ಕೃಷಿರಂಗ | ಕೃಷಿ ಪದವೀಧರರ ನ್ಯಾಯಯುತ ಹೋರಾಟಕ್ಕೆ ಸರ್ಕಾರ ಸ್ಪಂದಿಸಲಿ

Date:

ಹೋರಾಟಗಾರರು ಸರ್ಕಾರದ ಮೇಲೆ ಭರವಸೆಯನ್ನಿಟ್ಟುಕೊಂಡಿದ್ದಾರೆ. ಅರ್ಹರಿಗೆ ಆದಷ್ಟು ಬೇಗ ಉದ್ಯೋಗ ದೊರಕಲಿ. ಅವರು ರೈತ ಸಮುದಾಯದ ಪರವಾಗಿ ಕಾಯಾ ವಾಚಾ ಮನಸಾ ದುಡಿದು ನಾಡಿಗೆ ಒಳಿತು ಮಾಡಲಿ ಎಂದು ಹರಸೋಣ. ಅನ್ನ ನೀಡುವ ರೈತ ಸಮುದಾಯ ಮತ್ತು ಅವರಿಗೆ ಮಾರ್ಗದರ್ಶನ ನೀಡುವ ಕೃಷಿ ಅಧಿಕಾರಿಗಳು ನಾಡಿನ ಜೀವನಾಡಿಗಳು. ಹಸಿರು ಕ್ರಾಂತಿಯು ಚಿರಾಯುವಾಗಲಿ.

ರಾಜ್ಯದ ಆರು ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳ ಪದವೀಧರರು ಮತ್ತು ವಿದ್ಯಾರ್ಥಿಗಳು ಇತ್ತೀಚೆಗೆ ಮುಷ್ಕರ ಹೂಡಿದ್ದರು. ತಮ್ಮ ತಮ್ಮ ವಿವಿಗಳಲ್ಲಿ ಸುಮಾರು 24 ದಿನಗಳ ಕಾಲ ತರಗತಿಗಳನ್ನು ಬಹಿಷ್ಕರಿಸಿ ರಾಜ್ಯದ ಗಮನ ಸೆಳೆದರು. ರೈತ ಸಂಘಟನೆ, ದಲಿತ ಸಂಘಟನೆ, ಕಾರ್ಮಿಕ ಸಂಘಟನೆ ಮತ್ತು ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದವರೆಗೆ ಸಾವಿರಾರು ವಿದ್ಯಾರ್ಥಿಗಳು ಆಗಸ್ಟ್ 6ರಂದು ಹರಿದು ಬಂದರು. ‘ಕೃಷಿ ಶಿಕ್ಷಣದ ಅಸ್ತಿತ್ವಕ್ಕಾಗಿ-ಅರ್ಹ ಪದವೀಧರರ ಭವಿಷ್ಯಕ್ಕಾಗಿ-ರೈತರ ಹಿತರಕ್ಷಣೆಗಾಗಿ’ ಎಂಬುದು ಅವರ ಹೋರಾಟದ ಘೋಷವಾಕ್ಯವಾಗಿತ್ತು. ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳ ಪದವೀಧರರನ್ನು ಮಾತ್ರ ಪರಿಗಣಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿತ್ತು.

- Advertisement -
Agri strike 2

ಬೆಂಗಳೂರಿನ ಹೆಬ್ಬಾಳದಲ್ಲಿ 1913ರಲ್ಲಿ ಆರಂಭವಾದ ಕೃಷಿ ಶಾಲೆಯು 1946ರಲ್ಲಿ ಕೃಷಿ ಕಾಲೇಜಾಗಿ 1965ರಲ್ಲಿ ಕೃಷಿ ವಿಶ್ವವಿದ್ಯಾಲಯವಾಗಿ ಮಾರ್ಪಾಡಾಯಿತು. ಅತ್ತ ಮುಂಬೈ ಪ್ರಾಂತ್ಯದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಮೇ, 1947ರಲ್ಲಿ ಧಾರವಾಡದಲ್ಲಿ ಆರಂಭವಾದ ಕೃಷಿ ಕಾಲೇಜು 1965ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾಗಿ 1986ರಲ್ಲಿ ಪ್ರತ್ಯೇಕ ಕೃಷಿ ವಿಶ್ವವಿದ್ಯಾಲಯವಾಯಿತು. ಈ ಎರಡು ವಿಶ್ವವಿದ್ಯಾಲಯಗಳಿಂದ ಟಿಸಿಲೊಡೆದು ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ (2008), ರಾಯಚೂರಿನಲ್ಲಿ ಕೃಷಿ ವಿಶ್ವವಿದ್ಯಾಲಯ (2009), ಶಿವಮೊಗ್ಗದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ (2012) ಮತ್ತು ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ (2025) ಗಳಾದವು. ಇವೆಲ್ಲವುಗಳ ಜೊತೆಗೆ, ಬೀದರಿನಲ್ಲಿ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು 2005ರಲ್ಲಿ ಜನ್ಮ ತಾಳಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬರ: ಪರಿಹಾರ ಮತ್ತು ಪರ್ಯಾಯ ಮಾರ್ಗಗಳತ್ತ ಒಂದು ನೋಟ

ಬರ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಹಾರಾಷ್ಟ್ರವು ಮಾದರಿ ಕಾರ್ಯಾಚರಣೆ ಕೈಗೊಂಡಿದೆ. ಮತ್ತು ಅದರಲ್ಲಿ ಅದು ಬಹುಪಾಲು ಯಶಸ್ಸನ್ನೂ ಸಾಧಿಸಿದೆ. ಬೃಹತ್ ನೀರಾವರಿ ಯೋಜನೆಗಳಿಗೆ ಕೊಡುವ ಆದ್ಯತೆ ಮತ್ತು ಮಹತ್ವವನ್ನು ಸಣ್ಣ ನೀರಾವರಿ ಯೋಜನೆಗಳಿಗೂ ನೀಡಬೇಕೆನ್ನುವುದೇ...

ಹಮ್ ಔರತೇಂ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

ಅಂದಿನ ಉತ್ತರ ಪ್ರದೇಶ ರಾಜ್ಯದಲ್ಲಿದ್ದ ಇಂದಿನ ಉತ್ತರಾಕಾಂಡ ರಾಜ್ಯದಲ್ಲಿರುವ ಪಂತನಗರದಲ್ಲಿ 1960ರಲ್ಲಿ ದೇಶದ ಮೊಟ್ಟಮೊದಲ ಕೃಷಿ ವಿಶ್ವವಿದ್ಯಾಲಯವು ಸ್ಥಾಪನೆಯಾಯಿತು. ಅಲ್ಲಿ ನಡೆದ ಒಂದು ಘಟನೆಯು ಎಲ್ಲರನ್ನೂ ಎಲ್ಲಾ ಕಾಲಕ್ಕೂ ಕಾಡುವಂತದ್ದು. ಅಲ್ಲಿಯ ಕೃಷಿ ಕಾರ್ಮಿಕರು ತಮಗೆ ಸೂಕ್ತ ಸಂಬಳಕ್ಕಾಗಿ ಹಾಗೂ ಖಾಯಂಯಾತಿಗಾಗಿ 1978ರಲ್ಲಿ ಮುಷ್ಕರ ಹೂಡಿದರು. ಅವರನ್ನು ಹತ್ತಿಕ್ಕಲು ಗೋಲಿಬಾರ್ ಮಾಡಿದಾಗ 13 ಕೃಷಿ ಕಾರ್ಮಿಕರು ಸತ್ತರು. ಕರ್ನಾಟಕದ ದಲಿತ ಚಳವಳಿಯ ಕೋಟಿಗಾನಹಳ್ಳಿ ರಾಮಯ್ಯನವರು ‘ಬರುತಿಹೆವು ನಾವು ಬರುತಿಹೆವು’ ಎಂಬ ಹೋರಾಟದ ಹಾಡು ರಚಿಸಿದಾಗ ಅದರಲ್ಲಿ ‘ಪಂತನಗರದಲಿ ಕೂಲಿ ಜನಗಳ ಬಸಿದ ನೆತ್ತರ ಬಾಂಬುಗಳಾಗಿ ಬೆಳೆದು ಬಂದಿಹ ಧೀರರು, ಬರುತಿಹೆವು ನಾವು ಬರುತಿಹೆವು’ ಎಂದು ಬರೆದರು. ಅದು ದಲಿತ ಚಳವಳಿಯ ಹೃದಯಸ್ಪರ್ಶಿ ಹಾಡಾಯಿತು.

ಕೃಷಿ ಶಿಕ್ಷಣ ಮತ್ತು ಕೃಷಿ ಸಂಶೋಧನೆಯ ಪ್ರಥಮ ಹೆಜ್ಜೆಗಳು


ದೇಶದ ಕೃಷಿ ಶಿಕ್ಷಣ ಮತ್ತು ಕೃಷಿ ಸಂಶೋಧನೆಗೊಂದು ದೀರ್ಘವಾದ ಇತಿಹಾಸವಿದೆ. ಬಿಹಾರದ ಪೂಸಾ (PUSಂ)ದಲ್ಲಿ 1905ರಲ್ಲಿ ಕೃಷಿ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಆ ಸ್ಥಳದಲ್ಲಿ 1934ರಲ್ಲಿ ಭೂಕಂಪವಾಗಿದ್ದರಿಂದ ಸಂಸ್ಥೆಯನ್ನು 1936ರಲ್ಲಿ ದೆಹಲಿಗೆ ವರ್ಗಾಯಿಸಲಾಯಿತು. ಅದು ‘ಇಂಡಿಯನ್ ಅಗ್ರಿಕಲ್ಚರಲ್ ರೀಸರ್ಚ್ ಇನ್‍ಸ್ಟಿಟ್ಯೂಟ್ ಆಗಿ ದೆಹಲಿಯ ಪೂಸಾದಲ್ಲಿ ನೆಲೆ ನಿಂತಿತು. ಬಿಹಾರ ಮತ್ತು ದೆಹಲಿ ಎರಡೂ ಕಡೆ ಪೂಸಾ ಎಂಬ ಹೆಸರು ಬರಲು ಕಾರಣವೇನೆಂದರೆ, ಅಮೆರಿಕಾದ ಹೆನ್ರಿ ಫಿಲಿಪ್ಸ್ ಎಂಬ ಕೊಡುಗೈ ದಾನಿಯ ನೆರವಿನಿಂದ ಮೊದಲಿಗೆ ಬಿಹಾರದಲ್ಲಿ ಕೃಷಿ ಸಂಶೋಧನಾ ಸಂಸ್ಥೆಯ ಸ್ಥಾಪನೆಯಾಯಿತು. ಫಿಲಿಪ್ಸ್‍ನಿಂದ ತೆಗೆದುಕೊಂಡ ಪಿ ಎಂಬ ಅಕ್ಷರ ಮತ್ತು ಅವರು ಅಮೆರಿಕ ದೇಶದವರಾದ್ದರಿಂದ ಯುಎಸ್‍ಎ ಎಂಬ ಅಕ್ಷರಗಳ ಜೋಡಣೆಯಿಂದ ಹುಟ್ಟಿಕೊಂಡ ಪೂಸಾ ಎಂಬ ಪದವೇ ಸ್ಥಳದ ಹೆಸರಾಯಿತು (P+USA = PUSA).. 1960 ಮತ್ತು 1970ರಲ್ಲಿ ನಡೆದ ಹಸಿರು ಕ್ರಾಂತಿಯಲ್ಲಿ ಪೂಸಾದ ಕೃಷಿ ಸಂಶೋಧನಾ ಸಂಸ್ಥೆ ಮತ್ತು ದೇಶದ ಹಲವು ರಾಜ್ಯಗಳ ಕೃಷಿ ವಿಶ್ವವಿದ್ಯಾಲಯಗಳ ಪಾತ್ರ ಅಗ್ರಗಣ್ಯವಾದದ್ದು.

ಮತ್ತೊಂದೆಡೆ ಕೃಷಿ ಶಿಕ್ಷಣ ಮತ್ತು ಕೃಷಿ ಸಂಶೋಧನೆಗಾಗಿ 1929ರಲ್ಲಿ ದೆಹಲಿಯಲ್ಲಿ ‘ಇಂಪೀರಿಯಲ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರೀಸರ್ಚ್’ ಅನ್ನು ಸ್ಥಾಪಿಸಲಾಯಿತು. ಅದನ್ನು 1946ರಲ್ಲಿ ‘ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರೀಸರ್ಚ್ (Indian Council of Agricultural Research : ICAR) DV ಎಂದು ಮರು ನಾಮಕರಣ ಮಾಡಲಾಯಿತು. ಅದೇ ಸಂಸ್ಥೆಯು ಇಂದಿಗೂ ದೇಶದ ಕೃಷಿ ಶಿಕ್ಷಣವನ್ನು ನಿಗ್ರಹಿಸುವ ಅತ್ಯುನ್ನತ ಸಂಸ್ಥೆಯಾಗಿದೆ. ಕೇಂದ್ರ ಹಾಗೂ ರಾಜ್ಯಗಳ ಕೃಷಿ ವಿಶ್ವವಿದ್ಯಾಲಯಗಳಿಗೆ ‘ಕ್ಯಾಚ್ ಅಪ್ ಗ್ರಾಂಟ್’ ಹೆಸರಿನಡಿ ಅಭಿವೃದ್ಧಿ ಅನುದಾನವನ್ನು ವಿತರಿಸುತ್ತಿದೆ. ಹಲವಾರು ಸಂಶೋಧನಾ ಪ್ರಾಯೋಜನೆ ಮತ್ತು ವಿಸ್ತರಣಾ ಕಾರ್ಯಗಳಿಗೆ ಅಪಾರ ಪ್ರಮಾಣದ ಅನುದಾನ ನೀಡುತ್ತಿದೆ. ಕೃಷಿ ವಿಜ್ಞಾನಗಳ ಬ್ಯಾಚುಲರ್, ಮಾಸ್ಟರ್ಸ್ ಮತ್ತು ಡಾಕ್ಟೊರಲ್ ಪದವಿಗಳ ಪಠ್ಯಕ್ರಮವನ್ನು ರಚನೆ ಮಾಡಿ ಕೊಡುತ್ತಿದೆ.

ಕೃಷಿ ಪದವೀಧರರು ಮತ್ತು ವಿದ್ಯಾರ್ಥಿಗಳ ಬೇಡಿಕೆಗಳು

Agri Strike 1

‘ಕೃಷಿ ಶಿಕ್ಷಣದ ಅಸ್ತಿತ್ವಕ್ಕಾಗಿ – ಅರ್ಹ ಪದವೀಧರರ ಭವಿಷ್ಯಕ್ಕಾಗಿ – ರೈತರ ಹಿತರಕ್ಷಣೆಗಾಗಿ’ ಎಂಬ ಘೋಷವಾಕ್ಯದಡಿ ಕೃಷಿ ಪದವೀಧರರು ಮತ್ತು ವಿದ್ಯಾರ್ಥಿಗಳ ಬೇಡಿಕೆಗಳು ಹೀಗಿವೆ: 1. ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳ ಒಟ್ಟು 945 ಹುದ್ದೆಗಳ ನೇಮಕಾತಿಗಾಗಿ ಹೊರಡಿಸಿದ ಪ್ರಕಟಣೆಗೆ ಬಿ.ಇ. (ಬಯೋಟೆಕ್ನಾಲಜಿ) ಹಾಗೂ ಬಿ.ಟೆಕ್. (ಬಯೋಟೆಕ್ನಾಲಜಿ) ಪದವೀಧರರನ್ನು ಪರಿಗಣಿಸಲು ಹೊರಡಿಸಿದ ಸೇರ್ಪಡೆ ಅಧಿಸೂಚನೆಯನ್ನು ರದ್ದು ಮಾಡುವುದು. ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ತಿದ್ದುಪಡಿ ತಂದು ಕೃಷಿ ವಿಜ್ಞಾನಗಳ ಪದವೀಧರರನ್ನು ಮಾತ್ರ ಅರ್ಹರನ್ನಾಗಿಸುವುದು.
2. ಐಸಿಎಆರ್‌ ಮಾನ್ಯತೆ ಪಡೆದ ಕೃಷಿ ವಿಶ್ವವಿದ್ಯಾಲಯಗಳ ಪದವೀಧರರಿಗೆ ಮಾತ್ರ ಕೃಷಿ ಇಲಾಖೆಯ ಹುದ್ದೆಗಳಿಗೆ ಅರ್ಹರನ್ನಾಗಿಸಲು ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ತಿದ್ದುಪಡಿ ಮಾಡುವುದು.
3. ಮಾನ್ಯತೆ ಪಡೆಯದ ಖಾಸಗಿ ಕೃಷಿ ಕಾಲೇಜುಗಳ ಸಂಯೋಜನೆಯನ್ನು ಸ್ಥಗಿತಗೊಳಿಸುವುದು.
4. ಡೇಸಿ ಕಾರ್ಯಕ್ರಮದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತನಿಖೆ ಮಾಡಿ ಪರಿಹರಿಸುವವರೆಗೆ ಡೇಸಿ ಎಂಬ ಕಾರ್ಯಕ್ರಮವನ್ನು ತಡೆಹಿಡಿಯುವುದು.

ಕೃಷಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟ

ಕೃಷಿ ವಿಶ್ವವಿದ್ಯಾಲಯಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವಿದೆ. ಪ್ರಾಯೋಗಿಕ ತರಬೇತಿಯಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು 1965ರಲ್ಲಿ ಆರಂಭವಾದಾಗ ಮರು ಶೈಕ್ಷಣಿಕ ವರ್ಷವಾದ 1966-67ರಿಂದ ತ್ರೈಮಾಸಿಕ ಶಿಕ್ಷಣ ಪದ್ದತಿ Trimester System of Education ಅನ್ನು ಅಳವಡಿಸಿಕೊಳ್ಳಲಾಯಿತು. ಅದು ಅಮೆರಿಕಾದ ಟೆನ್ನೆಸ್ಸಿ ವಿಶ್ವವಿದ್ಯಾಲಯದಿಂದ ಎರವಲು ಪಡೆದ ಶಿಕ್ಷಣ ಪದ್ದತಿಯಾಗಿತ್ತು. ಅದೊಂದು ಉತ್ತಮ ಶಿಕ್ಷಣ ಪದ್ದತಿ. ವಿದ್ಯಾರ್ಥಿಗಳನ್ನು ಸದಾ ಓದಿನೆಡೆಗೆ ಗಮನ ಹರಿಸುವಂತೆ ಮಾಡುತ್ತಿತ್ತು. ಕೃಷಿ ಶಿಕ್ಷಣದ ಜೊತೆಗೆ ಮಾನವಿಕ ವಿಜ್ಞಾನಗಳಾದ ಸಮಾಜ ಶಾಸ್ತ್ರ, ಅರ್ಥಶಾಸ್ತ್ರ, ಮನಃಶಾಸ್ತ್ರಗಳ ಪ್ರಾಥಮಿಕ ಪಾಠಗಳನ್ನು ಬೋಧಿಸಲಾಗುತ್ತಿತ್ತು. ಲೋಪದೋಷಗಳಿಲ್ಲದೆ ಅಂತಹ ಶಿಕ್ಷಣ ಪದ್ದತಿಯನ್ನು ಅಳವಡಿಸಿಕೊಳ್ಳಲು ಟೆನ್ನೆಸ್ಸಿ ವಿಶ್ವವಿದ್ಯಾಲಯದ ಶಿಕ್ಷಣ ತಜ್ಞರು ಬೆಂಗಳೂರಿನಲ್ಲಿದ್ದು ಮಾರ್ಗದರ್ಶನ ಮಾಡಿದ್ದಾರೆ. ಶಿಕ್ಷಕರ ಆಯ್ಕೆ ಸಮಿತಿಯ ಸದಸ್ಯರಾಗಿ ಉತ್ತಮರನ್ನು ಆಯ್ಕೆ ಮಾಡುತ್ತಿದ್ದುದನ್ನು ಆ ಕಾಲದ ಗುರುವೃಂದ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಅದೇ ಗುಣಮಟ್ಟದ ಶೈಕ್ಷಣಿಕ ಪರಂಪರೆ ಇಂದಿಗೂ ಚಾಲ್ತಿಯಲ್ಲಿದೆ.

‘ಲ್ಯಾಂಡ್ ಗ್ರಾಂಟ್’ ಪದ್ದತಿಯಂತೆ ಸ್ಥಾಪನೆಯಾದ ಕೃಷಿ ವಿಶ್ವವಿದ್ಯಾಲಯಗಳು

ಕೃಷಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅಮೆರಿಕ ಮಾದರಿಯ ‘ಲ್ಯಾಂಡ್ ಗ್ರಾಂಟ್’ ಪದ್ದತಿಯನ್ನು ಅಳವಡಿಸಿಕೊಳ್ಳಲಾಯಿತು. ಕಾಲೇಜುಗಳ ಸ್ಥಾಪನೆಗೆ, ಬೆಳೆಗಳ ಸಂಶೋಧನೆಗೆ, ಪ್ರಾಣಿಗಳ ಫಾರ್ಮ್‍ಗಳ ಸ್ಥಾಪನೆಗೆ ಹಾಗೂ ಪ್ರಾಯೋಗಿಕ ಚಟುವಟಿಕೆಗಳಿಗೆ ಸಾಕಷ್ಟು ಭೂಮಿಯನ್ನು ಮಂಜೂರು ಮಾಡಲಾಯಿತು. ಅದರಂತೆ, 1969ರಲ್ಲಿ ಬೆಂಗಳೂರಿನ ಜಿಕೆವಿಕೆಯಲ್ಲಿ 1300 ಎಕರೆಗಳ ಜಮೀನನ್ನು ನೀಡಲಾಯಿತು. ಅಂದಿನ ಪ್ರಧಾನ ಮಂತ್ರಿಗಳಾದ ಶ್ರೀಮತಿ ಇಂದಿರಾ ಗಾಂಧಿಯವರು ಜಿಕೆವಿಕೆಯ ಉದ್ಘಾಟನೆಗೆ ಆಗಮಿಸಿದ್ದರು. ಅಲ್ಲಿ 1975-76ರಿಂದ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಂಡವು. ಧಾರವಾಡ ಆವರಣ ಹಾಗೂ ಮತ್ತಿತರ ಆವರಣಗಳಲ್ಲಿ ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿವೆ. ಕಳೆದ ಎರಡು ವರ್ಷಗಳಿಂದ ಬೆಂಗಳೂರು ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯಗಳು ರಾಷ್ಟ್ರೀಯ ವಿದ್ಯಾಸಂಸ್ಥೆಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ (ನೋಡಿರಿ; https://eedina.com/special/national-ranking- list-2025-status-of-higher-education-institutions-in-the-state1015/2025-09-09/).

ಕೃಷಿ ವಿಜ್ಞಾನ ಪದವಿಗಳ ವ್ಯಾಸಂಗಕ್ಕೆ ರೈತ ಮಕ್ಕಳಿಗೆ ಮೀಸಲಾತಿ

ರಾಜ್ಯದ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳ ಪದವಿ ವ್ಯಾಸಂಗದ ಸೀಟುಗಳಲ್ಲಿ ಶೇ. 50ರಷ್ಟು ಸೀಟುಗಳನ್ನು ರೈತರ ಮಕ್ಕಳಿಗಾಗಿ ನೀಡಲಾಗುತ್ತಿದೆ. ಅಂತಹ ಅಭ್ಯರ್ಥಿಗಳಿಗೆ ಕೃಷಿಯ ಬಗ್ಗೆ ಸಾಮಾನ್ಯ ಜ್ಞಾನವಿರುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ ರ್ಯಾಂಕ್ ಆಧರಿಸಿ ಕೃಷಿ ವಿವಿಗಳ ಹಲವು ಪದವಿಗಳಿಗೆ ಪ್ರವೇಶವಿದೆ. ಕೃಷಿ ವಿಜ್ಞಾನ ಪದವಿಗಳ ಪಠ್ಯ ಕ್ರಮದಂತೆ ಕೃಷಿ ಸೂಕ್ಷ್ಮಜೀವಿ ಶಾಸ್ತ್ರ, ಕೃಷಿ ಕೀಟ ಶಾಸ್ತ್ರ, ಬೇಸಾಯ ಶಾಸ್ತ್ರ, ಜೇನು ಕೃಷಿ, ಪ್ರಾಣಿ ವಿಜ್ಞಾನ, ಬೆಳೆ ಶರೀರಶಾಸ್ತ್ರ, ಕೃಷಿ ಅರ್ಥಶಾಸ್ತ್ರ, ಕೃಷಿ ವಿಸ್ತರಣಾ ವಿಜ್ಞಾನ, ತೋಟಗಾರಿಕಾ ವಿಜ್ಞಾನ, ಸಸ್ಯ ರೋಗಶಾಸ್ತ್ರ, ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ, ಆಹಾರ ವಿಜ್ಞಾನ, ಕೃಷಿ ಇಂಜಿನಿಯರಿಂಗ್, ಕೃಷಿ ಅರಣ್ಯ ಶಾಸ್ತ್ರ, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ, ಜೆನೆಟಿಕ್ಸ್ ಮತ್ತು ಸಸ್ಯ ತಳಿಶಾಶ್ತ್ರ, ಕೃಷಿ ವ್ಯವಹಾರ ನಿರ್ವಹಣೆ ಮುಂತಾದ ವಿಷಯಗಳನ್ನು ಪರಿಣಾಮಕಾರಿಯಾಗಿ ಬೋಧಿಸಲಾಗುತ್ತಿದೆ. ಅನ್ಯ ಪದವಿಗಳ ಅಭ್ಯರ್ಥಿಗಳನ್ನು ಕೃಷಿ ಅಧಿಕಾರಿಗಳ ಹುದ್ದೆಗಳಿಗೆ ಅರ್ಹರನ್ನಾಗಿಸುವುದು ಎಳ್ಳಷ್ಟೂ ಸರಿಯಲ್ಲ.

ಕೃಷಿ ಪದವೀಧರರ ನ್ಯಾಯಯುತ ಹೋರಾಟಕ್ಕೆ ಸ್ಪಂದಿಸುತ್ತಿರುವ ಸರ್ಕಾರ

ಕೃಷಿ ಶಿಕ್ಷಣದ ಉತ್ತಮ ಪರಂಪರೆಗಾಗಿ, ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುವುದಕ್ಕಾಗಿ, ನಾಡಿನ ರೈತ ಸಮುದಾಯದ ಹಿತರಕ್ಷಣೆಗಾಗಿ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳ ಪದವೀಧರರು ಮತ್ತು ವಿದ್ಯಾರ್ಥಿಗಳು ಆರಂಭಿಸಿದ ಹೋರಾಟಕ್ಕೆ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಮತ್ತು ಸನ್ಮಾನ್ಯ ಗೃಹ ಸಚಿವರಾದ ಪ್ರಿಯಾಂಕ್‌ ಖರ್ಗೆಯವರು ಸಮ್ಮೇಳನದ ಸ್ಥಳವೊಂದರ ಬಳಿ ಮರದ ಕೆಳಗೆ ಕೂತು ಅವರ ಬೇಡಿಕೆಗಳನ್ನು ಆಲಿಸಿದ್ದಾರೆ. ಆಗಸ್ಟ್ 6ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಧರಣಿಯಲ್ಲಿ ಸರ್ಕಾರದ ಪರವಾಗಿ ಭಾಗವಹಿಸಿದ ಗೃಹ ಸಚಿವರಾದ ಪ್ರಿಯಾಂಕ ಖರ್ಗೆಯವರು ಸರ್ಕಾರದ ನಿಲುವಿನಂತೆ ಆಗಸ್ಟ್ 8 ಮತ್ತು 9ರಂದು ನಡೆಯಬೇಕಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ರದ್ದುಮಾಡುವುದಾಗಿ ತಿಳಿಸಿದರು. ಒಂದು ಸಮಿತಿಯನ್ನು ರಚಿಸಿ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.

agri strike ೦3

ಹೋರಾಟಗಾರರು ಸರ್ಕಾರದ ಮೇಲೆ ಭರವಸೆಯನ್ನಿಟ್ಟುಕೊಂಡಿದ್ದಾರೆ. ಅರ್ಹರಿಗೆ ಆದಷ್ಟು ಬೇಗ ಉದ್ಯೋಗ ದೊರಕಲಿ. ಅವರು ರೈತ ಸಮುದಾಯದ ಪರವಾಗಿ ಕಾಯಾ ವಾಚಾ ಮನಸಾ ದುಡಿದು ನಾಡಿಗೆ ಒಳಿತು ಮಾಡಲಿ ಎಂದು ಹರಸೋಣ. ಅನ್ನ ನೀಡುವ ರೈತ ಸಮುದಾಯ ಮತ್ತು ಅವರಿಗೆ ಮಾರ್ಗದರ್ಶನ ನೀಡುವ ಕೃಷಿ ಅಧಿಕಾರಿಗಳು ನಾಡಿನ ಜೀವನಾಡಿಗಳು. ಹಸಿರು ಕ್ರಾಂತಿಯು ಚಿರಾಯುವಾಗಲಿ. ಕರ್ನಾಟಕದ ಪ್ರಸಿದ್ಧ ಕೃಷಿ ವಿಜ್ಞಾನಿಗಳಾದ ರಾಗಿ ಲಕ್ಷ್ಮಣಯ್ಯ, ಭತ್ತದ ಮಹಾದೇವಪ್ಪ, ಕೋಳಿ ರಾಮಪ್ಪ, ಕಾಟನ್ ಕಾತರಕಿ, ಜೋಳದ ಕಜ್ಜರಿಯಂತಹವರನ್ನು ಸದಾ ಸ್ಮರಿಸೋಣ (ಓದಿರಿ: ಕರ್ನಾಟಕದ ಪ್ರಸಿದ್ದ ಕೃಷಿ ವಿಜ್ಞಾನಿಗಳು : : https://eedina.com/columns/famous-agricultural-scientists-of-
karnataka1015/2025-08-22/). ಸ್ವಾತಂತ್ರ್ಯ ಪೂರ್ವದಲ್ಲಿ ಕೋಲ್ಮಿಂಚಿನಂತಹ ವ್ಯಕ್ತಿತ್ವದೊಂದಿಗೆ ಕೃಷಿ ವಿಜ್ಞಾನಿಯಾಗಿದ್ದ ಡಾ. ಲೆಸ್ಲಿ ಚಾಲ್ರ್ಸ್ ಕೋಲ್ಮನ್‍ರವರನ್ನು ಮರೆಯದಿರೋಣ. ಪ್ರಗತಿಯ ಹಾದಿಯಲ್ಲಿ ರಾಜ್ಯದ ಕೃಷಿ ಕ್ಷೇತ್ರವು ನಿರಂತರವಾಗಿ ಮುನ್ನಡೆಯಲಿ. ಸಮಗ್ರ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳು ಶೀಘ್ರವಾಗಿ ರಚನೆಯಾಗಲಿ.

ಇದನ್ನೂ ಓದಿ ಕೃಷಿರಂಗ | ಕೃಷಿ ನಿರತ ಮಹಿಳೆಯರ ಸಬಲೀಕರಣಕ್ಕೊಂದು ಸಂಶೋಧನಾ ಯೋಜನೆ
ಇದನ್ನೂ ಓದಿ ಕೃಷಿರಂಗ | ಕೃಷಿ ವಿಜ್ಞಾನಗಳಲ್ಲಿ ಉನ್ನತ ಶಿಕ್ಷಣ ಅಧ್ಯಯನಕ್ಕೆ ಇಲ್ಲಿವೆ ಹತ್ತಾರು ಆಯ್ಕೆ

WhatsApp Image 2025 07 22 at 12.22.50 PM
ಪ್ರೊ. ಎಂ. ನಾರಾಯಣ ಸ್ವಾಮಿ
+ posts

ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಎಂ. ನಾರಾಯಣ ಸ್ವಾಮಿ
ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಾಯಾವತೀಜಿ, ಯುಪಿ ಚುನಾವಣೆಗೆ ಒಟ್ಟಾಗಿ ಸ್ಪರ್ಧಿಸೋಣ: ಸಂಸದ ಚಂದ್ರಶೇಖರ್ ಆಜಾದ್

ಉತ್ತರ ಪ್ರದೇಶದ 2027ರ ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದ (BSP)...

ಉಡುಪಿ | ಈಜಲು ತೆರಳಿದ ಯುವಕರು ನೀರುಪಾಲು; ಬೈಂದೂರಿನಲ್ಲಿ ಕೊಲೆ ಯತ್ನ ಆರೋಪಿಗಳ ಆತ್ಮಹತ್ಯೆ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಹೆರ್ಮುಂಡೆಯಲ್ಲಿ ಸ್ನೇಹಿತರೊಂದಿಗೆ ಈಜಲು...

ಬೀದರ್‌ | ಹಾಲಿಗಿಂತ ನೀರು ದುಬಾರಿಯಾಗುವ ಕಾಲ ದೂರವಿಲ್ಲ: ಮಾರುತಿ ಬೌದ್ಧೆ

ನಿಸರ್ಗದತ್ತವಾಗಿ ಉಚಿತವಾಗಿ ದೊರೆಯಬೇಕಾದ ನೀರು ಮುಂದೊಂದು ದಿನ ಹಾಲಿನ ದರಕ್ಕಿಂತಲೂ ದುಬಾರಿಯಾಗಿ...

ಬಿಹಾರದಲ್ಲಿ ಮತ್ತೊಂದು ಆಘಾತಕಾರಿ ಕೃತ್ಯ: ಬೈಕ್ ತಡೆದು ಅಪ್ರಾಪ್ತರ ಮೇಲೆ ಗೂಂಡಾಗಿರಿ

ನೆತ್ತಿಯ ಮೇಲೆ ಸೂರ್ಯ ಉರಿಯುತ್ತಿದ್ದ ಆ ಮಧ್ಯಾಹ್ನ, ವಾತಾವರಣದಲ್ಲಿ ವಿಚಿತ್ರವಾದ ಮೌನ...