುವೆ ವಿಭಾಗ-6ರ ಚಿಕ್ಕಹೊನ್ನಕುಣಿ ಕಚೇರಿಯನ್ನು ರಾಯಚೂರಿಗೆ ಸ್ಥಳಾಂತರಿಸಿರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಸೆ.28ರಂದು ಚಿಕ್ಕಹೊನ್ನಕುಣಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಹೊನ್ನಕುಣಿ ಕಚೇರಿಯನ್ನು ರಾಯಚೂರು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸುವುದರಿಂದ ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳ ರೈತರಿಗೆ ತೀವ್ರ ತೊಂದರೆಯಾಗಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದೇವದುರ್ಗದಿಂದ ರಾಯಚೂರಿಗೆ ಸುಮಾರು 60 ಕಿ.ಮೀ., ಯಾದಗಿರಿಯಿಂದ 60 ಕಿ.ಮೀ. ಹಾಗೂ ಕಲಬುರಗಿಯಿಂದ ಸುಮಾರು 115 ಕಿ.ಮೀ. ದೂರವಿದ್ದು, ಕಚೇರಿ ಸ್ಥಳಾಂತರವಾದರೆ ರೈತರು ಸಣ್ಣಪುಟ್ಟ ಕೆಲಸಗಳಿಗೂ ದೂರ ಪ್ರಯಾಣಿಸಬೇಕಾಗುತ್ತದೆ. ಈ ದೂರದ ಹಿನ್ನೆಲೆಯಲ್ಲಿ ಒಂದೇ ದಿನದಲ್ಲಿ ಕಚೇರಿ ಕೆಲಸ ಮುಗಿಸಿಕೊಂಡು ವಾಪಸ್ ಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು.
ದೇವದುರ್ಗ ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಪ್ರದೇಶಗಳಲ್ಲಿ ಒಂದಾಗಿದ್ದು, ಈ ಭಾಗದ ರೈತರಿಗೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಹಾಗೂ ನೀರಾವರಿ ಯೋಜನೆಗಳಿಂದ ಮುಳುಗಡೆಯಾದ ಮತ್ತು ತೊಂದರೆಗೊಳಗಾದ ಗ್ರಾಮಗಳ ಜನರಿಗೆ ಪುನರ್ವಸತಿ ಮತ್ತು ಪರಿಹಾರ ಒದಗಿಸುವ ಜವಾಬ್ದಾರಿ ಈ ಕಚೇರಿಯ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದರು.
ಈಗಾಗಲೇ ಎಸ್‌ಎಲ್‌ಓ ಕಚೇರಿ ಹಾಗೂ ಕಾರಾಗೃಹವನ್ನೂ ರಾಯಚೂರಿಗೆ ಸ್ಥಳಾಂತರಿಸಲಾಗಿದೆ. ಪ್ರಮುಖ ಸರ್ಕಾರಿ ಕಚೇರಿಗಳು ತಾಲೂಕು ಕೇಂದ್ರದಿಂದ ದೂರವಾಗುತ್ತಿರುವುದರಿಂದ ತಾಲೂಕಿನ ಅಭಿವೃದ್ಧಿ ಕಾಮಗಾರಿಗಳು, ಅನುದಾನಗಳ ಬಳಕೆ ಹಾಗೂ ವಿವಿಧ ಯೋಜನೆಗಳ ಅನುಷ್ಠಾನಕ್ಕೂ ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಅಪೌಷ್ಟಿಕತೆಯ ನೆರಳಲ್ಲಿ ಕಲ್ಯಾಣ ಕರ್ನಾಟಕ; ರಾಯಚೂರಿನ ಶೇ. 49.5 ಮಕ್ಕಳಲ್ಲಿ ಪೋಷಕಾಂಶದ ಕೊರತೆ
ಸರ್ಕಾರ ತಕ್ಷಣವೇ ಕಚೇರಿ ಸ್ಥಳಾಂತರ ಆದೇಶವನ್ನು ಹಿಂಪಡೆದು ರೈತರಿಗೆ ಅನುಕೂಲವಾಗುವಂತೆ ಯೋಜನೆಗಳು ಜಾರಿಗೆ ತರಬೇಕು. ಇಲ್ಲದಿದ್ದರೆ ರೈತರೊಂದಿಗೆ ಸೇರಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.




