‘ಬಿಡದಿಯಲ್ಲಿ ನಡೆಯುತ್ತಿರುವ ರೈತರ ಭೂ ಸ್ವಾಧೀನ ವಿರೋಧಿ ಹೋರಾಟವನ್ನು ಬೆಂಬಲಿಸುವುದಕ್ಕಾಗಿ ರೈತ ಸಂಘಟನೆಗಳ ಸಾಮೂಹಿಕ ನಾಯಕತ್ವದೊಂದಿಗೆ ಜುಲೈ 11ರಂದು ‘ಬಿಡದಿ ಚಲೋ’ ಚಳವಳಿ ಹಮ್ಮಿಕೊಳ್ಳಲಾಗಿದೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೆ ಟಿ ಗಂಗಾಧರ್ ತಿಳಿಸಿದರು.
ಶಿವಮೊಗ್ಗ ನಗರದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ಅಭಿವೃದ್ಧಿ ಹೆಸರಲ್ಲಿ ರಾಜ್ಯ ಸರ್ಕಾರ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿರುವುದು ಖಂಡನೀಯ. ‘ರಾಜ್ಯ ರೈತ ಸಂಘʼವು ಅಭಿವೃದ್ಧಿಯ ವಿರೋಧಿಯಲ್ಲ. ಆದರೆ, ರಿಯಲ್ ಎಸ್ಟೇಟ್‌ನಂತಹ ದಂಧೆಗಾಗಿ ಬಿಡದಿಯಲ್ಲಿ 7,418 ಎಕರೆ ಮತ್ತು ಸರ್ಜಾಪುರ ಹೋಬಳಿ ಜಂಗಮನಕಟ್ಟೆಯಲ್ಲಿ 1,800 ಎಕರೆ ಕೃಷಿ ಭೂಮಿಯ ಸ್ವಾಧೀನ ಪ್ರಕ್ರಿಯೆಯನ್ನು ಖಂಡಿಸುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ತುಂಗಾ ಏತ ನೀರಾವರಿ ಸ್ಥಗಿತ: ಬಾಕಿ ವಿದ್ಯುತ್ ಬಿಲ್ ಪಾವತಿಸುವಂತೆ ಸರ್ಕಾರಕ್ಕೆ ರೈತ ಸಂಘ ಒತ್ತಾಯ
“ಪ್ರತಿ ವರ್ಷ ಜುಲೈ 21ನ್ನು ನರಗುಂದ-ನವಲಗುಂದ ರೈತರ ಬಂಡಾಯದ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ಅದನ್ನು ಭೂ-ಸ್ವಾಧೀನ ಪ್ರಕ್ರಿಯೆ ವಿರೋಧಿ ದಿನವಾಗಿ ಆಚರಿಸಲಾಗುವುದು” ಎಂದು ತಿಳಿಸಿದ ಅವರು, ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಮನವಿ ಮಾಡಿದರು.
ರೈತ ಮುಖಂಡರಾದ ಯಶವಂತ್ ರಾವ್ ಘೋರ್ಪಡೆ, ಸೀನಪ್ಪ, ಮಂಜುನಾಥ್, ಮಂಜುನಾಥೇಶ್ವರ್ ಇದ್ದರು.





