ಕಾರ್ಖಾನೆಗಳನ್ನು ತೊಲಗಿಸಿ ಜನರ ಜೀವ ಉಳಿಸಿ, ರೈತರ ಕೃಷಿ ಜಮೀನು ಉಳಿಸಿ ಎಂಬ ಉದ್ದೇಶದೊಂದಿಗೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ಸಮಿತಿ ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದೆ. 250ನೇ ದಿನದ ಅಂಗವಾಗಿ ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಹಾಗೂ ಆಪ್ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕಷ್ಣ ರೆಡ್ಡಿ ಮಾತನಾಡಿ, “ಭಾರತದ ಇತಿಹಾಸದಲ್ಲಿಯೇ ಬಹಳ ಕೆಟ್ಟ ದಿನಗಳಲ್ಲಿ ನಾವು ಬದುಕುತ್ತಿದ್ದೇವೆ. ಭಾರತದ ಸಂವಿಧಾನ ಕೊಟ್ಟ ಹಕ್ಕುಗಳಿಂದಲೇ ನಾವು ಈಗ ಜಾತಿ, ಮತ, ಪಂತ ಮರೆತು ಒಟ್ಟಿಗೆ ಜೀವನ ನಡೆಸುತ್ತಿದ್ದೇವೆ. ಕಾರ್ಖಾನೆಗಳ ತ್ಯಾಜ್ಯದಿಂದ ಈಗ ಜನ ಜಾನುವಾರು ಮಾತ್ರವಲ್ಲದೇ, ಸಸ್ಯ ಸಂಕುಲದ ಮೇಲೆಯೂ ಪರಿಣಾಮ ಬೀರುತ್ತಿದೆ” ಎಂದರು.
“ಮಾವು, ಪೇರು ಹಣ್ಣುಗಳು ಈಗ ಎರಡ್ಮೂರು ದಿನಕ್ಕೆ ಕೊಳೆತು ಹೋಗುತ್ತಿವೆ. ಕಾರ್ಖಾನೆಗಳ ವಿಷಯುಕ್ತ ನೀರು, ಗಾಳಿ ನಾವು ಸೇವಿಸುವ ಹಣ್ಣು, ತರಕಾರಿಗಳಲ್ಲಿ ಸೇರುತ್ತಿದ್ದು, ಆ ವಿಷಾಹಾರ ತಿಂದು ಜನರ ಆರೋಗ್ಯ ಹಾಳಾಗುತ್ತಿದೆ. ನಮ್ಮನ್ನಾಳುವ ರಾಜಕಾರಣಿಗಳು ರೆಸಾರ್ಟ್‌ಗಳಿಗೆ ಹೋಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನೈಸರ್ಗಿಕ ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರಿಗೆಲ್ಲಾ ಈ ವಿಷ ನಾಟುವುದಿಲ್ಲ” ಎಂದು ಹೇಳಿದರು.
ಬುಲ್ಡೋಟಾ ಅಭಿಯಾನದ ಕುರಿತು ಮಾತನಾಡಿ, “ಅಡೆತಡೆಗಳನ್ನು ದಾಟಿಕೊಂಡು 250 ದಿನಗಳವರೆಗೆ ಕ್ವಿಟ್ ಬಲ್ಡೋಟಾ ಹೋರಾಟವನ್ನು ಜೀವಂತವಾಗಿ ಇಡುವುದು ಸಣ್ಣ ವಿಷಯವಲ್ಲ” ಎಂದು ಹೋರಾಟಗಾರರ ಬದ್ಧತೆಯನ್ನು ಶ್ಲಾಘಿಸಿದರು.
ಮನವಿ ಸ್ವೀಕರಿಸಲು ಬಂದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಹೋರಾಟಗಾರರು ತರಾಟೆಗೆ ತೆಗೆದುಕೊಂಡರು. “ಕಾರ್ಖಾನೆಗಳಿಂದ ರೈತರ ಕೃಷಿ ಭೂಮಿಯ ಗುಣಮಟ್ಟ ಹಾಳಾಗಿದೆ. ಭೂಸ್ವಾಧೀನ ಸಂತ್ರಸ್ತರಿಗೆ ಎಷ್ಟು ಪರಿಹಾರ ಕೊಟ್ಟಿದ್ದೀರಿ? ಬೆಳೆಹಾನಿಗೆ ಎಷ್ಟು ಧನಸಹಾಯ ಕೊಟ್ಟಿದ್ದೀರಿ? ಲಕ್ಕ ಕೊಡಿ” ಎಂದು ತರಾಟೆಗೆ ತೆಗೆದುಕೊಂಡರು.
ರೈತ ಮುಖಂಡರ ಆಕ್ರೋಶಕ್ಕೆ ತಬ್ಬಿಬ್ಬಾದ ಕೃಷಿ ಇಲಾಖೆ ಅಧಿಕಾರಿ, ಮೇಲಧಿಕಾರಿಗಳಿಗೆ ನಿಮ್ಮ ಮನವಿ ತಲುಪಿಸುವುದಾಗಿ ತಿಳಿಸಿದರು. ಜುಲೈ 11ರೊಳಗೆ ದಾಖಲೆ ಸಮೇತ ಉತ್ತರ ಕೊಡದಿದ್ದರೆ ಪರಿಣಾಮ ಎದುರಿಸಬೇಕಾದೀತು ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.
ಜಂಟಿ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರ ಹಾಗೂ ಸಂಚಾಲಕರಾದ ಮಲ್ಲಿಕಾರ್ಜುನ ಗೋನಾಳ್, ಕೊಪ್ಪಳ ಜಿಲ್ಲಾ ರೈತ ಸಂಘದ ಅಧ್ಯಕ್ಷ ಭೀಮಸೇನ ಕಲ್ಕೇರಿ ಸೇರಿದಂತೆ ಹಲವರು ಇದ್ದರು.




