ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯ ಆಂಜನೇಯ ದೇವಸ್ಥಾನದಲ್ಲಿ ಇಂದು ಇದ್ದಕ್ಕಿದ್ದಂತೆ ಯಾತ್ರಿಕರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಜನದಟ್ಟಣೆ ನಿರ್ವಹಿಸುವಲ್ಲಿ ಅಲ್ಲಿಯ ಸಿಬ್ಬಂದಿ ಹೈರಾಣಾದ ಘಟನೆ ಜರುಗಿದೆ.
ಇದು ಶ್ರಾವಣದ ಮಾಸದ ಮೊದಲ ಶನಿವಾರ. ಅಲ್ಲದೆ ಇಂದು ಹನುಮಪ್ಪನ ವಾರ, ಆಗಸ್ಟ್ 15 ಹಾಗೂ ರಜೆ ಎಂಬ ಇತ್ಯಾದಿ ಕಾರಣದಿಂದಾಗಿ ದೇಗುಲಕ್ಕೆ ದೊಡ್ಡ ಪ್ರಮಾಣದಲ್ಲಿ ಯಾತ್ರಿಕರು ಭೇಟಿ ನೀಡಿದ್ದರು. ಇದರಿಂದಾಗಿ ಬೆಳಿಗ್ಗೆಯಿಂದ ಸಂಜೆಯವರೆಗೆ ದಟ್ಟಣೆ ನಿರ್ಮಾಣವಾಗಿತ್ತು.
ವಾಸನ ಸವಾರರು ಪಾರ್ಕಿಂಗ್ ವ್ಯವಸ್ಥೆಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಹುಲಿಗಿ-ಆನೆಗೊಂದಿ ಮಾರ್ಗದಲ್ಲಿ ಗಂಟೆಗಳ ಕಾಲ ವಾಹನ ದಟ್ಟಣೆ ಉಂಟಾಗಿತ್ತು. ಬಳಿಕ ಗ್ರಾಮೀಣ ಪೊಲೀಸರು ಆಗಮಿಸಿ ವಾಹನ ಸಂಚಾರ ಸುಗಮಗೊಳಿಸಿದರು.
“ಶ್ರಾವಣ ಶನಿವಾರವಾಗಿದ್ದರಿಂದ ಕೊಪ್ಪಳ ಸೇರಿದಂತೆ ನೆರೆ – ಹೊರೆಯ ಜಿಲ್ಲೆಯಿಂದ ಸುಮಾರು 40 ಸಾವಿರಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಭಕ್ತರ ದಟ್ಟಣೆಯಿಂದಾಗಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಿಗ್ಗೆ 7ರಿಂದ ಸಂಜೆ 6ರವರೆಗೂ ಬೆಟ್ಟ ಹತ್ತುವ ಮಾರ್ಗದಲ್ಲಿ ದಟ್ಟಣೆ ನಿರ್ಮಾಣವಾಗಿತ್ತು. ಹೊಸಪೇಟೆಯ ಭಕ್ತರೊಬ್ಬರು ಒಂದೂವರೆ ಕ್ವಿಂಟಲ್ ಅಕ್ಕಿ, 60 ಕೆಜಿ ಗೋಧಿ ನುಚ್ಚು, 25 ಕೆಜಿ ಬೆಲ್ಲ, 25 ಕೆಜಿ ತೊಗರಿ ಬೇಳೆ, ತರಕಾರಿ ನೀಡಿದ್ದರು” ಎಂದು ದೇಗುಲದ ಸಿಬ್ಬಂದಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ನೀರಾವರಿ ಕಾಲುವೆ ಸ್ವಚ್ಛಗೊಳಿಸಿ ಕೊನೆಭಾಗದವರೆಗೆ ನೀರು ಹರಿಸಿ: ವಿರುಪಾಕ್ಷಯ್ಯ ಪ. ಹಿರೇಮಠ
ಉಳಿದ ಆಹಾರ ಪದಾರ್ಥಗಳನ್ನು ದೇಗುಲದ ಸಮಿತಿಯಿಂದ ಹಾಕಿ ಅಡುಗೆ ಮಾಡಲಾಗಿತ್ತು. ದೇಗುಲಕ್ಕೆ ಬಂದವರಿಗೆ ಎರಡು ಕ್ವಿಂಟಲ್ ಬಿಸಿಬೇಳೆ ಬಾತ್, ಗೋಧಿಹುಗ್ಗಿಯನ್ನು ಪ್ರಸಾದದ ರೂಪದಲ್ಲಿ ನೀಡಲಾಯಿತು. ಬೆಳಿಗ್ಗೆ 9ಕ್ಕೆ ಆರಂಭವಾದ ಪ್ರಸಾದ ವಿತರಣೆ ಸಂಜೆ 4ರವರೆಗೂ ನಡೆಯಿತು ಎನ್ನಲಾಗಿದೆ.




