ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆ ನೆಲೆಸಬೇಕಾದರೆ ಸಂವಿಧಾನದಲ್ಲಿರುವ ಸ್ವಾತಂತ್ರ್ಯ, ಸಮಾನತೆ, ನ್ಯಾಯ ಹಾಗೂ ಭ್ರಾತೃತ್ವದ ಮೌಲ್ಯಗಳನ್ನು ಬದುಕಿಗೆ ಅಳವಡಿಸಿಕೊಳ್ಳಬೇಕು ಎಂದು ಜಾನಪದ ಅಕಾಡೆಮಿ ಸದಸ್ಯ ಡಾ. ಜೀವನಸಾಬ್ ವಾಲಿಕಾರ ಹೇಳಿದರು.
ಕುಕನೂರು ತಾಲ್ಲೂಕಿನ ಕಕ್ಕಿಹಳ್ಳಿ ಗ್ರಾಮದ ಸಾರ್ವಜನಿಕ ಗ್ರಂಥಾಲಯದ ಸಭಾಂಗಣದಲ್ಲಿ ಬಳಗೇರಿ ಗ್ರಾಮ ಪಂಚಾಯತ್, ಎಐಡಿವೈಓ (AIDYO) ಕೊಪ್ಪಳ ಹಾಗೂ ಸಂವಿಧಾನ ಸಂರಕ್ಷಣಾ ವೇದಿಕೆ, ಕಕ್ಕಿಹಳ್ಳಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ‘ಸಾಂವಿಧಾನಿಕ ಮೌಲ್ಯಗಳ ಅನುಷ್ಠಾನ ಮತ್ತು ಭ್ರಾತೃತ್ವ’ ಕುರಿತ ಯುವಜನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಬುದ್ಧ, ಬಸವಣ್ಣ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಭಾರತದ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ವಾಚಿಸಲಾಯಿತು. ಬಳಿಕ ಗಣ್ಯರು ಸೇರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಉಪನ್ಯಾಸ ನೀಡಿದ ಅವರು, ಹಾಡು, ನುಡಿಗಟ್ಟು ಹಾಗೂ ಜನಪದ ಉದಾಹರಣೆಗಳ ಮೂಲಕ ಸಂವಿಧಾನದ ಮೌಲ್ಯಗಳನ್ನು ಸರಳವಾಗಿ ಹಾಗೂ ಮನಮುಟ್ಟುವ ರೀತಿಯಲ್ಲಿ ವಿವರಿಸಿದರು. “ಭಿನ್ನತೆಗಳ ನಡುವೆ ಭ್ರಾತೃತ್ವ, ಪರಸ್ಪರ ಗೌರವ ಮತ್ತು ಸಹಿಷ್ಣುತೆಯ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸೌಹಾರ್ದಯುತ ಸಮಾಜ ನಿರ್ಮಾಣ ಸಾಧ್ಯ” ಎಂದು ಹೇಳಿದರು.
ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂವಿಧಾನ ಸಂರಕ್ಷಣಾ ವೇದಿಕೆಯ ಸಂಚಾಲಕ ಭೀಮಾಶಂಕರ್ ಪಾಣೇಗಾಂವ್, “ಜಾತಿ, ಧರ್ಮ, ಪ್ರಾಂತ್ಯ, ಭಾಷೆ ಹಾಗೂ ಲಿಂಗ ಆಧಾರಿತ ತಾರತಮ್ಯಗಳನ್ನು ತೊರೆದು ಭ್ರಾತೃತ್ವದ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.
“ಪ್ರತಿಯೊಬ್ಬ ನಾಗರಿಕರೂ ಭಾರತದ ಸಂವಿಧಾನವನ್ನು ಓದಿ, ಅದರ ಆಶಯಗಳನ್ನು ಅರ್ಥೈಸಿಕೊಂಡು, ಸಂವಿಧಾನದ ಮೂಲ ತತ್ವಗಳನ್ನು ತಮ್ಮ ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕು. ಸಂವಿಧಾನದ ಆಶಯಗಳು ಕೇವಲ ಪುಸ್ತಕದಲ್ಲೇ ಉಳಿಯದೆ ನಮ್ಮ ದೈನಂದಿನ ಬದುಕಿನ ಭಾಗವಾಗಬೇಕು” ಎಂದು ಕರೆಕೊಟ್ಟರು.
“ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಮೌಲ್ಯಗಳನ್ನು ಅನುಷ್ಠಾನಗೊಳಿಸಲು ಪ್ರತಿಯೊಬ್ಬರೂ ಬದ್ಧರಾಗಬೇಕು. ಸಮಾಜದಲ್ಲಿರುವ ಅಸಮಾನತೆ, ಅನ್ಯಾಯ ಮತ್ತು ತಾರತಮ್ಯಗಳನ್ನು ನಿವಾರಿಸಿ, ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಯುವಜನರು ಮುಂಚೂಣಿಯಲ್ಲಿ ನಿಲ್ಲುವ ಸಂಕಲ್ಪ ಮಾಡಬೇಕು” ಎಂದು ಹೇಳಿದರು.
ಸಂವಿಧಾನ ಚಿಂತಕ ಧರ್ಮರಾಜ್ ಗೋನಾಳ ಮಾತನಾಡಿ, “ಸಂವಿಧಾನದಲ್ಲಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಆಶಯಗಳನ್ನು ಯುವಜನರು ಅರ್ಥಮಾಡಿಕೊಂಡು ಸಮಾಜದಲ್ಲಿ ಅನುಷ್ಠಾನಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ” ಎಂದರು.
ಸಾಮಾಜಿಕ ಹೋರಾಟಗಾರ ಸುರೇಶ್ ಬಳೂಟಗಿ ಮಾತನಾಡಿ, “ಗ್ರಾಮೀಣ ಪ್ರದೇಶಗಳಲ್ಲಿ ಸಂವಿಧಾನದ ಆಶಯಗಳು ಮತ್ತು ಸಾಂವಿಧಾನಿಕ ಮೌಲ್ಯಗಳ ಕುರಿತು ನಿರಂತರ ಜಾಗೃತಿ ಮೂಡಿಸುವ ಮೂಲಕ ಸಾಮಾಜಿಕ ಸಾಮರಸ್ಯ, ವೈಜ್ಞಾನಿಕ ಮನೋಭಾವ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಲಪಡಿಸಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮೇಘರಾಜ್ ಬಳಗೇರಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಯಮನೂರಪ್ಪ ಕಟ್ಟಿಮನಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿರುಪಾಕ್ಷಯ್ಯ ಕುರ್ತಕೋಟಿ, ಎಸ್‌ಡಿಎಂಸಿ ಅಧ್ಯಕ್ಷ ಯಮನೂರಪ್ಪ ಆರ್. ಭಾನಾಪುರ, ಪತ್ರಕರ್ತ ಚಂದ್ರು ಆರ್. ಭಾನಾಪುರ, ಶಶಿಕುಮಾರ ಬಳಿಗೇರಿ, ಹಂಪಣ್ಣ ಕಟ್ಟಿಮನಿ , ಮಹಾದೇವಪ್ಪ ಹಿರೇಮನಿ, ಬಾಲಚಂದ್ರ ವೈ.ಟಿ., ಶಿವು ಬಳಗೇರಿ, ಜ್ಯೋತಿ ಎಂ. ಕಾರಭಾರಿ, ಗ್ರಂಥಪಾಲಕಿ ಗವಿಸಿದ್ದಮ್ಮ ಗೌಡ್ರ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.




